ಇದೊಂದು ಅಪರೂಪದ ಪ್ರಸಂಗ ಮಾರ್ರೆ. ‘ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ’ ಅಂತ ಹಳೇಗಾದೆ. ಆದರೆ ಹೆಚ್ಚಿನ ಜಗಳ ಉಂಡು ಮಲಗಿದ ನಂತರವೇ ನಡೆದದ್ದು. ಅದರಲ್ಲೂ ಮೊಬೈಲ್ ಬಂದ ನಂತರ ಅದರ ಲಾಕ್ ಓಪನ್ ಮಾಡಿ ಕೊಡದ ಗಂಡನ ಜೊತೆ ಜಗಳ ಮಾಡಿದ ಅದೆಷ್ಟೋ ಉದಾಹರಣೆಗಳಿದೆ.ಅದು ಎಲ್ಲೂ ಪ್ರಚಾರ ಪಡೆದುಕೊಳ್ಳುವುದಿಲ್ಲವಷ್ಟೆ!
ಇದು ಅದಕ್ಕಿಂತಲೂ ಡಿಫರೆಂಟಾದ ಸ್ಟೋರಿ. ನಮ್ಮದೇ ಪಕ್ಕದ ಬಂಟ್ವಾಳ ಕ್ರಾಸ್ ರೋಡ್ (ಬಿ.ಸಿ.ರೋಡ್)ನಲ್ಲಿ ನಡೆದ ಘಟನೆ.
ಗಂಡ ಹೆಂಡತಿ ನಡುವೆ ಅದ್ಯಾವುದೋ ವಿಷಯಕ್ಕೆ ಗಲಾಟೆಯಾಗಿದೆ. ಆಕೆಯ ಕೋಪ ಎಷ್ಟಿತ್ತೆಂದರೆ ಕೈ ಹಿಡಿದವನ ಕೈ ಯನ್ನೇ ಕಡಿಯಬೇಕೆಂದು ನಿರ್ಧರಿಸಿದ್ದಳು.
ಗಂಡ ಕೃಷ್ಣಕುಮಾರ ಸೋಮಯಾಜಿಗೆ ಬಿ.ಸಿ.ರೋಡಿನಲ್ಲೊಂದು ಸೋಮಯಾಜಿ ಟೆಕ್ಸ್ ಟೈಲ್ಸ್ ಎಂಬ ಬಟ್ಟೆ ಅಂಗಡಿ ಇದೆ.ಬುಧವಾರ ಸಂಜೆ ಬುರ್ಖಾಧಾರಿ ಮಹಿಳೆಯೊಬ್ಬಳು ಆ ಅಂಗಡಿಗೆ ಹೋಗುತ್ತಾಳೆ.ಕ್ಯಾಶ್ ಕೌಂಟರಲ್ಲಿ ಕುಳಿತಿದ್ದ ಸೋಮಯಾಜಿ ಕಸ್ಟಮರ್ ಆಗಿರಬಹುದೆಂದು ಭಾವಿಸುತ್ತಾರೆ. ಆದರೆ ಆಕೆ ನೇರವಾಗಿ ಬಂದು ಕತ್ತಿಯಿಂದ ತನ್ನ ಕೈಗೆ ಕಡಿದಾಗಲೇ ಗೊತ್ತಾದದ್ದು ಅದು ಬ್ಯಾರ್ದಿ ಅಲ್ಲ…ತನ್ನದೇ ಮನೆಯ ಬ್ರಾಂದಿ ಎಂದು..!
ಹಾಗೆ ಬುರ್ಖಾ ಹಾಕಿಕೊಂಡು ಬಂದು ಗಂಡನ ಕೈ ಕಡಿದವಳ ಹೆಸರು ಜ್ಯೋತಿ ಸೋಮಯಾಜಿ. ಆ ಕೋಪ ದಾಂಪತ್ಯದ ಜ್ಯೋತಿಯನ್ನು ಆರಿಸಿದಂತಿದೆ.ಸದ್ಯ ಗಂಡ ಆಸ್ಪತ್ರೆಯಲ್ಲಿದ್ದಾರೆ- ಹೆಂಡತಿ ಪೊಲೀಸ್ ಠಾಣೆಯಲ್ಲಿದ್ದಾಳೆ !






