ಮೂಡಬಿದಿರೆ, ಸೆ. 18: ಪ್ರವಾದಿ ಮುಹಮ್ಮದ್ (ಸ) ಅವರ ಜೀವನ, ಸಂದೇಶ ಹಾಗೂ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಸೀರತ್ ಸಮಿತಿ, ಮೂಡಬಿದಿರೆ ವತಿಯಿಂದ ‘ಸೀರತ್ ಅಭಿಯಾನ 2026’ ಕಾರ್ಯಕ್ರಮವನ್ನು ಸೆಪ್ಟೆಂಬರ್ 25ರಂದು ಆಯೋಜಿಸಲಾಗಿದೆ.
ಮೂಡಬಿದಿರೆಯ ಕನ್ನಡ ಭವನದಲ್ಲಿ ಶುಕ್ರವಾರ ಸಂಜೆ 4 ಗಂಟೆಯಿಂದ 6.30ರವರೆಗೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮತ್ತು ಸಂದೇಶದ ವಿವಿಧ ಆಯಾಮಗಳ ಕುರಿತು ಮಾತನಾಡಲಿದ್ದಾರೆ.
ಮೂಡಬಿದಿರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿಗಳಾದ ಶ್ರೀ ವಿವೇಕ್ ಆಳ್ವ, ಎಮ್.ಐ.ಟಿ , ಮಣಿಪಾಲದ ಅಸೋಸಿಯೇಟ್ ಪ್ರೊಫೆಸರ್ ಗಳಾದ ಡಾ. ಜಮಾಲುದ್ದೀನ್ ಹಿಂದಿ, ಸಂಪಿಗೆ ಹೋಲಿ ಸ್ಪಿರಿಟ್ ಚರ್ಚ್‌ನ ಧರ್ಮಗುರುಗಳಾದ ಫಾ. ವಿನ್ಸೆಂಟ್ ಡಿಸೋಜ ಹಾಗೂ ಮೂಡಬಿದಿರೆ ಜೈನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾತ್ ಬಲ್ನಾಡ್ ಅವರು ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡದ ಖ್ಯಾತ ಕುರ್’ಆನ್ ಪ್ರವಚನಕಾರ, ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಜ.ಮುಹಮ್ಮದ್ ಕುಂಞಿಯವರು ವಹಿಸಲಿದ್ದಾರೆ.
ಸಮಾಜದಲ್ಲಿ ಪರಸ್ಪರ ಅರಿವು, ಸೌಹಾರ್ದತೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಸರ್ವ ಧರ್ಮೀಯ ಸ್ತ್ರೀ ಪುರುಷರು ಆದರದಿಂದ ಆಗಮಿಸಬೇಕೆಂದು ಸೀರತ್ ಸಮಿತಿ ಮನವಿ ಮಾಡಿದೆ.








































