-ನಿಕ್ಲೊಂದಿಗೆ
*ಅಶ್ರಫ್ ವಾಲ್ಪಾಡಿ
ಸರಳಾ ಬಸ್ಸು. ನಾನು ಮರೆಯಲಾಗದ ಬಸ್ಸದು. ಎರಡು ಗುಣಿಸು ಹತ್ತು ವರ್ಷಗಳ ಹಿಂದೆ ನಮ್ಮೂರಲ್ಲಿ, ನಮ್ಮ ಏರಿಯಾದಲ್ಲಿ ಸರಳಾ ಬಸ್ಸಿನದ್ದೇ ಹವಾ- ಅರೆಗ್ಗಾಲದಲ್ಲಿ ಮಾತ್ರ ಅದರೊಳಗೆ ಕಂಡಾವಟೆ ದವಾ !
ನಾನು ಜನಬಿಂಬ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬೆಳಿಗ್ಗೆ ಎಂಟರ ಸರಳಾದಲ್ಲಿ ಕಾರ್ಕಳಕ್ಕೆ ಹೋಗುತ್ತಿದ್ದೆ. ಬಸ್ಸೂ ಪೊರ್ಲಿತ್ತು, ಬಸ್ಸಿಗೆ ಬರುತ್ತಿದ್ದವರೂ ಪೊರ್ಲು ಪೊರ್ಲು ಇದ್ದರು.ಆಗಿನ್ನೂ ಮದುವೆಯಾಗಿರದ ಕಾರಣ ಒಂದು ರೀತಿಯ ಮರ್ಲೂ ಇತ್ತು .ಅದಕ್ಕೆ ಸರಿಯಾಗಿ ಎಂಬಂತೆ ಆ ಬಸ್ಸಿನಲ್ಲಿ ಯಾವತ್ತೂ ಕೇಳಿ ಬರುತ್ತಿದ್ದ ಹಾಡು ‘ ದಿಲ್ ತೋ ಪಾಗಲ್ ಹೈ..ದಿಲ್ ದೀವಾನಾ ಹೈ ‘ ..!
ಮೋಸ್ಟ್ಲಿ ಬಸ್ಸಿನ ಡ್ರೈವರಾಗಿದ್ದ ಬಶೀರ್ ಸಾಯ್ಬ್ರು ನಮ್ಮ ಅಂಗಲಾಪನ್ನು ಗಮನಿಸಿಯೇ ಈ ಹಾಡನ್ನು ಇಡುತ್ತಿದ್ದರೋ ಗೊತ್ತಿಲ್ಲ. ಈ ಹಾಡು ಬಂದಾಗ ನನಗೀಗಲೂ ನೆನಪಾಗೋದು ಸರಳಾ ಬಸ್ಸು !
ಬೆಳಿಗ್ಗಿನ ಟ್ರಿಪ್ ಆದ ಕಾರಣ ಬಸ್ಸು ತುಂಬಿ ತುಳುಕುತ್ತಿತ್ತು. ಪಕ್ಕದಲ್ಲಿ ಬ್ಯೂಟಿಯೊಬ್ಬಳು ಕುಳಿತಿದ್ದಾಗ ಯಾವುದೋ ಸ್ಟಾಪಲ್ಲಿ ಪ್ರೆಗ್ನೆಂಟೋ, ಪ್ರಾಯದವರೋ, ಮಗುವಿನೊಂದಿಗೆ ಮಗುವಿನ ತಾಯಿ ಬಸ್ಸು ಹತ್ತಿದರೆ ‘ ಅಯ್ಯೋ ಸೀಟು ಬಿಟ್ಟು ಕೊರೊಡತ್ತಾ’ ಎಂಬ ಲೈಟ್ ಕೋಪವೂ ಬರುತ್ತಿತ್ತು!
