ಕರಾವಳಿ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ: ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಶರತ್ ಡಿ. ಶೆಟ್ಟಿ ಸ್ವಾಗತ

Picture of Namma Bedra

Namma Bedra

Bureau Report

‌ ಕರಾವಳಿ ಕರ್ನಾಟಕದಲ್ಲಿ ಕರ್ನಾಟಕ ಹೈಕೋರ್ಟ್ ನ ಸರ್ಕ್ಯೂಟ್ ಬೆಂಚ್ ಅಥವಾ ಶಾಶ್ವತ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಸಮಿತಿ ರಚಿಸಿರುವುದನ್ನು ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷರಾದ ಶರತ್ ಡಿ.ಶೆಟ್ಟಿ ಅವರು ಸ್ವಾಗತಿಸಿದ್ದಾರೆ.
ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠದ ಅಗತ್ಯತೆ ಕುರಿತು ವಿವಿಧ ವಕೀಲರ ಸಂಘಗಳು,ಸಾರ್ವಜನಿಕ ವಲಯದಲ್ಲಿ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಅಥವಾ ಸರ್ಕ್ಯೂಟ್ ಬೆಂಚ್ ಸ್ಥಾಪನೆಯಾದಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಕಕ್ಷಿದಾರರು ನ್ಯಾಯಾಂಗ ಸೇವೆ ಪಡೆಯಲು ದೂರದ ಬೆಂಗಳೂರು ಸೇರಿದಂತೆ ಇತರ ಸ್ಥಳಗಳಿಗೆ ಪ್ರಯಾಣಿಸಬೇಕಾದ ಅಗತ್ಯ ಕಡಿಮೆಯಾಗುತ್ತದೆ ಎಂದು ಹೇಳಿರುವ ಅವರು ವಕೀಲರು ಮತ್ತು ಕಕ್ಷಿದಾರರ ಸಮಯ ಹಾಗೂ ಪ್ರಯಾಣದ ವೆಚ್ಚದಲ್ಲೂ ಉಳಿತಾಯವಾಗಲಿದೆ ಎಂದಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಗಳಾದ ಅನು ಶಿವರಾಮನ್,ಎಸ್.ಜಿ.ಪಂಡಿತ್ ಹಾಗೂ ಮುಹಮ್ಮದ್ ನವಾಝ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ,ಸಮಿತಿಯು ಸಂಬಂಧಪಟ್ಟ ವಕೀಲರ ಸಂಘಗಳು,ನ್ಯಾಯಾಂಗ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಇತರ ಪಾಲುದಾರರ ಅಭಿಪ್ರಾಯಗಳನ್ನು ಪಡೆದು ಲಭ್ಯವಿರುವ ವಾಸ್ತವಾಂಶಗಳ ಆಧಾರದಲ್ಲಿ ವರದಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಹೇಳಿರುವ ಅವರು ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ನ್ಯಾಯಾಂಗ ವ್ಯವಸ್ಥೆಯ ಅಗತ್ಯತೆ,ಪ್ರಕರಣಗಳ ಸಂಖ್ಯೆ,ಸಾರ್ವಜನಿಕರಿಗೆ ಆಗಬಹುದಾದ ಅನುಕೂಲಗಳು ಹಾಗೂ ಅಗತ್ಯ ಮೂಲ ಸೌಕರ್ಯಗಳ ಕುರಿತು ಸಮಿತಿಗೆ ಸಮಗ್ರ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ವಕೀಲರ ಸಂಘವೂ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top