ಕರುಣೆ,ಕ್ಷಮೆಯ ಜೊತೆಗೆ ಜಗತ್ತಿನ ಎಲ್ಲಾ ಜನರೂ ಸಮಾನರು ಎಂದು ಈ ಜಗತ್ತಿಗೆ ಹೇಳಿಕೊಟ್ಟವರು ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರರು, ಅವರ ಜೀವನ, ಆದರ್ಶಗಳನ್ನು ಮೈಗೂಡಿಸಿಕೊಂಡು ಹೋಗುವ ಅಗತ್ಯವಿದೆ,ಎಲ್ಲರೂ ಅವರವರ ಧರ್ಮಗಳನ್ನು ಅರ್ಥಮಾಡಿಕೊಂಡರೆ ಸಾಕು,ಸೌಹಾರ್ದತೆ ಉಳಿಯುತ್ತದೆ,ಇಂದಿನ ,ಮುಂದಿನ ಯುವಜನತೆ ಇದನ್ನು ತಿಳಿದುಕೊಳ್ಳಬೇಕು’ ಎಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್ ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅವರು ಹೇಳಿದರು.
ಮೂಡುಬಿದಿರೆಯ ಸೀರತ್ ಸಮಿತಿ ಕನ್ನಡ ಭವನದಲ್ಲಿ ಹಮ್ಮಿಕೊಂಡ ಪ್ರವಾದಿ ಮುಹಮ್ಮದ್ (ಸ.ಅ) ಅವರ ಜೀವನ ಮತ್ತು ಸಂದೇಶದ ಸಾರ್ವಜನಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಞ್ಞಿ ಅವರು ‘ಶ್ರೀ ಕೃಷ್ಣ, ಶ್ರೀ ರಾಮ,ಯೇಸು ಕ್ರಿಸ್ತ ,ಮುಹಮ್ಮದ್ ಪೈಗಂಬರ್ ಅವರಂತಹ ಮಹಾಪುರುಷರು,ದಾರ್ಶನಿಕರು ಜಗತ್ತಿಗೆ ಅರ್ಥಪೂರ್ಣ ಬದುಕಿನ ದಾರಿ ತೋರಿದವರು,ಅಂತವರ ಸಂದೇಶಗಳನ್ನು ತಿಳಿಯುವ ಅಗತ್ಯ ಇಂದಿನ ಕಾಲದಲ್ಲಿ ಪ್ರಸ್ತುತವಾಗಿದೆ ಎಂದರು.
ಪ್ರವಾದಿ ಮುಹಮ್ಮದ್ ಅವರ ಜೀವನ ತೆರೆದ ಪುಸ್ತಕದಂತೆ,ಅವರ ಜೀವನ ಚರಿತ್ರೆಯಲ್ಲಿ ಎಲ್ಲೂ ಕಪ್ಪುಚುಕ್ಕೆ ಕಾಣಲು ಸಾಧ್ಯವಿಲ್ಲ, ಜನರು ಹೇಗೆ ಬದುಕಬೇಕು,ಅದರಲ್ಲೂ ಹೇಗೆ ಅರ್ಥಪೂರ್ಣವಾಗಿ ಬದುಕಬೇಕೆಂದು ತೋರಿಸಿಕೊಟ್ಟವರು ಎಂದ ಅವರು ಎಲ್ಲರೂ ಎಲ್ಲರನ್ನೂ ಅರಿತುಕೊಳ್ಳಬೇಕಾದ ಅಗತ್ಯ ಇಂದಿನ ದಿನಗಳಲ್ಲಿದೆ ಎಂದರು.
