ಸರ್ವರ ಉತ್ಸವವಾಗುತ್ತಿದೆ… ಬೆದ್ರ ಗಣೇಶೋತ್ಸವ. *ಇದುವೇ ನಿಜವಾದ ‘ಬೆದ್ರೋತ್ಸವ’ !

Picture of Namma Bedra

Namma Bedra

Bureau Report

-ಅಶ್ರಫ್ ವಾಲ್ಪಾಡಿ
ತನ್ನದೇ ಆದ ಸುದೀರ್ಘ ವರ್ಷಗಳ ಇತಿಹಾಸ ಹೊಂದಿರುವ ಬೆದ್ರ ಗಣೇಶೋತ್ಸವವು ಕಳೆದ ನಾಲ್ಕು ದಿನಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಇಂದು ಕೊನೆಯ ದನ.ಸಂಜೆ ನಡೆಯುವ ವಿಸರ್ಜನಾ ಮೆರವಣಿಗೆಯಲ್ಲಿಂದು ಜನಸಾಗರದ ನಿರೀಕ್ಷೆಯಿದ್ದು ಯಾವುದಕ್ಕೂ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದ ಬೆಳಗ್ಗಿನಿಂದಲೇ ಪೇಟೆಗೆ ಬರುವ ವಾಹನಗಳಿಗೆ ಪೊಲೀಸರು ನಿರ್ಬಂಧಿಸಿದ್ದಾರೆ.ಹಾಗಾಗಿ ಅಲ್ಲಲ್ಲಿ ಪಾರ್ಕಿಂಗ್ ಇಲ್ಲದೆ ವವಿಧ ತಂಡಗಳ ಆಕರ್ಷಣೀಯ ಹುಲಿಕುಣಿತ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಸರ್ಜನಾ ಮೆರವಣಿಗೆ ಸುಸೂತ್ರವಾಗಿ ನಡೆಯಲಿದೆ.
ಕಳೆದ 61 ವರ್ಷಗಳಿಂದ ಇಲ್ಲಿನ ಗಣೇಶೋತ್ಸವವು ಸಮಾಜ ಮಂದಿರದಲ್ಲಿ ನಡೆಯುತ್ತಾ ಬಂದಿದೆ. ಆರಂಭದಲ್ಲಿ ಯಾರ ಸಾರಥ್ಯ ಎಂಬ ನೆನಪಿಲ್ಲ.ಬಳಿಕದ ವರ್ಷಗಳಲ್ಲಿ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಕೆ.ಶ್ರೀಪತಿ ಭಟ್ ಅಧ್ಯಕ್ಷರಾಗಿದ್ದು ಈ ವರ್ಷ ಉದ್ಯಮಿ ನಾರಾಯಣ ಪಿ.ಎಂ.ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ.


ಉಭಯ ಜಿಲ್ಲೆಯನ್ನು ಗಮನಿಸಿದರೆ ಇಲ್ಲಿನ ಗಣೇಶೋತ್ಸವ ವಿಶಿಷ್ಟ. ಐದು ದಿನಗಳ ಈ ಉತ್ಸವದಲ್ಲಿ ಭಾರೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಾರೆ.ಮೂಡುಬಿದಿರೆಯಲ್ಲಿ ಹಿಂದೂ,ಮುಸ್ಲಿಂ, ಕ್ರೈಸ್ತರು ಭಾಗವಹಿಸರೆಲ್ಲಾ ಯಾವುದೇ ಬೇಧ ಭಾವವಿಲ್ಲದೆ ಪಾಲ್ಗೊಳ್ಳುವ ಬೆದ್ರದ ಅತೀ ದೊಡ್ಡ ಉತ್ಸವವೆಂದರೆ ಅದು ಇಲ್ಲಿನ ಚೌತಿ ಉತ್ಸವ. ಇದು ಒಂದರ್ಥದಲ್ಲಿ ನಿಜವಾದ ‘ ಬೆದ್ರೋತ್ಸವ ‘ !


ಇಲ್ಲಿ ಯಾರೂ ಬರಬಹುದು,ಪಾಲ್ಗೊಳ್ಳಬಹುದು,ಅನ್ನದಾನದಲ್ಲಿ ಪಾಲ್ಗೊಳ್ಳಬಹುದು,ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು…..ಯಾವ ಜಾತಿ ಬೇಧ,ಧರ್ಮಬೇಧವೂ ಇಲ್ಲ. ದಿನವಿಡೀ ಉಪಹಾರ,ಊಟ ಅಂತ ಭಾಗಬಹಿಸುವ ಅಷ್ಟೂ ಜನರಿಗೆ ಯಾವ ರೀತಿಯಲ್ಲೂ ಕಡಿಮೆಯಾಗದಂತೆ ವ್ಯವಸ್ಥೆ ಮಾಡುತ್ತಾರೆ. ಸ್ವಯಂ ಸೇವಕರು ಕೂಡಾ ತಾಳ್ಮೆಯಿಂದ, ಪ್ರೀತಿಯಿಂದ ಬಡಿಸುತ್ತಾರೆ. ಇಲ್ಲಿ ಯಾರೂ ಸ್ವಯಂ ಸೇವಕರಾಗಬಹುದು.ಅವರವರ ಸ್ವ ಇಚ್ಛೆಯಿಂದ ಯಾವುದಾದರೊಂದು ಕೆಲಸವನ್ನು ಕೈಗೆತ್ತಿಕೊಂಡು ದೇವರ ಸೇವೆಯ ರೂಪದಲ್ಲಿ ಕಾರ್ಯನಿರ್ವಹಿಸುತ್ತಾರೆ.ಮಹಿಳೆಯರು ಕೂಡಾ ಸ್ವಯಂ ಸೇವಕರಾಗಿ ಯಶಸ್ಸಿಗೆ ಸಹಕರಿಸುತ್ತಾರೆ.ಹೋದ ಯಾವ ಟೈಮಲ್ಲೂ ‘ ವನಸ್ ಮಲ್ತರಾ, ಚಾ ಪರಿಯರಾ ‘ ಎಂದು ಕೇಳುವ ಸ್ವಯಂ ಸೇವಕರು,ಸಮಿತಿ ಪದಾಧಿಕಾರಿಗಳು ಪ್ರೀತಿಯಿಂದ ಕೇಳಿ ಉಪಚರಿಸುವುದರಿಂದ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ.ಹಾಗಾಗಿಯೇ ಇಲ್ಲಿಗೆ ಸರ್ವಧರ್ಮೋಯರೂ ಪಾಲ್ಗೊಂಡು ಪ್ರಸಾದ ಸ್ವೀಕರಿಸಿಕೊಂಡು ಬರುತ್ತಾರೆ.