ಸೀಟಲ್ಲಿ ಕುಳಿತಿದ್ದಾಗ ಒರಗ್ಗಿ ನಿಲ್ಲುತ್ತಿದ್ದ ಆ ಹುಡುಗಿಯರೆಲ್ಲಾ ಎಲ್ಲಿ ಹೋದರು ? ಕಾಲೇಜು ಬ್ಯಾಗ್ ಹಿಡ್ಕೊಳ್ಳಿ ಅಂತ ಕೊಡುತ್ತಿದ್ದ ಹುಡುಗಿಯರೆಲ್ಲಿ ಹೋದರು ? ಆ ಬ್ಯಾಗ್ನೊಳಗಿರುತ್ತಿದ್ದ ಬಿಸಿ ಬಿಸಿ ಬುತ್ತಿಯಿಂದ ಮೈಮೇಲೆ ಬಿದ್ದ ಬೆಚ್ಚ ತೆಲಿಯಿಂದ ಸುಧಾರಿಸ್ಕೊಂಡು ವಾಪಾಸು ಬ್ಯಾಗ್ ಅವರ ಕೈಗಿತ್ತಾಗ ‘ thanks ‘ ಎನ್ನುತ್ತಿದ್ದ ಸುಂದರಿಯರು, ಬೆಚ್ಚ ತೆಳಿ ಬಿದ್ದದ್ದು ಗೊತ್ತಾಗಿದ್ದರೂ ಟೆನ್ಷನ್ ಮಾಡದೆ ಒಂದೇ ಒಂದು sorry ಹೇಳದೆ ಬೆನ್ನುಹಾಕಿ ಹೋದ ಆ ಬ್ಯೂಟಿಗಳೆಲ್ಲಾ ಎಲ್ಲಿ ಹೋದರು ?

ಅಗತ್ಯಕ್ಕಿಂತ ಹೆಚ್ಚು ಸಲ ‘ ಟಿಕೆಟ್..ಟಿಕೆಟ್ ಎಂದೂ….ಚಿಲ್ಲರೆ ಬಾಕಿ ಉಂಡಾ ‘ ಎಂದು ಕೇಳಿಕೊಂಡು ಅವರಿಗೆಲ್ಲಾ ಒರಸಿ ಒರಸಿ ಬರುತ್ತಿದ್ದ ಕಂಡೆಕ್ಟರ್ ಗಳೆಲ್ಲಾ ಎಲ್ಲಿ ಹೋದರು? ಇಡೀ ಬಸ್ಸಿನ ಕಂಟ್ರೋಲೇ ನನ್ನ ಕೈಯಲ್ಲಿದೆ ಎಂಬ ಭ್ರಮೆ ಮಂಡೆಯಲ್ಲಿದ್ದ ಕ್ಲೀನರ್ ಗಳೆಲ್ಲಾ ಎಲ್ಲಿ ಹೋದರು? ಪುಲ್ಲಿಂಗಗಳಿಗೆ ಹಿಂಬಾಗಲೇ ಎಡ್ಜಸ್ಟಾಗುವಂತೆ-ಸ್ತ್ರೀಲಿಂಗಗಳಿಗೆಲ್ಲಾ ಮುಂಬಾಗಿಲಲ್ಲೇ ಹತ್ತಲು ಸುಲಭವಾಗುವಂತೆ ಅವರು ನಿಂತಲ್ಲಿಗೇ ಕರೆಕ್ಟಾಗಿ ಎಡ್ಜಸ್ಟಾಗುವಂತೆ ಬ್ರೇಕ್ ಹಾಕಿ ಮ್ಯಾನೇಜ್ ಮಾಡುತ್ತಿದ್ದ ಆ ಡ್ರೈವರ್ ಗಳೆಲ್ಲಾ ಎಲ್ಲಿ ಹೋದರು ?
ಅಲ್ಲಾ…..ಕಾಲುಗಂಟೆಗೊಮ್ಮೆ ಬರುತ್ತಿದ್ದ ಒಂದೇ ಕಲ್ಲರಿನ ಅಷ್ಟೂ ಸರಳಾ ಬಸ್ಸುಗಳೆಲ್ಲಾ ಎಲ್ಲಿ ಹೋಯ್ತೆಂದೇ ಗೊತ್ತಾಗುತ್ತಿಲ್ಲ.
