ಕೆಂಪುಕಲ್ಲು ಮತ್ತು ಬಿಳಿ ಕಣ್ಣೀರು!

Picture of Namma Bedra

Namma Bedra

Bureau Report

ಅಶ್ರಫ್ ವಾಲ್ಪಾಡಿ
ಜಿಲ್ಲೆಯಾದ್ಯಂತ ಕೆಂಪುಕಲ್ಲು ಪಾಯಗಳು ಬಂದಾಗಿ ತಿಂಗಳಾಗುತ್ತಾ ಬಂದಿದೆ. ಕಳೆದ ಹಲವಾರು ವರ್ಷಗಳಿಂದ ಕ್ರಮವೂ -ಅಕ್ರಮವೋ ….. ಯಾವುದೋ ರೀತಿಯಲ್ಲಿ ಕೆಂಪುಕಲ್ಲು ಕೋರೆಗಳು ಕಾರ್ಯಾಚರಿಸಿ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡಿದೆ,ಜಿಲ್ಲೆ ಹಾಗೂ ಹೊರಜಿಲ್ಲೆಗಳಿಗೆ ಬೇಕಾದಷ್ಟು ಕಲ್ಲು ಪೂರೈಸಿದೆ.ಆದರೆ ಅದ್ಯಾವುದೋ ಕಾರಣ ನೀಡಿ ಈಗ ಸಂಪೂರ್ಣ ಪಾಯಗಳು ಬಂದ್ ಆಗಿ ಕಾರ್ಮಿಕರು ಮನೆಯಲ್ಲಿರುವಂತಾಗಿದೆ, ಕಲ್ಲು ಸಾಗಾಟದ ವಾಹನಗಳು ಮನೆಯಂಗಳದಲ್ಲಿ ನಿಲ್ಲುವಂತಾಗಿದೆ.
ಹೊಡೆತ ಬಿದ್ದದ್ದು ಕೇವಲ ಪಾಯದ ಮಾಲಕರಿಗಾಗಲೀ ,ಚಾಲಕರಿಗಾಗಲೀ ಅಲ್ಲ. ಒಂದು ಕಲ್ಲು ಇತರರ ವ್ಯವಹಾರವನ್ನೂ ಪುಡಿಮಾಡಿದೆ.
ಕಲ್ಲು ಇಲ್ಲದೆ ಟಿಪ್ಪರ್,ಲಾರಿ ,ಹಿಟಾಚಿ ಚಾಲಕರಿಗೆ,ಲೋಡರ್ ಗಳಿಗೆ ಕೆಲಸವಿಲ್ಲ. ಕಲ್ಲು ಇಲ್ಲದೆ ಮೇಸ್ತ್ರಿ, ಹೆಲ್ಪರ್ ಗಳಿಗೆ ಕೆಲಸವಿಲ್ಲ.ಇವರ್ಯಾರಿಗೂ ಈ ಉದ್ಯೋಗ ಬಿಟ್ಟು ಬೇರೇನೂ ಗೊತ್ತಿಲ್ಲ.ಒಂದರ್ಥದಲ್ಲಿ ಕಲ್ಲು ಪಾಯ ಬಂದ್ ಮಾಡಿಸಿ ಇವರೆಲ್ಲರನ್ನೂ ನಿರುದ್ಯೋಗಿಗಳಾಗುವಂತೆ ಮಾಡಿದ್ದು ಬಿಟ್ಟರೆ ಬೇರಾವ ಸಾಧನೆಯೂ ಅಲ್ಲ.


