ಜ್ವರ ಉಲ್ಬಣಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟದಲ್ಲಿದ್ದ ನವ ವಿವಾಹಿತ ಶದಾಬ್ ಬುಧವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.
ಶದಾಬ್ ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿದ್ದು ಹತ್ತು ತಿಂಗಳ ಹಿಂದಷ್ಟೇ ಶಿರ್ತಾಡಿ ಸಮೀಪದ ಮಕ್ಕಿಯ ಯುವತಿಯನ್ನು ಮದುವೆಯಾಗಿದ್ದ.ಆಕೆ ಇದೀಗ ನಾಲ್ಕು ತಿಂಗಳ ಗರ್ಭಿಣಿ.
ಒಂದೇ ಮನೆಯ ಇಬ್ಬರು ಅವಳಿ ಜವಳಿ ಹೆಣ್ಮಕ್ಕಳನ್ನು ಒಂದೇ ಮನೆಯ ಅಣ್ಣ ತಮ್ಮಂದಿರಿಗೆ ಮದುವೆ ಮಾಡಿ ಕೊಡಲಾಗಿತ್ತು. ಆ ಪೈಕಿ ಶದಾಬ್ ಮರಣಹೊಂದಿದ್ದಾರೆ.
ನವದಂಪತಿಯ ವೈವಾಹಿಕ ಜೀವನ ಸುಖಮಯವಾಗಿ ಸಾಗುತ್ತಿರಲು,ಪತ್ನಿ ಗರ್ಭಿಣಿಯಾದ ಸಂತಸದಲ್ಲಿರುವಾಗಲೇ ಶದಾಬ್ ಗೆ ಶುರುವಾದ ಸಣ್ಣ ಜ್ವರವೊಂದು ಉಲ್ಬಣಗೊಂಡು ಮಣಿಪಾಲ ಆಸ್ಪತ್ರೆಯ ಐಸಿಯುನಲ್ಲಿ ಕಳೆಯುವಂತೆ ಮಾಡಿತ್ತು.
ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದ ಶದಾಬ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಚಿಕಿತ್ಸೆಗಾಗಿ ದೊಡ್ಡ ಮಟ್ಟದ ಹಣದ ಅಗತ್ಯವಿರುವಾಗ ಕಾರುಣ್ಯ ನಿಧಿ ಕರ್ನಾಟಕ ಟ್ರಸ್ಟ್ ಮುಂದೆ ಬಂದು ಚಿಕಿತ್ಸೆಗೆ ಬೇಕಾಗುವಷ್ಟು ಹಣವನ್ನು ವಾಟ್ಸಾಪ್ ಗ್ರೂಪ್ ಗಳ ಮೂಲಕ ಪ್ರಕಟಿಸಿ ಸಂಗ್ರಹಿಸಿ ನೆರವಾಗಿತ್ತು.ಸಹೃದಯಿ ದಾನಿಗಳು ಈ ಬಡ ಚಾಲಕನ ಚಿಕಿತ್ಸೆಗೆ ಸ್ಪಂದಿಸಿ ಸಹಾಯ ಮಾಡಿದ್ದರು.
ಆದರೆ ಶದಾಬ್ ಮೃತಪಟ್ಟಿದ್ದು ಬಡ ಕುಟುಂಬದ ಹೆಣ್ಣು ಮತ್ತು ಇಡೀ ಕುಟುಂಬ ಕಣ್ಣೀರಿನಲ್ಲಿ ದಿನಕಳೆಯುವಂತಾಗಿದೆ.







