ಕೊನೆಯ ದಿನ ( ಇಂದು) ನಡೆಯುವ ವಿಸರ್ಜನಾ ಮೆರವಣಿಗೆ ನೋಡುವುದೇ ವಿಶೇಷ ಅನುಭವ ನೀಡುತ್ತದೆ.ಇದರ ವೀಕ್ಷಣೆಗಾಗಿ ಈ ಪರಿಸರದ,ದೂರದ ಗ್ರಾಮಗಳಿಂದ ಯಾವ ಜಾತಿಬೇಧವಿಲ್ಲದೆ ಸಕುಟುಂಬಿಕರಾಗಿ ಭಾಗವಹಿಸುತ್ತಾರೆ.
ಇಲ್ಲಿ ನಾಲ್ಕೈದು ಪ್ರತಿಷ್ಠಿತ ತಂಡಗಳ ಹುಲಿಕುಣಿತವಿದೆ.ಹೆಣ್ಣು ಹುಲಿಗಳೂ ಆಕರ್ಷಣೀಯ. ಲೋಕಲ್ ತಂಡಗಳೂ ಸದ್ದು ಮಾಡುತ್ತದೆ.ಕೆಲವೆಡೆ ಸಾಂಸ್ಕೃತಿಕ ಕಾರ್ಯಕ್ರಮ.ಅಂತೂ ಇಂದು ಇಡೀ ದಿನ ಬೆದ್ರ ತುಂಬಾ ರಶ್..ರಶ್..ರಶ್ !
ಹುಲಿಕುಣಿತ ತಂಡಗಳ ಊದುಪೂಜೆ ಕಳೆದ ರಾತ್ರಿ ಸಂಭ್ರಮದಿಂದ ನಡೆದಿದೆ.ಒಂದೊಂದು ತಂಡವು ದೊಡ್ಡ ಸಂಖ್ಯೆಯ ಖರ್ಚು ಮಾಡುತ್ತದೆ.ಇತ್ತೀಚಿನ ದಿನಗಳಲ್ಲಂತೂ ಈ ಹುಲಿಕುಣಿತ ನೋಡಲೆಂದೇ ಊರ- ಪರವೂರಿನ ಜನರು ಸೇರುತ್ತಾರೆ.ಇನ್ನೂ ಒಂದು ವಿಶೇಷವೆಂದರೆ ಉದ್ಯೋಗ ನಿಮಿತ್ತ ಹೊರಜಿಲ್ಲೆ,ಹೊರರಾಜ್ಯದಲ್ಲಿರುವ ಬೆದ್ರದವರು ಈ ಗಣೇಶ ಹಬ್ಬದ ಸಂದರ್ಭದಲ್ಲಿ ಊರಿಗೆ ಬರುತ್ತಾರೆ,ಯಶಸ್ಸಿಗೆ ಸಹಕರಿಸುತ್ತಾರೆ.


ಈ ಐದು ದಿನಗಳಲ್ಲಿ ಬೆದ್ರದ ಅಂಗಡಿಗಳಿಗೆ,ಹೊಟೇಲ್ ಗಳಿಗೆ, ರಸ್ತೆ ಬದಿಯ ವ್ಯಾಪಾರಿಗಳಿಗೆ,ಪಾನೀಪೂರಿ ಬಯ್ಯನವರಿಗೆ ,ಪುಗ್ಗ ಮಾರುವವರಿಗೆ,ಜೋಕ್ಲಾಟಿಕೆ ಮಾರುವವರಿಗೆ ಒಂದಿಷ್ಟು ಬ್ಯಾರ ಹೆಚ್ಚು.
ಪೊಲೀಸರಿಗೆ ಕಷ್ಟವಾಗಬಾರದೆಂದು ವಿಸರ್ಜನಾ ದಿನ ಅಲ್ಲಲ್ಲಿ ಸಮಿತಿಯ ಪದಾಧಿಕಾರಿಗಳೂ ಕಾರ್ಯನಿರ್ವಹಿಸಿ ಸಹಕರಿಸುತ್ತಾರೆ.
ಅಂತೂ ಬೆದ್ರದ ಈ ಉತ್ಸವ ಸರ್ವರ ಉತ್ಸವವಾಗಿ ಗಮನಸೆಳೆಯುತ್ತಿದ್ದು ಈ ಸೌಹಾರ್ದ ಪರಂಪರೆ ಇನ್ನೂ ಮುಂದುವರಿಯಲಿ ಎಂಬ ಆಶಯ ನನ್ನದು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top