ಬೆದ್ರ- ನಾರಾವಿ, ಮರೋಡಿ,ಕಾರ್ಕಳ, ತೆಳ್ಳಾರು,ಮಾಳ …..ಹೀಗೆಲ್ಲಾ ರೂಟ್ ಗಳಲ್ಲಿ ತನ್ನದೇ ಆದ ಹವಾ ಸೃಷ್ಟಿಸಿದ್ದ ಸರಳಾ ಬಸ್ಸು ಇನ್ನು ನೆನಪು ಮಾತ್ರ. ನನಗಂತೂ ಸರಳಾ ಬಸ್ಸಿನ ಪ್ರತೀ ಸೀಟುಗಳು, ಮಳೆಗಾಲದಲ್ಲಿ ಕಾಣಸಿಗುತ್ತಿದ್ದ ಟಲ್ಪಾರಿನ ಕಿಟಕಿಗಳು,ಪರಾ ಬಸ್ಸಲ್ಲಿ ಅದೆಲ್ಲೋ ಒಂದು ಕಡೆ ಒಟ್ಟೆ ಆಗಿ ತೋರುತ್ತಿದ್ದು- ಬರ್ಸದ ನೀರು ಮಂಡೆಗೇ ಬೂರುತ್ತಿದ್ದದ್ದು- ರಶ್ ಆದಾಗ ಕೆಲವರ ಬೆಗರ್ ನಾರುತ್ತಿದ್ದದ್ದು ….ಎಲ್ಲವೂ ನೆನಪಿದೆ.
ತುಂಬಾ ವರ್ಷಗಳ ಹಿಂದೆ ಬೆದ್ರದಿಂದ ನಮ್ಮೂರಿಗೆ ರಾತ್ರಿ ಎಂಟಕ್ಕೆ ಬರುತ್ತಿದ್ದ ಲಾಸ್ಟ್ ಬಸ್ಸೇ ಸರಳಾ- ಅದು ಮಿಸ್ಸಾದರೆ ‘ ಬರಲಾ’ಎಂದು ರಿಕ್ಷಾದವರು ಕೇಳಬೇಕಿತ್ತು. ,ಅಪರೂಪಕ್ಕೊಮ್ಮೆ ಕೆಟ್ಟು ನಿಂತಾಗ ಅದೇ ಕಂಪೆನಿಯ ಇನ್ನೊಂದು ಬಸ್ಸಿಗೆ ಪ್ಯಾಸೆಂಜರ್ ಗಳನ್ನು ಶಿಫ್ಟ್ ಮಾಡುತ್ತಿದ್ದದ್ದು ನೆನಪಿದೆ- ಆಗ ನಮ್ಮ ಸೀಟನ್ನು ಇನ್ಯಾರೋ ಆಕ್ರಮಣ ಮಾಡುತ್ತಿದ್ದದ್ದೂ ಚೆನ್ನಾಗಿ ನೆನಪಿದೆ.
ಅವರೊಬ್ಬ ಅಮರ್: ನಮ್ಮ ಸುತ್ತಮುತ್ತ ಈ ಹೆಸರು ಪರಿಚಯ ಇಲ್ಲದವರು ಕಡಿಮೆ. ಸರಳಾ ಬಸ್ ಅಮರ್ ಎಂದರೆ ಫೇಮಸ್ ಹೆಸರು. ಹಲವು ವರ್ಷ ಈ ಬಸ್ಸಲ್ಲಿ ಕಂಡೆಕ್ಟರ್ ಆಗಿದ್ದವರು.ಆಗಿನ ಕಾಲದಲ್ಲಿ ಸಿನೆಮಾ ಹೀರೋನಂತೆ ಕಾಣುತ್ತಿದ್ದ ಮನುಷ್ಯ. ಮೃದು ಸ್ವಭಾವ. ಇನ್ನೂ ಈ ಹೆಸರು ಫೇಮಸ್ಸಾಗಲು ಅವರು ವಾಲ್ಪಾಡಿ ಪಳ್ಳಿದಬೊಟ್ಟು ( ಈಗ ನಮ್ಮ ಶಾಲೆ ಇದೆ) ನಲ್ಲಿ ಕರ್ನಾಟಕ ಮೇಳದವರ ಆಟ ಮಾಡಿಸುತ್ತಿದ್ದರು. ವರ್ಷಕ್ಕೊಂದು ಆಟ.ಆಟಕ್ಕೆ ಜನರನ್ನು ಕರ್ಕೊಂಡು ಬರಲು ಅದೇ ಸರಳಾ ಬಸ್ಸು. ಜೊತೆಗೆ ಆಟದ ಟಿಕೆಟ್ಟಿನ ಮೇಲೆ ಒಂದುಮುಡಿ ಅಕ್ಕಿಯ ಬಹುಮಾನ. ಸಿಕ್ಕವರಿಗೆ ಅರಿ- ಉಳಿದವರಿಗೆ ಕುರ್ಲರಿ !
