ಕಾಶಿಪಟ್ಣ ದಾರುನ್ನೂರ್ ಶಾಲಾ ಕಟ್ಟಡದ ಉದ್ಘಾಟನೆ. ಶಿಕ್ಷಣದ ಜೊತೆಗೆ ಮಾನವೀಯತೆ, ಸೇವಾ ಮನೋಭಾವದ ವ್ಯಕ್ತಿತ್ವ ರೂಪಿಸಿಕೊಳ್ಳಿ: ಯು.ಟಿ.ಖಾದರ್

Picture of Namma Bedra

Namma Bedra

Bureau Report

“ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಮಾನವೀಯತೆ ಮತ್ತು ಸೇವಾ ಮನೋಭಾವ ರೂಪಿಸಿಕೊಳ್ಳಬೇಕು, ವಿದ್ಯಾರ್ಥಿಗಳು ಬಲಿಷ್ಠರಾದರೆ ದೇಶ ಬಲಿಷ್ಠವಾಗಲು ಸಾಧ್ಯ” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಯು.ಟಿ.ಖಾದರ್ ಹೇಳಿದರು.
ಶಹೀದ್ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಫೌಂಡೇಶನ್ ನ ಕಾಶಿಪಟ್ಣದ ದಾರುನ್ನೂರ್ ಎಜುಕೇಶನ್ ಸೆಂಟರ್ ನ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಶಾಸಕರು,ಸಚಿವರು ವಿಧಾನಸಭೆಯಲ್ಲಿ ಕುಳಿತು ಮಾತನಾಡಿದರೆ,ಕೇಂದ್ರದ ಪ್ರಮುಖರು ಲೋಕಸಭೆಯಲ್ಲಿ ಕುಳಿತು ಮಾತನಾಡಿದರೆ ದೇಶ ಬಲಿಷ್ಠವಾಗಲ್ಲ, ನಮ್ಮ ಶಿಕ್ಷಣ ವ್ಯವಸ್ಥೆ, ವಿದ್ಯಾರ್ಥಿಗಳು ಬಲಿಷ್ಢರಾದಾಗ ಮಾತ್ರ ಸಾಧ್ಯ, ಆ ನಿಟ್ಟಿನಲ್ಲಿ ಶಿಕ್ಷಣವೇ ಮುಖ್ಯವಾಗಲಿ ಎಂದ ಅವರು,ಸಮಾಜ ಕಟ್ಟುವ ಕೆಲಸವಾಗಬೇಕೇ ಹೊರತು ಸಮಾಜ ಒಡೆಯುವ ಕೆಲಸವಾಗಬಾರದು ಎಂದರು.
12 ವರ್ಷಗಳ ಹಿಂದೆ ಒಂದು ಬರಡು ಭೂಮಿಯಂತಿದ್ದ ಕಾಶಿಪಟ್ಣದ ದಾರುನ್ನೂರ್ ನ ಈ ಪ್ರದೇಶವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುತ್ತಿರುವುದು ಸಂತಸದ ಸಂಗತಿ, ಇಲ್ಲಿನ ಅಭಿವೃದ್ಧಿಗೆ ಸದಾ ಸಹಕಾರ ನೀಡುವುದಾಗಿ ಹೇಳಿ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಬಿ.ಎಂ.ಶರೀಫ್ ಹಾಜಿ ವೈಟ್ ಸ್ಟೋನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೆನಪೋಯ ಅಬ್ದುಲ್ಲಾ ಕುಞ್ಞಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂಸ್ಥೆಗೆ ಯಶಸ್ಸನ್ನು ಹಾರೈಸಿದರು.


ಕಾಶಿಪಟ್ಣ ಗ್ರಾ.ಪಂ.ಮಾಜಿ ಅಧ್ಯಕ್ಷ ಸತೀಶ್ ಕೆ.ಅವರು ಮಾತನಾಡಿ ‘ ದಾರುನ್ನೂರ್ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿರುವುದು ನಮ್ಮ ಕಾಶಿಪಟ್ಣಕ್ಕೆ ಹೆಮ್ಮೆಯ ವಿಷಯ, ಖಾಝಿ ತ್ವಾಖಾ ಉಸ್ತಾದ್ ಅವರು ಈ ಸಂಸ್ಥೆಗೆ ಬಹಳಷ್ಟು ಶ್ರಮಿಸಿದ್ದಾರೆ, ಅವರು ಶೀಘ್ರ ಗುಣಮುಖರಾಗಲಿ’ ಎಂದು ಹಾರೈಸಿದರು.
ಸಂಸ್ಥೆಯ ಉಪಾಧ್ಯಕ್ಷರುಗಳಾದ ಹಾಜಿ ಇಬ್ರಾಹಿಂ ಕೋಡಿಜಾಲ್,ಮೆಟ್ರೋ ಶಾಹುಲ್ ಹಮೀದ್ ಹಾಜಿ,ಅಬ್ದುಲ್ ಸಮದ್ ಹಾಜಿ,ಶಾಲಿ ತಂಙಳ್, ಶಾಕಿರ್ ಪರಂಗಿಪೇಟೆ,ಅಬೂಬಕ್ಕರ್ ಸಿ.ಆರ್, ಆಸಿಫ್ ಡೀಲ್ಸ್, ಎನ್.ಎಸ್.ಕರೀಮ್, ಫೈಝಲ್, ನಝೀರ್ ಅಝ್ಹರಿ,ಮೊಯಿದಿನಬ್ಬ ಹಾಜಿ,ಶಾಫಿ ಮೂಲರಪಟ್ಣ,ಪ್ರಾಂಶುಪಾಲರಾದ ಮುಹೀನುದ್ದೀನ್ ಹುದವಿ,ಮೆನೇಜರ್ ಅಬ್ದುಲ್ ಹಕೀಮ್,ಪಿಯುಸಿ ಪ್ರಾಂಶುಪಾಲರಾದ ಮುಹಮ್ಮದ್ ಅನ್ವರ್, ದಾವೂದ್ ಕಾಶಿಪಟ್ಣ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಶಕೀಲ್ ಅವರ ಕಿರಾಅತ್ ನೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸದರ್ ಮುದರ್ರಿಸ್ ಹುಸೈನ್ ರಹ್ಮಾನಿ ದುವಾ ನೆರವೇರಿಸಿದರು.ಕೋಶಾಧಿಕಾರಿ ಡಿ.ಎ.ಉಸ್ಮಾನ್ ಹಾಜಿ‌ ಏರ್ ಇಂಡಿಯಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.
ವಿದ್ಯಾರ್ಥಿ ಸಂಘಟನೆಯ ನಾಯಕ ಮುಝಮ್ಮಿಲ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಸ್ವಾಗತಿಸಿ ಜೊತೆ ಕಾರ್ಯದರ್ಶಿ ಫಕೀರಬ್ಬ ಮಾಸ್ಟರ್ ವಂದಿಸಿದರು.
ಸಚಿವರಾದ ಯು.ಟಿ.ಖಾದರ್, ಯೆನಪೋಯ ಅಬ್ದುಲ್ಲಾ ಕುಞ್ಞಿ, ಸತೀಶ್ ಕಾಶಿಪಟ್ಣ, ದಾವೂದ್ ಕಾಶಿಪಟ್ಣ ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಿ ಅಭಿನಂದಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top