ಮೂಡುಬಿದಿರೆಯ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ತಿರುವಿನಲ್ಲಿ ನಡೆದ ಭೀಕರ ಸ್ಕೂಟಿ ಅಪಘಾತವು ಇಡೀ ಊರನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಶಿರ್ತಾಡಿ ಕಡೆಯಿಂದ ಕೋಟೆಬಾಗಿಲು ಕಡೆಗೆ ತೆರಳುತ್ತಿದ್ದ ಹದಿಹರೆಯದ ಯುವಕರಾದ ಪ್ರಶ್ನಿತ್ ಹೆಗ್ಡೆ ಹಾಗೂ ದೀಕ್ಷಿತ್ ಪೂಜಾರಿ ಅವರ ಮರಣದ ಸುದ್ದಿ ಇಬ್ಬರ ಕುಟುಂಬಗಳಿಗಷ್ಟೇ ಅಲ್ಲ, ಎಲ್ಲರ ಎದೆಯನ್ನು ಕಲಕಿದೆ. ಪ್ರಶ್ನಿತ್ ಬುಧವಾರ ಸಂಜೆ ಮೃತಪಟ್ಟರೆ, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೀಕ್ಷಿತ್ ಕೂಡ ಬುಧವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಈ ದುರ್ಘಟನೆಯ ಹಿಂದೆ ಕೇವಲ ಒಂದು ಅಪಘಾತವಿಲ್ಲ, ಬದಲಿಗೆ ನಮ್ಮ ಸಮಾಜದ ಆಳವಾದ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯವಿದೆ.
ಯಾರೂ ಹೊಣೆ ಈ ದುರಂತಕ್ಕೆ?
ಹದಿಹರೆಯದ ಕೈಗೆ ವಾಹನ:
ಅಪ್ರಾಪ್ತ ಅಥವಾ ಹದಿಹರೆಯದ ಮಕ್ಕಳ ಕೈಗೆ ವಾಹನಗಳನ್ನು ಕೊಟ್ಟು ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ನೋಡದೆ ಕಳುಹಿಸುವ ಪ್ರವೃತ್ತಿ ಇಂದು ಹೆಚ್ಚಾಗಿದೆ.
ಮರೆತ ಹೆಲ್ಮೆಟ್ ಸಂಸ್ಕೃತಿ:
ನಮ್ಮಲ್ಲಿ ಹೆಲ್ಮೆಟ್ ಧರಿಸುವುದು ಜೀವ ರಕ್ಷಣೆಗಾಗಿ ಎಂಬ ಕಲ್ಪನೆ ಮಾಯವಾಗಿದೆ. ಬದಲಿಗೆ, ಇದು ಕೇವಲ “ಪೊಲೀಸರಿಂದ ದಂಡ ತಪ್ಪಿಸಿಕೊಳ್ಳಲು” ಅಥವಾ ಅವರ ಕಣ್ಣಿಗೆ ಮಣ್ಣೆ ಎರಚಲು ಮಾತ್ರ ಎನ್ನುವಂತಾಗಿದೆ.
*ದಂಡ ಹಾಕಿದರೆ ಆಕ್ರೋಶ:
ಪೊಲೀಸರು ಹೆಲ್ಮೆಟ್ ಕಡ್ಡಾಯಗೊಳಿಸಿ ದಂಡ ವಿಧಿಸಿದರೆ, *”ಕಾಸು ಮಲ್ಪರೆ ಉಂತುದೇರು”* (ಕಾಸು ಮಾಡಲೆಂದು ನಿಂತಿದ್ದಾರೆ) ಎಂದು ಅವರನ್ನು ಹೀಯಾಳಿಸುವ ಮನಸ್ಥಿತಿ ನಮ್ಮಲ್ಲಿದೆ. ಆದರೆ, ಆ ದಂಡ ಜೀವ ಉಳಿಸುವುದಕ್ಕಾಗಿಯೇ ಹೊರತು ಕಾಸು ಮಾಡುವುದಕ್ಕಲ್ಲ ಎಂಬುದನ್ನು ನಾವು ಮರೆಯುತ್ತಿದ್ದೇವೆ.
ತುಂಬಲಾರದ ನಷ್ಟ:
ಈ ಸಾವು ಕೇವಲ ಅಂಕಿಅಂಶವಲ್ಲ.
- ತಂದೆ-ತಾಯಿಗಳಿಗೆ ಕಣ್ಣೀರಿನ ಆಸರೆಯಾಗಬೇಕಿದ್ದ ಮಗನಿಲ್ಲ.
- ಅಣ್ಣನಿಗೆ ತಮ್ಮನಿಲ್ಲ, ತಮ್ಮನಿಗೆ ಅಣ್ಣನಿಲ್ಲ.
- ಅಕ್ಕನಿಗೆ ಸಹೋದರನಿಲ್ಲ, ತಂಗಿಗೆ ನೆರಳಿಲ್ಲ.
ಈ ಬಾರದ ಲೋಕಕ್ಕೆ ಹೋದವರ ಶೂನ್ಯವನ್ನು ಯಾವ ಆಸ್ತಿಯೂ, ಯಾವ ಸಾಂತ್ವನವೂ ತುಂಬಿಕೊಡಲಾರದು. ಇದು ಆ ಕುಟುಂಬಗಳಿಗೆ ಎಂದೆಂದೂ ಬರಿಸಲಾಗದ ಅಕ್ಷರಶಃ ದೊಡ್ಡ ನಷ್ಟ
-ಒಂದು ಎಚ್ಚರಿಕೆ:
ಇನ್ನು ಮುಂದೆಯಾದರೂ ನಮ್ಮ ಮಕ್ಕಳ ಕೈಗೆ ವಾಹನ ಕೊಡುವ ಮುನ್ನ ಯೋಚಿಸೋಣ. ಹೆಲ್ಮೆಟ್ ಅನ್ನು ಪೊಲೀಸರಿಗಾಗಿ ಅಲ್ಲ, ನಮ್ಮ ಹೆಮ್ಮೆಯ ಪ್ರಾಣ ರಕ್ಷಣೆಗಾಗಿ ಕಡ್ಡಾಯವಾಗಿ ಧರಿಸೋಣ. ಈ ಕಣ್ಣೀರು ಮತ್ತಾವ ಕುಟುಂಬಕ್ಕೂ ಬರದಿರಲಿ.
-ಮನೋಜ್ ಕುಮಾರ್ ಶೆಟ್ಟಿ
ಮೂಡಬಿದ್ರಿ.