ಆಟವೂ ಅಷ್ಟೇ ಜನರನ್ನು ಸೇರಿಸುತ್ತಿತ್ತು. ನನಗೊಂದಿಷ್ಟು ಯಕ್ಷಗಾನದ ಹುಚ್ಚು ಹಿಡಿಸಿದ್ದು ಇದೇ ಅಮರ್ ಅವರು ಮಾಡಿಸುತ್ತಿದ್ದ ಆಟ ನೋಡಿ. ನಾವು ಮಧ್ಯಾಹ್ನದವರೆಗೆ ಶಾಲೆಗೆ ಹೋಗಿ ಬಳಿಕ ಮನೆಗೆ ಬಂದು ಆಟದವರರ ಇಲ್ಚಾರ್ ಗೆ ಕೋಲು ಹಾಕಿ ಕೊಡುತ್ತಿದ್ದೆವು.ಹಾಗಾಗಿ ನಮಗೆ ಆಟ ಫ್ರೀ.ನಮ್ಮ ಮನೆ ಪಕ್ಕದಲ್ಲೇ ಆಟ ನಡೆಯುತ್ತಿದ್ದುದರಿಂದ ಬೆಳಿಗ್ಗೆ ಉಳಿದ ಚಿನ್ನಯಣ್ಣನ ಸೋಜಿ, ರಾಮಣ್ಣನ ಚಕ್ಕುಳಿ,ಕುಞಮೋನಾಕರ ಕುರ್ಲು ಪಚ್ಚೋಡಿ ಕೂಡಾ ಸಿಗುತ್ತಿತ್ತು.ಯಾವ ಮೇಳದ ಆಟ ಅಂತ ಹೇಳುವುದಕ್ಕಿಂತ ಅಮರಣ್ಣನ ಆಟ ಅಂತಲೇ ಹೆಚ್ಚು ಹೇಳುತ್ತಿದ್ದದ್ದು.
ಇನ್ನೊಂದು ವಿಷಯ ಏನೆಂದರೆ ಸರಳಾ ಬಸ್ಸಿನ ದನಿಕ್ಲೆನ ಪುದರ್ ಇವತ್ತಿಗೂ ಹೆಚ್ಚಿನವರಿಗೆ ಗೊತ್ತಿಲ್ಲ- ಇದನ್ನು ಬರೆದವನಿಗೂ ! ಆದರೆ ಸರಳಾ ಬಸ್ಸಿನ ಡ್ರೈವರ್ ಗಳ ಹೆಸರು, ಕಂಡೆಕ್ಟರ್ ಗಳ ಹೆಸರು ಇಂದಿಗೂ ನೆನಪಿದೆ.ಕಾಲುಗಂಟೆಗೊಮ್ಮೆ ಸರಳಾ ಬಸ್ಸುಗಳು ಬರುತ್ತಿದ್ದುದರಿಂದ ಬೇಟ ಸಾಯ್ಬೆರೆನ ಬಸ್, ಬಶೀರ್ ಸಾಯ್ಬೆರೆನ ಬಸ್, ನಾರಾಯಣೆರೆನ ಬಸ್ ,ಶೆಟ್ರೆನ ಬಸ್ ಅಂತಲೇ ಹೇಳುತ್ತಿದ್ದದ್ದು.ಇವರೆಲ್ಲಾ ಈ ಬಸ್ಸುಗಳಲ್ಲಿ ಬಹುಕಾಲ ಚಾಲಕರಾಗಿ ದುಡಿದು ಶಾಶ್ವತವಾಗಿ ಹೆಸರು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದವರು.
ಈ ಸರಳಾ ಬಸ್ಸಿಗೆ ನಮ್ಮೂರಿನ ಬೇಟ ಸಾಯ್ಬೆರ್, ಬಶೀರ್ ಹಾಗೂ ನಝೀರ್ ಸಾಯ್ಬೆರ್ ಅಂತ ಒಂದೇ ಮನೆಯ ಮೂವರು ಅಣ್ಣತಮ್ಮಂದಿರು ಚಾಲಕರಾಗಿ ಕಾರ್ಯನಿರ್ವಹಿಸಿರುವುದು ಸರಳಾ ಬಸ್ಸಿನ ಇತಿಹಾಸದ ಪುಟಗಳಲ್ಲಿ ಸೇರಿಸಿಕೊಳ್ಳಲೇಬೇಕಾದದ್ದು.
