ಶಿರ್ತಾಡಿಯ ದೈವಸ್ಥಾನ ಒಂದರ ಹೆಸರಿನಲ್ಲಿ ಮರಗಳ್ಳತನ ನಡೆಸುತ್ತಿದ್ದು ಈ ಬಗ್ಗೆ ಅರಣ್ಯಾಧಿಕಾರಿಗಳು ಮರಗಳ್ಳರ ವಿರುದ್ಧ ತನಿಖೆ ನಡೆಸಬೇಕೆಂದು ಕಾರ್ಮಿಕ ಮುಖಂಡ, ಕಾರ್ಮಿಕರ ವಿಮಾ ಆಸ್ಪತ್ರೆಯ ಕುಂದುಕೊರತೆ ಸಮಿತಿಯ ಸದಸ್ಯರಾದ ಸುದತ್ತ ಜೈನ್ ಶಿರ್ತಾಡಿ ಅವರು ಆಗ್ರಹಿಸಿದ್ದಾರೆ.
ಪುನರ್ ನಿರ್ಮಾಣಗೊಳ್ಳುತ್ತಿರುವ ಶಿರ್ತಾಡಿಯ ದೈವಸ್ಥಾನವೊಂದರ ಹೆಸರಲ್ಲಿ ಮರಗಳ್ಳರು ಬೆಲೆಬಾಳುವ ಮರಗಳನ್ನು ಕಡಿದು ಕಿಸೆತುಂಬಿಸಿಕೊಳ್ಳುತ್ತಿದ್ದಾರೆ,ನಿಜವಾಗಿ ಆ ದೈವಸ್ಥಾನಕ್ಕೆ ಮರದ ಅಗತ್ಯವೇ ಇಲ್ಲ,ಶಿರ್ತಾಡಿಯ ಕೋಟಿ ಮನೆಯೊಡೆಯನೊಬ್ಬನ ಸಹಕಾರದಿಂದ ಈ ಮರಗಳ್ಳತನ ನಡೆಯುತ್ತಿದ್ದು ಅರಣ್ಯಾಧಿಕಾರಿಗಳು ಜಾಣಮೌನ ವಹಿಸುತ್ತಿರುವುದು ನೋಡಿದರೆ ಅವರೂ ಶಾಮೀಲಾಗಿದ್ದಾರೆಂಬ ಸಂಶಯ ಮೂಡುತ್ತದೆ,ಮೇಲಾಧಿಕಾರಿಗಳು ಈಬಗ್ಗೆ ತನಿಖೆ ನಡೆಸಿ ಎಲ್ಲಿಯ ಮರಗಳು ಎಲ್ಲಿಗೆ ಹೋಗುತ್ತದೆ ಎನ್ನುವುದನ್ನು ಪತ್ತೆಹಚ್ಚಿ ಅರಣ್ಯನಾಶ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಶಿರ್ತಾಡಿ ಕಜೆ ಪರಿಸರದ ಪುದ್ದರಡ್ಕ ಎಂಬ ಮನೆಗೆ ಸಂಬಂಧಿಸಿದ ಕುಮ್ಕಿ ಹಾಗೂ ಪಟ್ಟಾ ಜಾಗದಿಂದ ಮರಗಳ್ಳತನ ಮಾಡಿದ್ದಾರೆ,ನನ್ನ ಹಿರಿಯರ ಜಾಗದಿಂದಲೂ ಮರಗಳು ಹೋಗಿದೆ,ಇದರ ಹಿಂದೆ ಇರುವ ಮರಗಳ್ಳರು ಯಾರು ಎನ್ನುವುದನ್ನು ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸುದತ್ತ ಜೈನ್ ಅವರು ಆಗ್ರಹಿಸಿದ್ದಾರೆ.











