ಪುತ್ತೆ ಬ್ರಹ್ಮಕಲಶೋತ್ಸವ: *ಸೌಹಾರ್ದತೆಗೆ ಸಾಕ್ಷಿಯಾಯಿತು ಕ್ರೈಸ್ತ, ಮುಸ್ಲಿಂ ಬಾಂಧವರ ಹೊರೆಕಾಣಿಕೆ

Picture of Namma Bedra

Namma Bedra

Bureau Report

ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಪುತ್ತಿಗೆಯ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲೀಗ ಬ್ರಹ್ಮಕಲಶೋತ್ಸವ ಸಂಭ್ರಮ.
ಶುಕ್ರವಾರ ನಡೆದ ಹೊರೆಕಾಣಿಕೆ ಮೆರವಣಿಗೆ ದೊಡ್ಡ ಸಂಖ್ಯೆಯ ಜನರ ಪಾಲ್ಗೊಳ್ಳುವಿಕೆ ಮತ್ತು ಬೇರೆ ಬೇರೆ ಕಡೆಗಳ ಹಸಿರು ಹೊರೆಕಾಣಿಕೆ ಮೂಲಕ ಗಮನಸೆಳೆದಿದೆ.


ಫೆ.28 ರಿಂದ ಮಾರ್ಚ್ 7 ರವರೆಗೆ ನಡೆಯಲಿರುವ ಈ ಬ್ರಹ್ಮಕಲಶೋತ್ಸವವು ಮೂಡುಬಿದಿರೆ ಮತ್ತು ಸುತ್ತುಮುತ್ತಲ ಪ್ರದೇಶಗಳಲ್ಲಿ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿದೆ.
ಮೂಡುಬಿದಿರೆಯ ಇತಿಹಾಸವನ್ನು ಗಮನಿಸಿದರೆ ಇಲ್ಲೆಲ್ಲಾ ಹಿಂದಿನಿಂದಲೂ ಸೌಹಾರ್ದತೆಯಿಂದಲೇ ಬಾಳಿದವರು.ಹಿಂದೂ,ಮುಸ್ಲಿಂ, ಕ್ರೈಸ್ತರೆಂಬ ಬೇಧ ಭಾವವಿಲ್ಲದೆ ಪರಸ್ಪರ ಸಹೋದರತೆಯಿಂದ ಜೀವನ ಸಾಗಿಸುತ್ತಾ ಬಂದವರು. ಹೊರಗಿನವರು ಬೆದ್ರವನ್ನು ಮೆಚ್ಚಿಕೊಂಡು ಇಲ್ಲೇ ಬಂದು ಸೆಟ್ಲಾಗಲು ನಿರ್ಧರಿಸಲೂ ಇದೇ ಕಾರಣ.


ಪುತ್ತಿಗೆಯ ಬ್ರಹ್ಮಕಲಶೋತ್ಸವಕ್ಕೆ ಕ್ರೈಸ್ತ,ಮುಸ್ಲಿಂ ಬಾಂಧವರು ಹೊರೆಕಾಣಿಕೆ ನೀಡುವ ಮೂಲಕ ಮತ್ತೊಮ್ಮೆ ಇಲ್ಲಿನ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
ಹೊಸಬೆಟ್ಟು ಚರ್ಚ್ ವತಿಯಿಂದ ಹಸಿರು ಹೊರೆಕಾಣಿಕೆ ಪುತ್ತಿಗೆ ದೇವಸ್ಥಾನದವರೆಗೆ ಸಾಗಿ ಬರುವ ಮೂಲಕ ಕ್ರೈಸ್ತ ಬಾಂಧವರು ಈ ಸಂಭ್ರಮದಲ್ಲಿ ಪಾಲ್ಗೊಂಡರು.
ಹೊಸಬೆಟ್ಟು ಚರ್ಚ್ ಧರ್ಮಗುರುಗಳಾದ ರೆ.ಫಾ.ಗ್ರೆಗರಿ ಡಿಸೋಜ, ಯುವ ನ್ಯಾಯವಾದಿ ಪ್ರವೀಣ್ ಲೋಬೋ,ಮನೋಹರ ಕುಟಿನ್ಹ, ವಿಲ್ಫ್ರೆಡ್ ಮೆಂಡೋನ್ಸ,ಡೇನಿಸ್ ಫೆರ್ನಾಂಡೀಸ್,ವಿನ್ಸೆಂಟ್‌ ಸಾಂತ್ಮಯೋರ್,ಎವ್ಜಿನ್ ಪಿಂಟೊ, ರೀಟಾ ಕುಟಿನ್ಹೊ,ಮೇಬಲ್ ಪಿಂಟೊ, ಲೀನಾ ಟೆಲ್ಲಿಸ್,ಮಾರ್ಕ್ ಪಿಂಟೊ ಮತ್ತಿತರರು ಹಸಿರು ಹೊರೆಕಾಣಿಕೆಯಲ್ಲಿ ಪಾಲ್ಗೊಂಡಿದ್ದರು.
ದೇವಸ್ಥಾನಕ್ಕೆ ಭೇಟಿ ನೀಡಿದ ಚರ್ಚ್ ನ ಧರ್ಮಗುರುಗಳನ್ನು ಸನ್ಮಾನಿಸಿದ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕುಲದೀಪ್ ಎಂ.ಅವರು ದೇವಸ್ಥಾನದಲ್ಲಿ ನಡೆದ ಜೀರ್ಣೋದ್ಧಾರ ಕೆಲಸಗಳ ಬಗ್ಗೆ ಕ್ರೈಸ್ತ ಬಾಂಧವರಿಗೆ ವಿವರಿಸಿ ಕೃತಜ್ಞತೆ ಸಲ್ಲಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top