ಇದೆ, ಒಂದಲ್ಲ ಎರಡು ಅಂಬುಲೆನ್ಸ್ ಗಳಿದೆ. ಆದರೆ ಅದು ಕಳೆದೊಂದು ವರ್ಷದಿಂದ ಪ್ರಯೋಜನಕ್ಕೆ ಬಾರದೆ ಮೂಲೆ ಸೇರಿದೆ.
ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋದರೆ ಒಂದು ಬದಿಯಲ್ಲಿ ಎರಡು ಅಂಬುಲೆನ್ಸ್ ಗಳು ನಿಂತಿರುವುದು ಕಾಣುತ್ತದೆ.ಇದರಲ್ಲಿ ಒಂದು ಬೆದ್ರಕ್ಕೆ ಸಂಬಂಧಪಟ್ಟದ್ದು, ಮತ್ತೊಂದು ಸಿದ್ದಕಟ್ಟೆಗೆ ಸಂಬಂಧಪಟ್ಟದ್ದು.
ಸರಿಯಾದ ಚಾಲಕರಿಲ್ಲದೆ, 108 ಗೆ ಬೇಕಾದ ಸಿಬ್ಬಂದಿಗಳಿಲ್ಲದೆ ಸ್ಟಾರ್ಟ್ ಆಗದ ಅಂಬುಲೆನ್ಸ್ ಗಳು ನಿಂತಲ್ಲೇ ನಿಂತಿದೆ.
ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರವು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಬೇಕಿತ್ತು. ಆದರೆ ಸರಕಾರವು ಅದರ ಜವಾಬ್ದಾರಿಯನ್ನು ಆಳ್ವಾಸ್ ನವರ ಮಡಿಲಿಗೆ ಹಾಕಿಬಿಟ್ಟಿದೆ.
ಏನಾದರೂ ಅಪಘಾತ, ಅವಘಡಗಳು ಸಂಭವಿಸಿದಾಗ ,ಬಡಜನರಿಗೆ ಅನಾರೋಗ್ಯ ಕಂಡಾಗ ತುರ್ತಾಗಿ ಆಸ್ಪತ್ರೆಗೆ ದಾಖಲಿಸಲು 108 ಕ್ಕೆ ಕರೆಮಾಡಿ ಅದರಲ್ಲಿ ಸಾಗಿಸಲು ಸರಕಾರ ಮಾಡಿಕೊಟ್ಟ ಉತ್ತಮ ವ್ಯವಸ್ಥೆಯಿದು. ಆದರೆ ಸಿಬ್ಬಂದಿಗಳೇ ಇಲ್ಲದಿದ್ದರೆ ಏನು ಮಾಡೋದು ?
ಮೂಡುಬಿದಿರೆಯಂತಹ ಬೆಳೆಯುತ್ತಿರುವ ನಗರಕ್ಕೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಿಗೆ ನೂರ ಎಂಟರ ಅಗತ್ಯ ಖಂಡಿತಾ ಇದೆ.
ಈಗ ಸಾಕಷ್ಟು ಖಾಸಗಿ ಅಂಬುಲೆನ್ಸ್ ಗಳಿವೆ. ಅವುಗಳ ಸೇವೆ ಕೂಡಾ ದೊಡ್ಡದು.ಆದರೆ ಸರಕಾರಿ ಆಸ್ಪತ್ರೆಯ ಅಂಬುಲೆನ್ಸ್ ಗೆ ಕರೆ ಮಾಡಿದರೆ ಒಂದಾ ಕಿನ್ನಿಗೋಳಿಯಿಂದ ಬರಬೇಕು ಅಥವಾ ವೇಣೂರಿನಿಂದ ಬರಬೇಕು.ಅದು ಕೂಡಾ ಅವೆರಡಕ್ಕೂ ಬೇರೆ ರೋಗಿಗಳನ್ನು ಕರೆದೊಯ್ಯಲಿದ್ದರೆ ಖಾಸಗಿಯವರಿಗೇ ಮೊರೆಹೋಗಬೇಕಾದ ಅನಿವಾರ್ಯತೆ.
ಉಳ್ಳವರು ಹೋಗುತ್ತಾರೆ, ಬಡವರು ದೂರದ ಮಂಗಳೂರು, ಮಣಿಪಾಲಕ್ಕೆ ಹೋಗಬೇಕಾದರೆ ಏನು ಮಾಡಲಿ ?
ವ್ಯವಸ್ಥೆಗಳಿದ್ದರೂ ಸಿಬ್ಬಂದಿಗಳ ಕೊರತೆ ಎದುರಿಸುತ್ತಿರುವ ಇಲ್ಲಿನ ಅಂಬುಲೆನ್ಸ್ ಗಳು ಸಾರ್ವಜನಿಕ ಸೇವೆಗೆ ಮತ್ತೆ ರೆಡಿಯಾಗುವಂತೆ ಸಂಬಂಧಪಟ್ಟ ಮೇಲಾಧಿಕಾರಿಗಳು ತುರ್ತಾಗಿ ವ್ಯವಸ್ಥೆ ಮಾಡಬೇಕಿದೆ.






