ಬಾಲ್ಯದಿಂದಲೇ ಕೃಷಿ ಕಾಯಕವನ್ನು ಮಾಡಿಕೊಂಡು ಕೃಷಿ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರೊಂದಿಗೆ ಸಮಗ್ರ ಬೆಳೆಗಳನ್ನು ಬೆಳೆಸಿರುವ ಮೂಡುಬಿದಿರೆ ಅಂಬೂರಿಯ ಪ್ರಗತಿಪರ ಕೃಷಿಕ ನಾಗರಾಜ ಶೆಟ್ಟಿ ಅವರ ಸಪ್ತಗಿರಿ ಕೃಷಿ ಧಾಮಕ್ಕೆ ವಿಶ್ವ ವಿದ್ಯಾನಿಲಯದ ಸಮಗ್ರ ಕೃಷಿಯ ರಾಜ್ಯ ಮಟ್ಟದ ತಂಡ ಭೇಟಿ ನೀಡಿ 88 ಅಂಕಗಳನ್ನು ನೀಡುವುದರೊಂದಿಗೆ ಕರ್ನಾಟಕ ರಾಜ್ಯ ಸರಕಾರದಿಂದ ಕೃಷಿ ಕ್ಷೇತ್ರದಲ್ಲಿನ ಸರ್ವಾಂಗೀಣ ಸಾಧನೆಗಾಗಿ ನೀಡಲ್ಪಡುವ 2023-24ನೇ ಸಾಲಿನ ರಾಜ್ಯ ಮಟ್ಟದ ‘ಉದಯೋನ್ಮುಖ ಕೃಷಿ ಪಂಡಿತ’ ಪ್ರಶಸ್ತಿ ಗೆ ಆಯ್ಕೆ ಮಾಡಿದೆ.

ಕೃಷಿ ಕ್ಷೇತ್ರದಲ್ಲಿ ವಿನೂತನ ಹಾಗೂ ಹೊಸ ಮತ್ತು ಸೃಜನಾತ್ಮಕ ಅನ್ವೇಷಣೆಯ ಕಾರ್ಯಗಳೊಂದಿಗೆ ಸಾಧನೆ ಮೆರೆದ ರೈತರಿಗೆ ಈ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಈ ಪ್ರಶಸ್ತಿಯೊಂದಿಗೆ 50ಸಾವಿರ ನಗದು ಬಹುಮಾನವನ್ನು ಕೂಡ ನೀಡಲಾಗುತ್ತಿದೆ.
ಅಂಬೂರಿ ನಾಗರಾಜ ಶೆಟ್ಟಿ ಅವರು ತನ್ನ ಕೃಷಿ ಕ್ಷೇತ್ರದಲ್ಲಿ ಬಹು ವಿಧದ ಬೆಳೆಗಳನ್ನು ಅನುಷ್ಠಾನಗೊಳಿಸಿ ಉತ್ಪತ್ತಿ ಪಡೆಯುತ್ತಿರುವುದಲ್ಲದೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತನ್ನ ಕೃಷಿ ಕ್ಷೇತ್ರದಲ್ಲಿನ ಸಾಧನೆಯಿಂದ ಗಮನ ಸೆಳೆಯುತ್ತಿದ್ದಾರೆ.






