ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಗ್ರಾಮದ ಪೇಪರ್ ಮಿಲ್ ನಲ್ಲಿರುವ ಅನುಪಮ್ ಫೀಡ್ಸ್ ಅಥವಾ ಪ್ರೊವಿಟ್ ಫೀಡ್ಸ್ ಎಂಬ ಕೋಳಿ ಆಹಾರ ತಯಾರಿಕಾ ಘಟಕದಿಂದ ಸಾರ್ವಜನಿಕರಿಗೆ ಕೆಲವೊಂದು ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ.

ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳು,ಜನಪ್ರತಿನಿಧಿಗಳಿಗೆ ಈ ಹಿಂದೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಸಣ್ಣಮಟ್ಟಿನಲ್ಲಿ ಪ್ರಾರಂಭವಾದ ಫ್ಯಾಕ್ಟರಿಯು ಇದೀಗ ವಿಸ್ತರಣೆಯಾಗುತ್ತಿದ್ದು ಇದೀಗ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಜೇಡಿಮಣ್ಣು ಸುರಿದಿರುವುದರಿಂದ ಈ ಭಾಗದ ಜನರಿಗೆ,ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಸ್ಥಳೀಯರು ದೂರು ನೀಡಿದ್ದಾರೆ.
ಶಬ್ದ, ವಾಯು ಮತ್ತು ಜಲ ಮಾಲಿನ್ಯ,ರಸ್ತೆಗಳ ಹದಗೆಡಿಸುವಿಕೆಯ ಆರೋಪ ಈ ಫ್ಯಾಕ್ಟರಿ ವಿರುದ್ಧ ಕೇಳಿ ಬಂದಿದೆ.
ಸ್ಥಳೀಯ ಮನೆಗಳ ಬಾವಿಯ ನೀರು ಕಲುಷಿತಗೊಂಡಿದ್ದು ವಯೋವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.ಅಲ್ಲದೆ ಪ್ರತಿನಿತ್ಯ ಇಲ್ಲಿ ಟ್ರಕ್ ಮತ್ತು ಲಾರಿಗಳು ರಸ್ತೆಯಲ್ಲಿ ನಿಲ್ಲುವುದರಿಂದ ಶಾಲಾ ಬಸ್ ಗಳು ಹಾಗೂ ಖಾಸಗಿ ವಶಹನಗಳ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ, ಈಬಗ್ಗೆ ದೂರು ಹೇಳಿದರೆ ಅವರಲ್ಲಿ ಹೇಳಿ,ಇವರಲ್ಲಿ ಹೇಳಿ ಎಂಬ ಉತ್ತರ ಬರುತ್ತಿದೆಯೆನ್ನಲಾಗುತ್ತಿದ್ದು ಈ ಫ್ಯಾಕ್ಟರಿಯಿಂದಾಗುತ್ತಿರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
2024 ರಲ್ಲಿ ಇಲ್ಲಿನ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ,ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ,ಇದೀಗ ಸಮಸ್ಯೆ ಮತ್ತೆ ಮುಂದುವರಿದಿದೆಯೆಂದು ಸ್ಥಳೀಯರು ಆರೋಪಿಸಿದ್ದಾರೆ.












