ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ವತಿಯಿಂದ ನವರಾತ್ರಿಯ 9 ದಿನಗಳಲ್ಲಿ ನವರಾತ್ರಿ ನವನಾರೀ ಶಕ್ತಿ ಆರಾಧನೆ ಕಾರ್ಯಕ್ರಮದ ಅಧಿಯಲ್ಲಿ 9 ಮಂದಿ ಸಾಧಕ ಮಹಿಳೆಯರನ್ನು ಅವರಿರುವ ಸ್ಥಳಕ್ಕೆ ತೆರಳಿ ಸನ್ಮಾನಿಸಲಾಯಿತು. ಜೊತೆಗೆ 9 ದಿನಗಳ ಪರ್ಯಂತ 9 ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಿ ಕೊಡಲಾಯಿತು.




ಬೆಳುವಾಯಿ ಆರೋಗ್ಯ ಕೇಂದ್ರದ ನಿವೃತ ನರ್ಸ್ ಕಾವೇರಮ್ಮ, ಹೋಂಗಾರ್ಡ್ ಸುಮನ, ಹೋಟೆಲ್ ಉದ್ಯಮಿ ಪದ್ಮಿನಿ ಪೈ, ಪಡುಮಾರ್ನಾಡು ಪಂಚಾಯತ್ ಕಸ ವಿಲೇವಾರಿ ವಾಹನ ಚಾಲಕಿ ಶ್ವೇತ, ನಿವೃತ ಅಂಗನವಾಡಿ ಕಾರ್ಯಕರ್ತೆ ಭಾರತಿ ಜೈನ್, ವಿಶ್ರಾಂತ ಸಹಾಯಕಿ ಲೀಲಾ ಪೂಜಾರಿ, ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು, ರೋಟರಿ ಜಿ ವಿ ಪೈ ಡಯಾಲಿಸಿಸ್ ಯುನಿಟ್ ನ ನಿರೀಕ್ಷಿತ ಪೂಜಾರಿ, ಜಿ ಎನ್ ಭಟ್ ಉಪ್ಪಿನಕಾಯಿ ತಯಾರಕಿ ಕಲಾವತಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
9 ದಿನಗಳಲ್ಲಿ ಅನುಕ್ರಮವಾಗಿ ರೋಟರಿ ಪಿ.ಯು. ಕಾಲೇಜಿನ ಎನ್ನೆಸ್ಸೆಸ್ ಶಿಬಿರಕ್ಕೆ ರೂ. 35 ಸಾವಿರ ಸಹಾಯಧನ, ಮುಂಡ್ಕೂರಿನಲ್ಲಿ ನಡೆದ ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನ ಎನ್ನೆಸ್ಸೆಸ್ ಶಿಬಿರಕ್ಕೆ 50 ಕೆ.ಜಿ. ಅಕ್ಕಿ ಮತ್ತು ರೂ. 5 ಸಾವಿರ ಸಹಾಯಧನ, ಕಣ್ಣಿನ ಶಸ್ತ್ರ ಚಿಕಿತ್ಸೆಗೆ ರೂ. 20 ಸಾವಿರ ಸಹಾಯಧನ, ಆಲಂಗಾರು ಮೌಂಟ್ ರೋಸರಿ ಆಶ್ರಮ ನಿವಾಸಿಗಳಿಗೆ ಹಣ್ಣುಹಂಪಲು ವಿತರಣೆ, ಕ್ಯಾನ್ಸರ್ ಪೀಡಿತೆ ಮುಶೀದಾ ಬಾನು ಅವರ ಚಿಕಿತ್ಸೆಗೆ ರೂ. 20 ಸಾವಿರ ಸಹಾಯಧನ ವಿತರಿಸಲಾಯಿತು. ಶಿರ್ತಾಡಿಯಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ಶಿಬಿರ ನಡೆಸಲಾಯಿತು. ಮಧುಮೇಹ ರೋಗಿಗಳಿಗೆ ಎಚ್.ಬಿ.ಎ. 1ಸಿ ಸ್ಕ್ರೀನಿಂಗ್ ಸೌಲಭ್ಯ ಒದಗಿಸಲಾಯಿತು. ರೋಟರಿ ಮೆಡಿಕಲ್ ಇಕ್ವಿಟ್ ಮೆಂಟ್ ಬ್ಯಾಂಕಿಗೆ ಹೆಚ್ಚುವರಿಯಾಗಿ 9 ಆರೋಗ್ಯ ಸಲಕರಣೆಯನ್ನು ನೀಡಲಾಯಿತು. ಸಾರ್ವಜನಿಕರು ಅವಶ್ಯಕತೆಗೆ ಅನುಗುಣವಾಗಿ ಈ ಸಲಕರಣೆಗಳ ಪ್ರಯೋಜನ ಪಡೆಯಬಹುದಾಗಿದೆ. ಕೊನೆಯದಿನ ಮಹಿಳೆಯೊಬ್ಬರಿಗೆ ರೂ. 11 ಸಾವಿರ ಮೌಲ್ಯದ ಹೊಲಿಗೆಯಂತ್ರ ವಿತರಿಸಲಾಯಿತು.
ರೋಟರಿ ಅಧ್ಯಕ್ಷ ಡಾ. ಆಶೀರ್ವಾದ್, ಕಾರ್ಯದರ್ಶಿ ಪ್ರಜ್ವಲ್ ಆಚಾರ್, ಸಹಾಯಕ ಗವರ್ನರ್ ಶ್ರೀಕಾಂತ್ ಕಾಮತ್, ರೋಟರಿ ಪದಾಧಿಕಾರಿಯೂ ಆಗಿರುವ ಜಿ.ವಿ.ಪೈ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಹರೀಶ್ ನಾಯಕ್, ಮುಂಬೈನ ಪ್ರಕಾಶ್ ಪೈ, ರೋಟರಿ ಎಜುಕಶನ್ ಸೊಸೈಟಿಯ ಅಧ್ಯಕ್ಷ ನಾರಾಯಣ ಪಿ.ಎಂ., ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪಿ.ಕೆ. ಥೋಮಸ್, ಮಾಜಿ ಅಧ್ಯಕ್ಷ ಡಾ. ಮುರಳೀಕೃಷ್ಣ, ಸಿ. ಎಚ್. ಅಬ್ದುಲ್ ಗಫೂರ್, ಡಾ. ವಿನಯಕುಮಾರ್ ಹೆಗ್ಡೆ, ಎಂ. ಬಾಹುಬಲಿ ಪ್ರಸಾದ್, ಜಯರಾಮ ಕೋಟ್ಯಾನ್, ನಾಗರಾಜ ಬಿ., ಜೆ.ಜೆ. ಪಿಂಟೋ, ಜೆ. ಡಬ್ಲ್ಯೂ. ಪಿಂಟೋ, ಮಹಮ್ಮದ್ ಶರೀಫ್, ಮಹಮ್ಮದ್ ಆರೀಪ್, ರತ್ನಾಕರ ಜೈನ್, ಕುಮಾರ್, ಎಸ್. ಎನ್. ಬೋರ್ಕರ್, ಸೂರಜ್ ಬನ್ನಡ್ಕ, ಪುರಂದರ ದೇವಾಡಿಗ, ಉದಯ ಕುಮಾರ್, ಸಂತೋಷ್, ಗಣೇಶ್ ಕಾಮತ್ ಹಾಗೂ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಮತ್ತಿತರರು 9 ದಿನಗಳ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.












