ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಹಾಗೂ ಮಲೆನಾಡಿಗೆ ಸುಮಾರು 32,611 ಕೋಟಿ ರೂ.ಮೊತ್ತದ ಅನುದಾನವನ್ನು ವಿವಿಧ ಯೋಜನೆಗಳಿಗೆ ಘೋಷಿಸಲಾಗಿದ್ದು ಸುಮಾರು 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ತುಳುನಾಡಿನ ಮೂಲನಿವಾಸಿ ಸಮುದಾಯವಾದ ಆದಿದ್ರಾವಿಡ ಸಮುದಾಯದ ಬದುಕಿನಲ್ಲಿ ಬದಲಾವಣೆ ತರಬಹುದಾದ ಒಂದೇ ಒಂದು ಯೋಜನೆ ಅಥವಾ ಒಂದು ಬಿಡಿಗಾಸಿನಷ್ಟು ಅನುದಾನ ಘೋಷಿಸದಿರುವುದು ವಿಷಾದನೀಯ,ರಾಜ್ಯ ಕಾಂಗ್ರೆಸ್ ಸರಕಾರದ ಈ ನಡೆಯನ್ನು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಮೂಡುಬಿದಿರೆ ತಾಲೂಕು ಘಟಕ ಮತ್ತು ಅಲೇರಿ ಶ್ರೀ ಸತ್ಯಸಾರಮಾನಿ ಕಾನದ ಕಟದ ಮೂಲಕ್ಷೇತ್ರ ತಾಲೂಕು ಸಮಿತಿ ತೀವ್ರವಾಗಿ ಖಂಡಿಸಿದ್ದು ಈ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದೆ.
ಈಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಆದಿದ್ರಾವಿಡ ಸಮಾಜ ಸೇವಾ ಸಂಘದ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಶಿವರಾಮ್ ಹಾಗೂ ಅಲೇರಿ ಶ್ರೀ ಸತ್ಯಸಾರಮಾನಿ ಕಾನದ ಕಟದ ಮೂಲಕ್ಷೇತ್ರದ ಅಧ್ಯಕ್ಷ ಶ್ರೀನಿವಾಸ್ ಪುಚ್ಚಮೊಗರು ಅವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ರಾಜ್ಯದ ಆರು ಜಿಲ್ಲೆಗಳ 27 ತಾಲೂಕುಗಳ 24 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯವು 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಅಧಿಕವಿರುವ ಪರಿಶಿಷ್ಟ ಜಾತಿ,ಪಂಗಡ ಸಮುದಾಯಗಳಲ್ಲಿ ಶೇ.70 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಆದಿದ್ರಾವಿಡ ಸಮುದಾಯವನ್ನು ನಿರ್ಲಕ್ಷಿಸಿರುವುದು ತೀರಾ ಖಂಡನೀಯ,ಇದೇರೀತಿ ಸಮುದಾಯವನ್ನು ನಿರ್ಲಕ್ಷಿಸುತ್ತಾ ಹೋದರೆ ಸಮುದಾಯವು ಸಂಘಟಿತವಾಗಿ ತನ್ನ ಹಕ್ಕುಗಳಿಗಾಗಿ ದಿಟ್ಟ ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲವೆಂದು ಎಚ್ಚರಿಸಿದ್ದಾರೆ.
ಆದಿದ್ರಾವಿಡ ಸಮುದಾಯದ ಆರಾಧ್ಯ ಕುಲದೈವಗಳಾದ ಶ್ರೀ ಸತ್ಯ ಸಾರಮಾನಿ ಕಾನದ ಕಟದರ ಮೂಲಕ್ಷೇತ್ರ ಮೂಡುಬಿದಿರೆ ಸಮೀಪದ ಮಿಜಾರಿನ ಅಲೇರಿಯಲ್ಲಿದೆ,ಅದರ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು ಈ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸರಕಾರದಿಂದ 10 ಕೋಟಿ ರೂ.ಅನುದಾನ ನೀಡುವುದಾಗಿ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು,ಸರಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾದರೂ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ,ಭಾರೀ ನಿರೀಕ್ಷೆ ಮೂಡಿಸಿದ್ದ ಈ ವಿಷಯದಲ್ಲಿ ನಮಗೆ ಸಾಮಾಜಿಕ ನ್ಯಾಯ ಮರೀಚಿಕೆಯಾಗಿದೆ,ಅನುದಾನ ಒದಗಿಸಿ ಕೊಡಲು ಜಿಲ್ಲೆಯ ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ,ನಮ್ಮ ಸಮುದಾಯದ ಮತಗಳು ಕಾಂಗ್ರೆಸ್ ಗೆ ಬೇಕು,ಅದರೆ ನಮ್ಮ ಬೇಡಿಕೆಯನ್ನು ಕಿವಿಗೆ ಹಾಕಿಕೊಳ್ಳಲೂ ಕಾಂಗ್ರೆಸ್ ಸರಕಾರ ಸಿದ್ದವಿದ್ದಂತಿಲ್ಲ ಎಂದು ಹೇಳಿದರು.
ಆದಿದ್ರಾವಿಡ ಸಂಘದ ಸುರೇಶ್ ಕೆ.ಬಿ, ಸಮಾಜ ಸೇವಕ ದಿನೇಶ್ ಎಂ.ಕೊಣಾಜೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.