ಇದರ ಪರಿಣಾಮ ಹೊಟೇಲ್ ಗಳಿಗೆ ಬ್ಯಾರ ಇಲ್ಲ, ಕಟ್ಟಡ ಕಾರ್ಮೊಕರಿಗೆ ಕೆಲಸವಿಲ್ಲ,ಅಂಗಡಿಗಳಿಗೆ ಬ್ಯಾರವಿಲ್ಲ, ಬಾರ್ ಗಳಿಗೆ ಬ್ಯಾರವಿಲ್ಲ,ಪ್ಲಂಬರ್ ಗಳಿಗೆ ಕೆಲಸವಿಲ್ಲ,ಫೈನಾನ್ಸ್ ಗಳಿಗೆ ಕಂತು ಕಟ್ಟಲಾಗುತ್ತಿಲ್ಲ, ವಾರದ ಗ್ರೂಪ್ ಹಣ ಕಟ್ಟಲಾಗುತ್ತಿಲ್ಲ,ಬ್ಯಾಂಕ್ ಗಳ ಸಾಲ ತೀರಿಸಲಾಗುತ್ತಿಲ್ಲ,ಪೈಂಟರ್ ಗಳಿಗೂ ಕೆಲಸವಿಲ್ಲ- ಇವರೆಲ್ಲರ ಕೆಲಸದ ಸಾಮಾಗ್ರಿಗಳು ತುಕ್ಕು ಹಿಡಿಯುತ್ತಿದೆ.
ಯಾವುದನ್ನೋ ನಿಲ್ಲಿಸಲು ಹೋಗಿ ಸಾವಿರಾರು ಬಡ ಕಾರ್ಮಿಕರ ಹೊಟ್ಟೆಗೆ ಹಿಟ್ಟಿಲ್ಲದಂತೆ ಮಾಡಿದೆ.ಇದು ಸರಕಾರಕ್ಕೆ ಅರ್ಥವಾಗಬೇಕು ಅಥವಾ ಅರ್ಥಮಾಡಿಸಿ ಕೊಡಬೇಕು.
ಜಿಲ್ಲೆಯಲ್ಲಿ ಸುಮಾರು 25 ಸಾವಿರದಷ್ಟು ವಾಹನಗಳು ಕೆಂಪುಕಲ್ಲನ್ನೇ ನಂಬಿತ್ತು.ಅದೆಲ್ಲಾ ಈಗ ಸ್ಟಾರ್ಟೇ ಆಗುತ್ತಿಲ್ಲ. ಅದರ ಡಬ್ಬಲ್ ನಷ್ಟು ಕಾರ್ಮಿಕರು ಕಂಗಾಲಾಗಿದ್ದಾರೆ,ಅವರ ಕುಟುಂಬವೂ ಕಂಗಾಲಾಗಿದೆ.ಈ ಕಾರ್ಮಿಕರ ವಿದ್ಯಾರ್ಥಿಗಳ ವಿದ್ಯಾರ್ಜನೆಗೂ ಸಮಸ್ಯೆಯಾಗಿದೆ.
ಕಷ್ಟಪಟ್ಟು ದುಡಿದು ಸಂತಸದ ಜೀವನ ಸಾಗಿಸುತ್ತಿದ್ದ ಅದೆಷ್ಟೋ ಬಡ ಕುಟುಂಬಗಳ ಕಣ್ಣಲ್ಲೀಗ ಬಿಳಿಯ ಕಣ್ಣೀರು. ಈ ಕಣ್ಣೀರ ಶಾಪ ತಟ್ಟದಿರುತ್ತದೆಯಾ ?… ಎಂದು ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಕೇಳುತ್ತಿದ್ದಾರೆ.ಅದು ಸರಿಯಾದ ಪ್ರಶ್ನೆ. ಈ ಕಾರ್ಮಿಕರ ಕುಟುಂಬದ ಕಣ್ಣೀರ ಶಾಪ ತಟ್ಟುವುದಕ್ಕಿಂತ ಮುಂಚೆ ಸರಕಾರ ಎಚ್ಚೆತ್ತುಕೊಂಡು ಕರಾವಳಿಯ ಈ ದೊಡ್ಡ ಕಸುಬಿನವರಿಗೊಂದು ಪ್ರತ್ಯೇಕ ನಿಯಮ ರೂಪಿಸಬೇಕಿದೆ- ಅದು ಶೀಘ್ರದಲ್ಲಿ.
ಸರಕಾರ ಅಥವಾ ಗಣಿ ಇಲಾಖೆಯವರು ನೀಡುವ ಪರ್ಮಿಟ್ ಪ್ರಕಾರ ಈ ಉದ್ಯಮ ನಡೆಸಲು ಸಾಧ್ಯವಿಲ್ಲ.ಈವರೆಗೆ ನಡೆದಿರುವುದೆಲ್ಲಾ ಕ್ರಮವಾಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.ಆದರೆ ಕಠಿಣ ನಿಯಮಗಳನ್ನು ಸಡಿಲಗೊಳಿಸಿ ಕಲ್ಲನ್ನೇ ನಂಬಿದವರ ಬಾಳಿಗೊಂದು ಬೆಳಕು ನೀಡುವಂತಹ ಕೆಲಸವಾಗಬೇಕಿದೆ. ಅದರ ಬದಲು ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತಾಗಬಾರದು.
ಈ ಜಿಲ್ಲೆಯಲ್ಲಿ ಬಡ ಕಾರ್ಮಿಕರ ಪರ ಮಾಜಿ ಸಚಿವ ರಮಾನಾಥ ರೈ ಮತ್ತು ಶಾಸಕ ಉಮಾನಾಥ ಕೋಟ್ಯಾನ್ ಅವರು ಧ್ವನಿ ಎತ್ತಿರುವುದು ಬಿಟ್ಟರೆ ಬೇರೆ ಯಾವ ಮುಖಂಡರೂ ಈಬಗ್ಗೆ ಆಸಕ್ತಿ ವಹಿಸಿಲ್ಲ.
ಬೇಲೆಗ್ ಕಲ್ಲಿಜ್ಜಿ- ಕಿಸೆಟ್ಟ್ ಮುಕ್ಕಾಲಿಜ್ಜಿ ಎಂಬಂತಾಗಿದೆ ಸದ್ಯದ ಸ್ಥಿತಿ.ಇದು ಜಿಲ್ಲೆಯಲ್ಲಿ ತಲೆದೋರಿರುವ ಬಹುದೊಡ್ಡ ಸಮಸ್ಯೆ. ಈ ಸಮಸ್ಯೆಯನ್ನು ಪರಿಹರಿಸಲು ಯು.ಟಿ.ಖಾದರ್ ಅಂತವರಿಂದ ಮಾತ್ರ ಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿದೆ.ಸಮಸ್ಯೆಗೆ ಶೀಘ್ರ ಪರಿಹಾರ ಸಿಗಲಿ ಎನ್ನುವುದೇ ಎಲ್ಲರ ನಿರೀಕ್ಷೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top