‘ಶ್ರೀನಾಥ್ ಸುವರ್ಣ ಹೀಗೆ ಮಾಡಿಕೊಳ್ಳಬಾರದಿತ್ತು, ಆರ್ಥಿಕ ಸಮಸ್ಯೆ ಇಲ್ಲದವರ್ಯಾರು? ಅದಕ್ಕೆ ಆತ್ಮಹತ್ಯೆಯೊಂದೇ ಪರಿಹಾರನಾ?.. ಹೀಗಂತ ಮಾತಾಡಿಕೊಳ್ಳುವವರೇ ಹೆಚ್ಚು.
ಆತ ಆರ್ಥಿಕವಾಗಿ ಸೋತಿರಬಹುದು,ಆದರೆ ಬೇರಾವ ವಿಷಯದಲ್ಲೂ ಸೋತಿರದ ಮನುಷ್ಯ. ಅದೆಷ್ಟೋ ಅಸ್ವಾಭಾವಿಕ ಸಾವುಗಳು ಸಂಭವಿಸಿದಾಗ ಆಸ್ಪತ್ರೆ, ಪೊಲೀಸ್ ಠಾಣೆ ಎಂದು ಓಡಾಡಿದ್ದವ.ಅದೆಷ್ಟೋ ಬಡ ಜನರಿಗೆ ನೆರವಾಗಿದ್ದವ. ಆದರೆ ವಿಧಿಯಾಟವೇ ಬೇರೆ.ಆಯುಷ್ಯ ಮುಗಿದಾಗ ಯಾರಿಂದ ಏನೂ ಮಾಡಲು ಅಸಾಧ್ಯ.ಸಾವಿಗೆ ಇದೊಂದು ಕಾರಣವಷ್ಟೆ.
ನಿನ್ನೆಯಲ್ಲ ಮೊನ್ನೆ,ಅಂದರೆ ಬುಧವಾರ ಪಡುಮಾರ್ನಾಡು ಪಂಚಾಯತ್ ನಲ್ಲಿ ನಡೆದ ಸಭೆಯಲ್ಲಿ ಅವರು ಪಾಲ್ಗೊಂಡಿದ್ದರು. ಅದು ಕೊನೆಯ ಸಭೆಯಾಗಿರಬಹುದು ಎಂದು ಇತರ ಸದಸ್ಯರೂ ಭಾವಿಸಿದ್ದರು. ಯಾಕೆಂದರೆ ತಮ್ಮ ಅಧಿಕಾರಾವಧಿ ಮುಕ್ತಾಯ ಕಾಣುತ್ತಾ ಬಂದಿದೆ.ಆದರೆ ಶ್ರೀನಾಥ್ ಪಾಲಿಗೆ ಅದುವೇ ಕೊನೆಯ ಸಭೆ.
ಆ ಸಭೆಯಲ್ಲಿ ಪಾಲ್ಗೊಂಡಿದ್ದ ಶ್ರೀನಾಥ್ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿದ್ದಾರೆ.
ಯಾವ ಸ್ಮಶಾನದತ್ತ ತೆರಳಿ ನೇಣಿಗೆ ಕೊರಳೊಡ್ಡಿಕೊಂಡರೋ ಆ ಸ್ಮಶಾನ ಇದೇ ಶ್ರೀನಾಥ್ ಅವರ ಮುತುವರ್ಜಿಯಿಂದ ಆಗಿತ್ತೆನ್ನುವುದು ವಿಶೇಷ.
ಬೆಳುವಾಯಿ, ಪಡುಮಾರ್ನಾಡು ಪರಿಸರದಲ್ಲಿ ಸಾಕಷ್ಟು ಜನಪ್ರಿಯರಾಗಿ, ಕೆಲವರ ಪಾಲಿಗೆ ಆಪತ್ಬಾಂಧವರಾಗಿದ್ದ ಶ್ರೀನಾಥ್ ಅವರ ಸಾವು ಅಪಾರ ಬೇಸರ ಉಂಟುಮಾಡಿದೆ.
ಮೊನ್ನೆಯ ದಿನ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದ ಶ್ರೀನಾಥ್ ಅವರ ಬಗ್ಗೆನೇ ಇಂದು ಚರ್ಚೆ ಮಾಡುವಂತಾಗಿದೆ.






