ಇದು ಬೆದ್ರ ತಾಲೂಕಾಫೀಸಿನಲ್ಲಿ ಇಂದು ಕಂಡು ಬಂದ ದೃಶ್ಯ. ರಿಜಿಸ್ಟ್ರೇಷನ್ ಗೆಂದು ಬಂದಿದ್ದ ಅನಾರೋಗ್ಯ ಪೀಡಿತ ವೃದ್ಧೆಯೋರ್ವರು ಲಿಫ್ಟ್ ಇಲ್ಲದೆ ವೀಲ್ ಚೇರಲ್ಲೇ ಮೇಲೆ ಹೋಗಬೇಕಾದ ಅನಿವಾರ್ಯತೆ ಎದುರಾಯಿತು.
ಇಲ್ಲಿ ಲಿಫ್ಟ್ ವ್ಯವಸ್ಥೆ ಇದೆ.ಕೋಟಿ ರೂ.ಗಳನ್ನು ಖರ್ಚು ಮಾಡಿ ಒಂದು ಸುಂದರವಾದ ಆಡಳಿತ ಸೌಧ ನಿರ್ಮಾಣವಾಗುವಾಗ ಲಿಫ್ಟ್ ವ್ಯವಸ್ಥೆಯನ್ನು ಮಾಡದೇ ಇರಲಿಲ್ಲ.ಆದರೆ ಅದೀಗ ಕೆಟ್ಟುಹೋಗಿ ಕೆಲವು ದಿನಗಳೇ ಕಳೆದಿದೆ.
ಅಸಹಾಯಕರಿಗೆ, ವೃದ್ಧರಿಗೆ,ಅಂಗವಿಕಲರಿಗೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಲಿಫ್ಟ್ ವ್ಯವಸ್ಥೆಯನ್ನು ಮಾಡಲಾಗಿದ್ದರೂ ಕೆಟ್ಟು ಹೋದಾಗ ಅದನ್ನು ಸರಿಪಡಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತಂತಿದೆ.
ಇಂತಹ ಅಸಹಾಯಕರಿಗೆ ಲಿಫ್ಟ್ ಸೌಲಭ್ಯ ಸಿಗದಿದ್ದರೆ ಅದು ಇದ್ದರೇನು, ಇಲ್ಲದಿದ್ದರೇನು?
ಹಿಂದೊಮ್ಮೆ ಕೆಟ್ಟು ನಿಂತಾಗ ಶಾಸಕ ಕೋಟ್ಯಾನ್ ಅವರು ಇಲ್ಲಿನ ಅಧಿಕಾರಿಗಳನ್ನು ತರಾಟೆಗೆ ತಕೊಂಡು ಸರಿಪಡಿಸಿದ್ದರು. ಎಲ್ಲವನ್ನೂ ತಹಶಿಲ್ದಾರರನ್ನೇ ಕಾದರಾಗಲ್ಲ.ಇಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುವವರ ಸಂಖ್ಯೆಯೂ ಹೆಚ್ಚು ಇದೆ.ಹಾಗಾಗಿ ಈ ಲಿಫ್ಟ್ ವ್ಯವಸ್ಥೆಯನ್ನು ಸರಿಪಡಿಸಬೇಕಾದ ಜವಾಬ್ದಾರಿ ಸಬ್ ರಿಜಿಸ್ಟ್ರಾರ್ ಅವರಿಗೂ ಇದೆ.
ಕರ್ತವ್ಯದ ಜೊತೆಗೆ ಅಸಹಾಯಕರಿಗೆ ಸಹಾಯವಾಗುವಂತಹ ಕೆಲಸ ಮಾಡಿದಾಗ ಮಾತ್ರ ಒಳ್ಳೆಯ ಅಧಿಕಾರಿಗಳೆನಿಸಲು ಸಾಧ್ಯ.
ಈ ದಿನ ಈ ಅಸಹಾಯಕಿಯನ್ನು ಕಂಡು ಸಾಮಾಜಿಕ ಕಳಕಳಿಯುಳ್ಳ ಮಿತ್ತಬೈಲು ವಾಸುದೇವ ನಾಯಕ್ ಅವರು ಈ ಬಗ್ಗೆ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿಗಳಲ್ಲಿ ವಿಚಾರಿಸಿದ್ದಾರೆ.ಆದರೆ ಆಕಡೆಯಿಂದ ಯಾವ ಉತ್ತರವೂ ಬರದ ಕಾರಣ ಫೋಟೋ ತೆಗೆದು ‘ ನಮ್ಮಬೆದ್ರ’ ಕ್ಕೆ ಕಳುಹಿಸಿದ್ದಾರೆ.
ಕೆಟ್ಟು ನಿಂತ ಲಿಫ್ಟ್ ಸರಿಯಾಗುವವರೆಗೆ ಇಂತಹ ವರದಿ ನಮ್ಮಲ್ಲಿ ಬರುತ್ತಲೇ ಇರುತ್ತದೆ.








