ಕಂಡೆಕ್ಟರ್ ಗಳೂ ಹಾಗೆ. ಒಂದರಲ್ಲಿ ಸುರೇಶ,ಇನ್ನೊಂದರಲ್ಲಿ ಗಣೇಶ, ಮತ್ತೊಂದರಲ್ಲಿ ಹರೀಶ.ನಾರಾವಿಯ ಕೃಷ್ಣಪ್ಪ- ಕ್ಲೀನರ್ ಮೋನಪ್ಪ. ಇವರು ಕೂಡಾ ಜನರ ಅಚ್ಚುಮೆಚ್ಚಿಗೆ ಪಾತ್ರರಾದವರು.
ಅಳಿಯೂರಿನ ಗೊಂಡೆರ್, ಪುತ್ತೂರಿನ ಪ್ರವೀಣೆರ್, ಕುತ್ಲೂರಿನ ವಸಂತೆರ್, ಮರೋಡಿಯ ಅಸ್ಲಮ್,ಶಿರ್ತಾಡಿಯ ವಿಜಯ ಶೆಟ್ಟಿ, ಐತಪ್ಪ ಶೆಟ್ಟಿ, ದಯಾನಂದ ,ಹೊಸ್ಮಾರಿನ ಬಶೀರ್, ರಂಜಿತ್,ವಾಲ್ಪಾಡಿಯ ಹಮೀದಾಕ, ಶಿರ್ತಾಡಿಯ ನಝೀರ್ …..ಇವರೆಲ್ಲಾ ಸರಳಾ ಬಸ್ಸಿನ ಸಾರಥಿಗಳಾಗಿ, ಸಮಗ್ರ ನಿರ್ವಾಹಕರಾಗಿ ಕೆಲಸ ಮಾಡಿ ಸರಳಾದ ಕಲೆಕ್ಷನ್ ಮತ್ತು ಹೆಸರನ್ನು ಹೆಚ್ಚಿಸಿದವರು.ಇನ್ನೂ ಕೆಲವರು ದುಡಿದಿದ್ದಾರೆ- ಹೆಸರು ನೆನಪಿಲ್ಲ.
ಇವರೆಲ್ಲರ ಪೈಕಿ ನನ್ನ ಆತ್ಮೀಯ ಶಿರ್ತಾಡಿಯ ನಝೀರ್ ಸಾಯ್ಬೆರ್. ಅವರೀಗ ವಿದೇಶದಲ್ಲಿದ್ದಾರೆ.ವರ್ಷಕ್ಕೊಮ್ಮೆ ಊರಿಗೆ ಬಂದಾಗ ನಾವಿಬ್ಬರೂ ಗತಕಾಲವನ್ನು ನೆನಪು ಮಾಡಿಕೊಂಡು ತೆಲ್ಪು ತೆಲ್ಪಾಗಿ ನೆಗಡುವುದಿದೆ.ನಾನವರಲ್ಲಿ ತುಳುವಿನಲ್ಲೇ ಮಾತನಾಡುವುದು. ಅವರೋ ‘ದುಂಬುದಲೆಕ ಇಜ್ಜಿ ‘ ಎನ್ನುತ್ತಿರುತ್ತಾರೆ. ಅಂದರೆ ಆ ಕಾಲದ ಗಮ್ಮತ್ತು,ಫ್ರೆಂಡ್ ಶಿಪ್ ಎಲ್ಲಾ ಈಗ ಮಯಕ್ಕವಾಗಿದೆ ಎನ್ನುವುದು. ಅವರು ಕೂಡಾ ಕಾರ್ಬಾರ್ ಮಾಡಿದವರು.ಸರಳಾ ಬಸ್ಸಲ್ಲಿ ಕೆಲಕಾಲ ಚಾಲಕರಾಗಿ ಈ ಭಾಗದ ಜನರ ಗಮನಸೆಳೆದವರು.ಅವರಿಗೆ ಈ ಹಿಂದಿನಂತೆ ಈಗಲೂ ನೆಟ್ವರ್ಕ್ ಇದೆ.ಆ ಅತ್ಮೀಯತೆ,ಗೆಳೆತನವನ್ನು ಈಗಲೂ ಉಳಿಸಿಕೊಂಡಿದ್ದಾರೆ.ಅವರೊಬ್ಬ ದೊಡ್ಡ ಕ್ರಿಕೆಟ್ ಆಟಗಾರ.ದೊಡ್ಡ ಹೆಸರುಗಳಿಗೆ ಹೆಸರುವಾಸಿ.ಬೆಳುವಾಯಿಯ ಮೈದಾನದಲ್ಲಿ ಹೊಡೆದ ಸಿಕ್ಸರ್ ಗಳು ಇಂದಿಗೂ ದಾಖಲೆಯಾಗಿಯೇ ಇದೆ.
