ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಸನಗರದಲ್ಲಿ ಕ್ಲೀನ್ & ಕ್ರಿಸ್ಟ್ ಲಾಂಡ್ರಿ ಎಂಬ ಫ್ಯಾಕ್ಟರಿಯು ಕಳೆದೊಂದು ವರ್ಷದಿಂದ ಅನಧಿಕೃತವಾಗಿ ಕಾರ್ಯಾಚರಿಸುತ್ತಿತ್ತು. ಈ ಅನಧಿಕೃತ ಫ್ಯಾಕ್ಟರಿಗೆ ಸೋಮವಾರದಂದು ಪುತ್ತಿಗೆ ಪಿ.ಡಿ.ಒ.ಭೀಮಾ ನಾಯ್ಕ್ ಅವರು ಬೀಗಮುದ್ರೆ ಹಾಕಿದ್ದಾರೆ. ಇದರಿಂದ ಕೋಪಗೊಂಡಿರುವ ಫ್ಯಾಕ್ಟರಿ ಮಾಲಕ ಪಿ.ಡಿ.ಒ ಅವರಿಗೆ ಥ್ರೆಟ್ ಹಾಕಿದರೆ ಸಮಸ್ಯೆಗಳಿಂದ ಮುಕ್ತಗೊಂಡ ಪರಿಸರದ ಜನತೆ ಪಿ.ಡಿ.ಒ.ಅವರ ದಿಟ್ಟ ಕ್ರಮಕ್ಕೆ ಅದೇ ಪಿ.ಡಿ.ಒ.ಅವರಿಗೆ ಕೃತಜ್ಞತೆ ಸಲ್ಲಿಸಲು ವಿಶ್ ಕಾಲ್ ಮಾಡಿದ್ದಾರೆ.

ಪಂಚಾಯತ್ ನ ಪರವಾನಿಗೆಯಾಗಲೀ,ವಾಣಿಜ್ಯ ಉದ್ದೇಶದ ಭೂ ಪರಿವರ್ತನೆಯಾಗಲೀ, ಮೂಡಾದ ಪರ್ಮಿಷನ್ ಆಗಲೀ ಪಡೆದುಕೊಳ್ಳದೆ ಈ ಫ್ಯಾಕ್ಟರಿ ಸುಮಾರು 200 ಜನ ಕೆಲಸಗಾರರೊಂದಿಗೆ ಕಳೆದೊಂದು ವರ್ಷದಿಂದ ಕಾರ್ಯಾಚರಿಸುತ್ತಿತ್ತು.
ಫ್ಯಾಕ್ಟರಿಯಿಂದ ಹೊರಬರುತ್ತಿದ್ದ ರಾಸಾಯನಿಕಗಳನ್ನೊಳಗೊಂಡ ತ್ಯಾಜ್ಯ ನೀರನ್ನು ಸಂಸ್ಕರಿಸದೇ ತೊಟ್ಟಿಯಲ್ಲಿ ಸಂಗ್ರಹಿಸಿ ರಾತ್ರಿ ವೇಳೆ ಸಾರ್ವಜನಿಕ ಚರಂಡಿಗೆ ಹರಿಯಬಿಡಲಾಗುತ್ತಿತ್ತು. ಇದರಿಂದ ಹಂಸನಗರ ಸುತ್ತಮುತ್ತಲಿನ ನಿವಾಸಿಗಳ ಕುಡಿಯುವ ನೀರಿನ ಬಾವಿ,ಕೊಳವೆಬಾವಿಗಳು ಸಂಪೂರ್ಣ ರಾಸಾಯನಿಕ ಮಿಶ್ರಣಗೊಂಡು ಕುಡಿಯಲು ಅಸಾಧ್ಯವಾಗಿತ್ತು.
ಈಬಗ್ಗೆ ಸಾರ್ವಜನಿಕರು ಪುತ್ತಿಗೆ ಪಂಚಾಯತ್ ಗೆ ದೂರು ನೀಡಿದ್ದರು.ಕಳೆದ ಡಿಸೆಂಬರ್ ನಲ್ಲಿಯೇ ಪಂಚಾಯತ್ ಈ ಫ್ಯಾಕ್ಟರಿಗೆ ಬೀಗಮುದ್ರೆ ಹಾಕುವ ಆದೇಶ ಹೊರಡಿಸಿತ್ತು.
ಈ ಆದೇಶದ ವಿರುದ್ಧ ಲಾಂಡ್ರಿ ಮಾಲಕರು ಹೈಕೋರ್ಟ್ ನಲ್ಲಿ ದಾವೆ ಹೂಡಿ 2025 ರ ಮೇ.ತಿಂಗಳ ಒಳಗೆ ಫ್ಯಾಕ್ಟರಿಯನ್ನು ಬೇರೆಡೆಗೆ ಸ್ಥಳಾಂತರಿಸುವುದಾಗಿ ಹೇಳಿದ್ದರು.ಅದುವರೆಗೆ ಪಂಚಾಯತ್ ನವರು ಫ್ಯಾಕ್ಟರಿಗೆ ಬೀಗಮುದ್ರೆ ಹಾಕುವಂತಿಲ್ಲ ಎಂದು ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಇದೀಗ ತಡೆಯಾಜ್ಞೆ ಅವಧಿ ಮುಗಿದಿದ್ದರೂ ಫ್ಯಾಕ್ಟರಿ ಮತ್ತೆ ರಾಜಾರೋಷವಾಗಿ ಕಾರ್ಯಾಚರಿಸುತ್ತಿತ್ತು.ಈಬಗ್ಗೆ ಸಾರ್ವಜನಿಕರು ಮತ್ತೆ ಪಂಚಾಯತ್ ಗೆ ದೂರು ನೀಡಿ ಕ್ರಮಕೈಗೊಳ್ಳದಿದ್ದಲ್ಲಿ ಆಹೋರಾತ್ರಿ ಧರಣಿ ಕೂರುವುದಾಗಿ ಎಚ್ಚರಿಸಿದ್ದರು.
ಈ ಹಿನ್ನೆಲೆಯಲ್ಲಿ ಪಂಚಾಯತ್ ಪಿ.ಡಿ.ಒ.ಭೀಮಾ ನಾಯ್ಕ್ ಅವರು ಸಿಬ್ಬಂದಿಗಳೊಂದಿಗೆ ತೆರಳಿ ಅನಧಿಕೃತ ಫ್ಯಾಕ್ಟರಿಗೆ ಬೀಗಮುದ್ರೆ ಹಾಕಿದ್ದಾರೆ. ಪಿ.ಡಿ.ಒ.ಅವರ ಈ ದಿಟ್ಟ ಕ್ರಮಕ್ಕೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗಿದೆ.ಆದರೆ ಪಿ.ಡಿ.ಒ.ಅವರಿಗೆ ಬೆದರಿಕೆ ಹಾಕಿದ ಫ್ಯಾಕ್ಟರಿ ಮಾಲಕನ ವಿರುದ್ಧ ಅಷ್ಟೇ ಅಸಮಾಧಾನ ವ್ಯಕ್ತವಾಗಿದೆ.








































