‘ಅಕ್ಕಾ, ಬೆಳುವಾಯಿಗೆ ದಾರಿ ಯಾವುದು’ ಎಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರ ಕುತ್ತಿಗೆಯಿಂದ ಕರಿಮಣಿ ಸರ ಎಗರಿಸಿ ಪರಾರಿಯಾಗಿದ್ದ ಕಳ್ಳನನ್ನು ಹಿಡಿದಿರುವ ಮೂಡುಬಿದಿರೆ ಪೊಲೀಸರು ಆತನಿಗೆ ಜೈಲಿನ ದಾರಿ ತೋರಿಸಿದ್ದಾರೆ.
ಕಾಂತಾವರ ಗ್ರಾಮದ ಕುಂದಿಲ್ಲ ಮನೆಯ ಪ್ರಶಾಂತ್ ಸಾಲಿಯಾನ್ ಕರಿಮಣಿ ಕಳ್ಳ.
ಕಳೆದವಾರ ಶ್ರೀಮತಿ ಇಂದಿರಾ ಎಂಬವರು ತನ್ನ ಸಂಬಂಧಿಕರ ಗೃಹಪ್ರವೇಶ ಮುಗಿಸಿಕೊಂಡು ವಾಪಾಸು ಮನೆಗೆ ಹೋಗುತ್ತಿರುವಾಗ ಬೆಳುವಾಯಿಯ ಗುಜ್ಜರಗುಂಡಿ ಎಂಬಲ್ಲಿ ಟಿವಿಎಸ್ ದ್ವಿಚಕ್ರವಾಹನದಲ್ಲಿ ಬಂದ ಅಪರಿಚಿತ ಯುವಕನೊಬ್ಬ ‘ ಅಕ್ಕ, ಬೆಳುವಾಯಿಗ್ ಒಯ್ಟೆ ಪೋವೊಡು’ ಎಂದು ವಿಚಾರಿಸಿದ್ದಾನೆ.ಮಹಿಳೆ ಪ್ರಾಮಾಣಿಕವಾಗಿ ದಾರಿ ಹೇಳುತ್ತಿದ್ದಂತೆ ಆತ ಮಹಿಳೆಯ ಕುತ್ತಿಗೆಗೆ ಕೈಹಾಕಿ ಕರಮಣಿ ಎಳೆದಿದ್ದಾನೆ.ಆಕೆ ತಪ್ಪಿಸಿಕೊಳ್ಳಲೆತ್ನಿಸಿದಾಗ ದೂಡಿಹಾಕಿ ಕರಿಮಣಿಯೊಂದಿಗೆ ಪರಾರಿಯಾಗಿದ್ದ.ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೆತ್ತಿಕೊಂಡ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ ಮೂಡುಬಿದಿರೆ ಪೊಲೀಸರು ಪ್ರಶಾಂತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದಾನೆ.
ಅಲ್ಲದೆ ಕಾರ್ಕಳ ಕಾಂತಾವರದ ಅಂಬರೀಶ್ ಗುಹೆಯ ಬಳಿ ಮಹಿಳೆಯೋರ್ವರ ಕುತ್ತಿಗೆಯಿಂದಲೂ ಇದೇರೀತಿ ಕೃತ್ಯವೆಸಗಿರುವುದನ್ನು ಬಾಯಿಬಿಟ್ಟಿದ್ದಾನೆ.
ಆರೋಪಿಯಿಂದ ಸುಲಿಗೆಗೈದ ಚಿನ್ನದ ಕರಿಮಣಿಸರ ಹಾಗೂ ಕೃತ್ಯಕ್ಕೆ ಬಳಸಿದ ಕೆಂಪು ಬಣ್ಣದ ಟಿವಿಎಸ್ ಅಪಾಚಿ ಮೋಟಾರು ಸೈಕಲನ್ನು ವಶಪಡಿಸಿಕೊಳ್ಳಲಾಗಿದೆ.
ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್.ಐ.ಗಳಾದ ಕೃಷ್ಣಪ್ಪ, ಪ್ರತಿಭಾ,ಎ.ಎಸ್.ಐ.ರಾಜೇಶ್,ಹೆಡ್ ಕಾನ್ಸ್ಟೆಬಲ್ ಗಳಾದ ರಾಜೇಶ್,ಮುಹಮ್ಮದ್ ಇಕ್ಬಾಲ್, ಪ್ರದೀಪ್ ಕುಮಾರ್ ಬಣಗರ್,ಮುಹಮ್ಮದ್ ಹುಸೈನ್,ಅಕೀಲ್ ಅಹ್ಮದ್, ನಾಗರಾಜ್ ಲಮಾಣಿ ಹಾಗೂ ಪಿ.ಸಿ.ವೆಂಕಟೇಶ್ ಅವರು ಪಾಲ್ಗೊಂಡಿದ್ದರು.