ಒಂದುಕಾಲದಲ್ಲಿ ತನ್ನದೇ ಸಾಮ್ರಾಜ್ಯ ಎನ್ನುವ ರೀತಿಯಲ್ಲಿ ಅದೆಷ್ಟೋ ರೌಂಡ್ ಸುತ್ತಾಡಿದ್ದ ಸರಳಾ ಬಸ್ಸುಗಳ ಪೈಕಿ ಈಗ ಒಂದೂ ಕಾಣುತ್ತಿಲ್ಲ.ನೆಕ್ಸ್ಟ್ ಬಸ್ ಒವ್ ಎಂದು ಕೇಳಿದರೆ ಸರಳಾ ಎನ್ನುವ ಉತ್ತರವೇ ಬರುತ್ತಿತ್ತು.ಈಗ ಆ ಹೆಸರೇ ಇಲ್ಲದಂತಾಗಿದೆ.ಏನೇ ಹೇಳಿ, ನಮ್ಮೂರಲ್ಲಿ ಮಿಂಚಿದ್ದ ಆ ಬಸ್ಸುಗಳನ್ನು ಮರೆಯಲು ಸಾಧ್ಯನೇ ಇಲ್ಲ, ಮರೆಯುವುದೂ ಇಲ್ಲ.
ಸುಮ್ಮನೆ ಕೂತಿದ್ದವನಿಗೆ ಸರಳಾ ಬಸ್ಸು ನೆನಪಾಯಿತು…ಜೊತೆಗೆ ಅಂದಿನ ದಿನಗಳ ಆ ಮಧುರವಾದ ದಿನಗಳು. ಮಧುರವಾದ ದಿನಗಳನ್ನು ನೆನಪಿಸಿಕೊಂಡು ಕೂತಿದ್ದವನಿಗೆ ಹೆಂಡತಿ ಚಪ್ಪೆ ಚಾ ತಂದುಕೊಟ್ಟಳು !
ಅದ್ಯಾಕೋ ಗೊತ್ತಿಲ್ಲ..ಸರಳಾ ಬಸ್ಸು ನೆನಪಾದಾಗಲೆಲ್ಲಾ ಆ ಹಾಡು ನೆನಪಾಗುತ್ತದೆ.
“ಪೆಹ್ಲೀ ಪೆಹ್ಲೀ ಬಾರ್ ಮಿಲಾತಾ ಹೈ ಅಹೀ..
ಸೀನೆ ಮೇ ಫಿರ್ ಆಗ್ಲಾ ಗಾತಾ ಹೈ
ಧೀರೆ ಧೀರೆ ಪ್ಯಾರ್ ಸಿ ಕಾತಾ ಹೈಅಹೀ ….
ಹಸಾತಾ ಹೈ ಅಹೀ
ಏ ಹೀರೋ ಲಾತಾ ಹೈ …
ದಿಲ್ ತೋ ಪಾಗಲ್ ಹೈ
ದಿಲ್ ದೀವಾನಾ ಹೈ …”
ಅಂದಹಾಗೆ ..
ಹದಿನಂಟು ಹತ್ತೊಂಭತ್ತರಲ್ಲಿ ಒಂಥರಾ ಮರ್ಲ್ ಹಿಡಿಸಿದ್ದ ಈ ಹಾಡನ್ನು ಹಾಡಿದರು ಲತಾ ಮಂಗೇಶ್ಕರ್ ಮತ್ತು ಉದಿತ್ ನಾರಾಯಣ್ !
(ಪುರುಸೊತ್ತಾದರೆ ಇನ್ನೊಮ್ಮೆ ಭೇಟಿಯಾಗೋಣ)