ಮನುಷ್ಯ ಬಾಚಣಿಗೆಯ ಹಲ್ಲುಗಳಂತೆ ಎಂದು ಹೇಳಿದ್ದ ಪ್ರವಾದಿಯವರು ಭೂಮಿಯ ಮೇಲೆ ಬದುಕುವ ಪ್ರತಿಯೋರ್ವನೂ ಗೌರವಾರ್ಹನು ಎಂದು ಹೇಳಿದ್ದರು, ವೃದ್ಧ ತಂದೆ ತಾಯಿಯ ಸೇವೆ ಮಾಡುವವನನ್ನು ದೇವರು ಕುಷಿಪಡುತ್ತಾನೆ,ಪ್ರತಿಯೊಬ್ಬರೂ ಹರಿಯುವ ನೀರಿನಂತೆ ಬದುಕಬೇಕೆಂದು ತಿಳಿಸಿಕೊಟ್ಟವರು ಪ್ರವಾದಿ,ಪ್ರವಾದಿ ಹಾಗೂ ದಾರ್ಶನಿಕರ, ಮಹಾಪುರುಷರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಜೈನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ|ಪ್ರಭಾತ್ ಬಲ್ನಾಡ್ ಅವರು ಮಾತನಾಡಿ ‘ 1500 ವರ್ಷಗಳ ಹಿಂದೆ ಏನೂ ಶಿಕ್ಷಣ ಇಲ್ಲದ, ಬಡತನದ ಹಿನ್ನೆಲೆಯ ,ಯಾವ ಬ್ಯಾಕ್ ರೌಂಡೂ ಇಲ್ಲದೆ ಕೇವಲ 63 ವರ್ಷಗಳ ಕಾಲ ಬದುಕಿದ್ದ ಪ್ರವಾದಿಯವರ ಪ್ರಭಾವ ಇಂದಿಗೂ ಜಗತ್ತಿನಾದ್ಯಂತ ಇದೆಯೆಂದಾದರೆ ಅವರು ಮಾಡಿದ ಬದಲಾವಣೆ,ದುಧಾರಣೆ ಮತ್ತು ಸರಳ ಹಾಗೂ ಆದರ್ಶ ಜೀವನವೇ ಕಾರಣ’ ವೆಂದು ಹೇಳಿದರು.
ಮಣಿಪಾಲ್ ಎಮ್.ಐ.ಟಿ.ಯ ಅಸಿಸ್ಟೆಂಟ್ ಪ್ರೊಫೆಸರ್ ಡಾ|ಜಮಾಲುದ್ದೀನ್ ಹಿಂದಿ,ಸಂಪಿಗೆ ಚರ್ಚ್ ನ ಧರ್ಮಗುರುಗಳಾದ ರೆ.ಫಾ.ವಿನ್ಸೆಂಟ್ ಡಿಸೋಜ ಅವರು ಪ್ರವಾದಿಯವರ, ದಾರ್ಶನಿಕರ ಜೀವನ ಚರಿತ್ರೆಯ ಕುರಿತು, ಸೌಹಾರ್ದ ಬದುಕಿನ ಕುರಿತು ಮಾತನಾಡಿದರು.
ಅಹ್ಮದ್ ತಾಝಾ ಅವರ ಕಿರಾಅತ್ ನೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮೆಹಫೂಝ್ ಅವರು ಸ್ತುತಿಗೀತೆ ಹಾಡಿದರು.
ಸೀರತ್ ಕಮಿಟಿಯ ಉಪಾಧ್ಯಕ್ಷ ಅಬ್ದುಸ್ಸಲಾಮ್ ಬೂಟ್ ಬಝಾರ್ ಅವರು ಸ್ವಾಗತಿಸಿ ಕಾರ್ಯದರ್ಶಿ ಶೇಖ್ ನೂರುದ್ದೀನ್ ವಂದಿಸಿದರು. ಮುನೀರ್ ಪದ್ರೆಂಗಿ ಕಾರ್ಯಕ್ರಮ ನಿರೂಪಿಸಿದರು.
ಸೀರತ್ ಕಮಿಟಿಯ ಹಮೀದ್ ರಾಯಲ್, ಝಮೀರ್ ಫರ್ಹಾನ್,ಇರ್ಷಾದ್ ಎನ್ಜಿ, ಮುಹಮ್ಮದ್ ಆರಿಫ್,ನದೀಮ್, ಶಹಾಮ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











