ಸುದೀರ್ಘ ವರ್ಷಗಳ ವೈದ್ಯಕೀಯ ಸೇವೆಗಾಗಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತರಾಗಿರುವ ಖ್ಯಾತ ಮಕ್ಕಳ ತಜ್ಞ, ಮೂಡುಬಿದಿರೆ ಮೂಲದವರಾಗಿದ್ದು, ಪುಣೆಯಲ್ಲಿ ಬೇಬಿ ಫ್ರೆಂಡ್ ಕ್ಲಿನಿಕ್ ಹೊಂದಿರುವ ಡಾ.ಸುಧಾಕರ ಶೆಟ್ಟಿ ಅಭಿನಯದ ” ಹೇ ಪ್ರಭು ” ಕನ್ನಡ ಚಿತ್ರ ನವೆಂಬರ್ 7 ರಂದು ಬಿಡುಗಡೆಗೊಳ್ಳಲಿದೆ.
ವೆಂಕಟ್ ಭಾರದ್ವಾಜ್ ಅವರು ನಿರ್ದೇಶಿಸಿರುವ ಈ ಬಹುನಿರೀಕ್ಷಿತ ‘ ಹೇ ಪ್ರಭು’ ಚಿತ್ರದ ” ಎದ್ದೇಳೋ ಈಗ” ಹಾಡು ಈಗಾಗಲೇ ಬಿಡುಗಡೆಗೊಂಡಿದ್ದು ಬಿಡುಗಡೆಯಾದ ಜೆಲವೇ ಗಂಟೆಗಳಲ್ಲಿ ದೊಡ್ಡ ಸಂಖ್ಯೆಯ ಸಂಗೀತಾಭಿಮಾನಿಗಳ ಮನಗೆದ್ದಿದೆ.

ತೇಜಸ್ವಿ ಹರಿದಾಸ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡು ಆಸೆ, ಆತ್ಮವಿಶ್ವಾಸ ಮತ್ತು ಹೋರಾಟದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.
ವೆಂಕಟ್ ಭಾರದ್ವಾಜ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಜಯವರ್ಧನ್, ಸಂಹಿತಾ ವಿನ್ಯಾ,ಯಮುನಾ ಶ್ರೀನಿಧಿ,ಗಜಾನನ ಹೆಗ್ಡೆ, ಲಕ್ಷ್ಮಣ ಶಿವಶಂಕರ,ಡಾ.ಪ್ರಮೋದ್, ಹರಿ ಧನಂಜಯ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ.
ಡಾ.ಸುಧಾಕರ ಶೆಟ್ಟಿ ಅವರು ಚಿತ್ರವನ್ನು ಪ್ರಸ್ತುತಪಡಿಸಿ ನಟಿಸಿದ್ದಾರೆ.
ಅಂದಹಾಗೆ ಡಾ.ಸುಧಾಕರ ಶೆಟ್ಟಿ ಅವರು ಚಿತ್ರದಲ್ಲಿ ನಟಿಸುವುದು ಇದೇ ಮೊದಲೇನಲ್ಲ. 40 ವರ್ಷಗಳ ಹಿಂದೆಯೇ ಅಂದರೆ 1983 ರಲ್ಲಿ ಕನ್ನಡ ಚಿತ್ರರಂಗದತ್ತ ಆಕರ್ಷಿತರಾಗಿ ಒಂದು ವರ್ಷ ಉದಯಕಲಾನಿಕೇತನ್ ನಲ್ಲಿ ನಟನಾ ತರಬೇತಿ ಪಡೆದಿದ್ದಾರೆ. ಖ್ಯಾತ ನಟ ಪ್ರಕಾಶ್ ರೈ ಹಾಗೂ ವೇಣುಗೋಪಾಲ್ ಅವರೊಂದಿಗೆ ಅಭಿನಯ ತರಂಗದಲ್ಲೂ ತರಬೇತಿ ಪಡೆದವರು. ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿ ಅನುಭವವಿರುವವರು. ಇದೀಗ 40 ವರ್ಷಗಳ ಬಳಿಕ ಮತ್ತೆ ಬಣ್ಣ ಹಾಕಿರುವ ಡಾ.ಸುಧಾಕರ ಶೆಟ್ಟಿ ಅವರು ಈ ಚಿತ್ರದ ಬಗ್ಗೆ ಯಶಸ್ಸಿನ ವಿಶ್ವಾಸದಲ್ಲಿದ್ದಾರೆ.ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು ಕೂಡಾ ಈ ಚಿತ್ರದ ಬಗ್ಗೆ ಹೊಸನಿರೀಕ್ಷೆ ಇಟ್ಟುಕೊಂಡಿದ್ದು ಪ್ರೇಕ್ಷಕರ ಮನಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ಲೋಕದ ಸುತ್ತ ಹೆಣೆಯಲಾದ ಒಂದು ಸುಂದರ ಕಥೆಯನ್ನೊಳಗೊಂಡ ಈ ಚಿತ್ರದ ಬಗ್ಗೆ ನೋಡಿಯೇ ತಿಳಿಯಬೇಕಿದೆ. ಚಿತ್ರ ಪ್ರೇಮಿಗಳು ” ಹೇ ಪ್ರಭು” ವಿಗೆ ಪ್ರೋತ್ಸಾಹ ನೀಡಬೇಕೆಂದು ಸುಧಾಕರ ಶೆಟ್ಟಿ ಅವರು ವಿನಂತಿಸಿದ್ದಾರೆ.





