ಅಲ್ಲ, ಇವನಿಗೆಂತ ಮರ್ಲ್ ಅಂತ ಗೊತ್ತಾಗುತ್ತಿಲ್ಲ.ಪೊಲೀಸ್ ಇಲಾಖೆಯಲ್ಲಿ ನೆಟ್ಟಗೆ ಕೆಲಸ ಮಾಡುವುದನ್ನು ಬಿಟ್ಟು ಈ ರೀತಿಯ ಕೆಲಸ ಮಾಡೋದ?
‘ಕಾನೂನು ಎಲ್ಲರಿಗೂ ಒಂದೇ’ ಎನ್ನುವುದನ್ನು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಬೆದ್ರ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ಈ ಪ್ರಕರಣದಲ್ಲಿ ತೋರಿಸಿಕೊಟ್ಟಿದ್ದಾರೆ.
ಆತ ಶಾಂತಪ್ಪ. ಕೊಪ್ಪಳ ಜಿಲ್ಲೆಯವನು.ಪೊಲೀಸ್ ಇಲಾಖೆಗೆ ಸೇರಿದವ ಮೂಡುಬಿದಿರೆ ಠಾಣೆಯಲ್ಲಿ ಮೊದಲಬಾರಿಗೆ ಕೆಲಸಕ್ಕೆ ಸೇರಿ ಕಳೆದ ಕೆಲ ಸಮಯಗಳಿಂದ ಕರ್ತವ್ಯ ನಿರ್ವಹಿಸಿದ್ದ.
ಕೆಲ ದಿನಗಳ ಹಿಂದೆ ಈ ಭಾಗದ ಮಹಿಳೆಯೊಬ್ಬರು ಯಾವುದೋ ಪ್ರಕರಣವೊಂದಕ್ಕೆ ಸಂಬಂಧಿಸಿ ದೂರು ನೀಡಲು ಠಾಣೆಗೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಸೆಂಟ್ರಿ ಆಗಿದ್ದವನು ಇದೇ ಶಾಂತಪ್ಪ.
ಠಾಣೆಗೆ ಬಂದವರ ವಿಳಾಸ,ಮೊಬೈಲ್ ನಂಬರನ್ನು ಠಾಣೆಯ ವಿಸಿಟರ್ಸ್ ಬುಕ್ಕಲ್ಲಿ ದಾಖಲು ಮಾಡುವುದು ಆ ದಿನದ ಸೆಂಟ್ರಿಯ ಕೆಲಸ.ಅದನ್ನು ಆ ದಿನ ಶಾಂತಪ್ಪ ಮಾಡಿದ್ದಾನೆ.
ಮಹಿಳೆಯ ದೂರನ್ನು ಇನ್ಸ್ಪೆಕ್ಟರ್ ಸಂದೇಶ್ ಅವರು ಬಗೆಹರಿಸಿ ಮನೆಗೆ ಕಳುಹಿಸಿದ್ದಾರೆ.ಆದರೆ ಎರಡು ದಿನ ಕಳೆದ ನಂತರ ಇದೇ ಶಾಂತಪ್ಪ ತಾನು ದಾಖಲಿಸಿಕೊಂಡಿದ್ದ ಆಕೆಯ ಮೊಬೈಲ್ ನಂಬರ್ ಗೆ ಕರೆಮಾಡಿ ಪೀಡಿಸಿದ್ದಾನೆ.ಮತ್ತೆ ಮತ್ತೆ ಕರೆ ಮಾಡಿದ್ದಾನೆ.ಆದರೆ ಆಕೆ ಕರೆಯನ್ನು ಸ್ವೀಕರಿಸದೆ ಮನೆಯವರಲ್ಲಿ ತಿಳಿಸಿದ್ದಾರೆ.ಮನೆಯವರು ಠಾಣೆಗೆ ಬಂದು ಸಂದೇಶ್ ಅವರಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಆತನನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಆದರೆ ತನ್ನದೇ ಠಾಣೆಯ ಸಿಬ್ಬಂದಿ ಎಂದು ಆತನನ್ನು ಬಚಾವ್ ಮಾಡುವ ಪ್ರಯತ್ನಕ್ಕೆ ಸಂದೇಶ್ ಅವರು ಮುಂದಾಗಲಿಲ್ಲ.ಈ ಬಗ್ಗೆ ನೇರವಾಗಿ ಕಮಿಷನರ್ ಅವರ ಗಮನಕ್ಕೆ ತಂದಿದ್ದಾರೆ.
ಕಮಿಷನರ್ ಅವರು ಕಾನೂನು ಬಿಟ್ಟು ಹೋಗುವವರಲ್ಲ.ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು,ಕಾನೂನು ಪೊಲೀಸರಿಗೂ ಒಂದೇ- ಇತರರಿಗೂ ಒಂದೇ ಎಂಬ ಪಾಲಿಸಿಯವರು.ಆತನ ವಿರುದ್ಧ ಎಫ್.ಐ.ಆರ್ ದಾಖಲಿಸಿ ಎಂದು ಆದೇಶಿಸಿದ್ದಾರೆ.ಮೇಲಾಧಿಕಾರಿಗಳ ಆದೇಶದಂತೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ಶಾಂತಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.






