ಶಿರ್ತಾಡಿ ಆಸ್ಪತ್ರೆಗೆ ವಾರಕ್ಕಿಬ್ಬರು ವೈದ್ಯರು *ಸಚಿವ ಖಾದರ್ ಸೂಚನೆ,ಹೋರಾಟಗಾರರ ಶ್ರಮ,ಮಾಧ್ಯಮಗಳ ವರದಿಯ ಪ್ರತಿಫಲ

Picture of Namma Bedra

Namma Bedra

Bureau Report

ಶಿರ್ತಾಡಿ ಗವರ್ನಮೆಂಟ್ ಆಸ್ಪತ್ರೆಯಲ್ಲಿ ಖಾಯಂ ರೋಗಿಗಳಿದ್ದಾರೆ, ವೈದ್ಯರಿಲ್ಲ’ ಎನ್ನುವ ಟೈಟಲ್ನಡಿ ‘ನಮ್ಮ ಬೆದ್ರ’ ಮೊಟ್ಟಮೊದಲು ವರದಿ ಮಾಡಿತ್ತು.ಉಳಿದ ಮಾಧ್ಯಮಗಳೂ ಬೇರೆ ಬೇರೆ ಆಂಗಲ್ ಗಳಲ್ಲಿ ವರದಿ ಮಾಡಿತ್ತು.


ಇದಾದ ಬಳಿಕ ಶಿರ್ತಾಡಿ ಆಸ್ಪತ್ರೆಗೆ ಮಹಿಳಾ ಅಧಿಕಾರಿಯೋರ್ವರು ಭೇಟಿ ನೀಡಿದಾಗ ಶಿರ್ತಾಡಿಯ ರಿಕ್ಷಾ ಚಾಲಕರು ನಮ್ಮ ವರದಿಯ ಹಿನ್ನೆಲೆಯಲ್ಲಿ ಅವರ ಗಮನಕ್ಕೆ ತಂದು ವೈದ್ಯರ ನೇಮಕಕ್ಕೆ ಆಗ್ರಹಿಸಿದ್ದರು.ಯಶೋಧರ ಪೂಜಾರಿ, ಸತೀಶ್ ಪೂಜಾರಿ ಸಹಿತ ಹಲವರು ಸಮಸ್ಯೆಗಳನ್ನು ವಿವರಿಸಿದ್ದರು.
ಕಾಶಿಪಟ್ಣ ದಾರುನ್ನೂರ್ ಗೆ ಆರೋಗ್ಯ ಸಚಿವ ಖಾದರ್ ಅವರು ಬರುತ್ತಾರೆ ಎಂದರಿತ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ರಕ್ಷಾ ಸಮಿತಿಯ ಸದಸ್ಯ, ಶಿರ್ತಾಡಿಯ ಸೂರಜ್ ಜೈನ್, ಜಯಶ್ರೀ ಹೊಟೇಲ್ ಮಾಲಕ ಸುರೇಶ್ ಅಂಚನ್, ವಿವಿಯನ್ ಪಿಂಟೊ ಅವರು ಶಿರ್ತಾಡಿ ಸುತ್ತ ತಿರುಗಾಡಿ ಸಚಿವರಿಗೆ ನೀಡುವ ಮನವಿಗೆ ಸಹಿ ಸಂಗ್ರಹಿಸಿ ಮನವಿ ನೀಡಿದರು.
‘ನಮ್ಮ ಆಸ್ಪತ್ರೆಗೆ ತಾವು ಭೇಟಿ ಕೊಡಲೇಬೇಕು, ನಮಗೆ ವೈದ್ಯರು ಬೇಕು,ಏನಾದರೂ ವ್ಯವಸ್ಥೆ ಮಾಡಿ’ ಅಂತ ಒತ್ತಾಯಿಸಿ ಅವರನ್ನು ಆಸ್ಪತ್ರೆಗೆ ಕರೆತರುವಲ್ಲಿ ಯಶಸ್ವಿಯಾದರು.
ಆಸ್ಪತ್ರೆಗೆ ಭೇಟಿ ನೀಡಿದ ಖಾದರ್ ಅವರು ಇಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಜಿಲ್ಲಾ ವೈದ್ಯಾಧಿಕಾರಿಯವರಿಗೆ ಕಾಲ್ ಮಾಡಿ ವಾರಕ್ಕೆ ಮೂರು ಮೂರು ದಿವಸಗಳಂತೆ ಇಬ್ಬರು ವೈದ್ಯರನ್ನು ನಿಯೋಜಿಸಲು ಸೂಚಿಸಿದ್ದರು.
ಅವರ ಸೂಚನೆಯಂತೆ ಇದೀಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರು ವಾರದ ಮೂರು ದಿನಗಳಲ್ಲಿ ಅಂದರೆ ಮಂಗಳವಾರ, ಬುಧವಾರ,ಶುಕ್ರವಾರ ಬೆಳುವಾಯಿಯ ವೈದ್ಯರಾಗಿರುವ ಡಾ.ಭರತ್ ಹಾಗೂ ಸೋಮವಾರ, ಗುರುವಾರ ಮತ್ತು ಶನಿವಾರದಂದು ವೇಣೂರಿನ ಆರೋಗ್ಯ ಕೇಂದ್ರದ ಗುತ್ತಿಗೆ ವೈದ್ಯಾಧಿಕಾರಿ ಡಾ.ಅನಘಾ ಅವರನ್ನು ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿದ್ದಾರೆ.
ಈ ಆದೇಶದಿಂದ ವಾರದ ಆರು ದಿನಗಳಲ್ಲಿ ಇಬ್ಬರು ವೈದ್ಯರು ಶಿರ್ತಾಡಿ ಆಸ್ಪತ್ರೆಯಲ್ಲಿ ಸೇವೆಗೆ ಲಭ್ಯರಿರುತ್ತಾರೆ.
ವೈದ್ಯರಿಲ್ಲದ ಶಿರ್ತಾಡಿ ಆಸ್ಪತ್ರೆಗೆ ವೈದ್ಯಾಧಿಕಾರಿಗಳನ್ನು ನಿಯೋಹಿಸಲು ಸೂಚಿಸಿದ ಸಚಿವ ಯು.ಟಿ.ಖಾದರ್, ಸಹಿ ಸಂಗ್ರಹಿಸಿ ಸಚಿವರನ್ನು ಆಸ್ಪತ್ರೆಗೆ ಕರೆಸಿ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವಂತೆ ಮಾಡಿದ ಸೂರಜ್ ಜೈನ್, ಸುರೇಶ್ ಅಂಚನ್,ವಿವಿಯನ್ ಪಿಂಟೊ, ಧನು, ರಿಕ್ಷಾ ಚಾಲಕರಿಗೆ ಶಿರ್ತಾಡಿಯ ಜನತೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top