ರಾತ್ರಿ ಹೊತ್ತು ಕಂಗಾಲಾಗಿದ್ದವರನ್ನು ಕಾರು ಮಾಡಿ ಮನೆಗೆ ತಲುಪಿಸಿದ ಹನೀಫ್ ರಹ್ಮಾನಿಯಾ *ಸಮಾಜ ಸೇವಕನ ಮತ್ತೊಂದು ಮಾನವೀಯ ಸೇವೆ

Picture of Namma Bedra

Namma Bedra

Bureau Report

ಹನೀಫ್ ರಹ್ಮಾನಿಯ. ಈ ಹೆಸರು ಕೇಳದವರು ಮೂಡುಬಿದಿರೆಯಲ್ಲಿ ಕಡಿಮೆ.ಸದಾ ಸಮಾಜಸೇವೆಯಲ್ಲೇ ತೊಡಗಿಸೊಕೊಂಡು ಅದೆಷ್ಟೇ ರಾತ್ರಿಯಾದರೂ ಬಡ ಜನರಿಗೆ,ಅಶಕ್ತರಿಗೆ ನೆರವಾಗುತ್ತಾ, ಆಸ್ಪತ್ರೆಗೆ ದಾಖಲಿಸುವಲ್ಲಿ, ರಕ್ತದ ಅವಶ್ಯಕತೆ ಇದ್ದವರಿಗೆ ಕೂಡಲೇ ವ್ಯವಸ್ಥೆ ಮಾಡಿಕೊಡುವ ಪುಣ್ಯಾತ್ಮನೀತ.
ಹಲವಾರು ಜನೋಪಕಾರಿ ಕೆಲಸಗಳ ಮೂಲಕ ,ಮಾನವೀಯ ಸೇವೆಗಳ ಮೂಲಕ ಗಮನಸೆಳೆದ ಹೆಸರು ಹನೀಫ್ ರಹ್ಮಾನಿಯಾ.
ಮಂಗಳವಾರ ರಾತ್ರಿ ಮೂಡುಬಿದಿರೆಯಲ್ಲೊಂದು ಪ್ರಸಂಗ ನಡೆಯಿತು. ದೂರದ ಗದಗದವರಾಗಿರುವ ಇಬ್ಬರು ಮನೆಗೆ ಹೋಗಲು ಬಸ್ಸು ಅಥವಾ ಇನ್ನಾವುದೇ ವಾಹನವಿಲ್ಲದೆ ಅಸಹಾಯಕರಾಗಿ ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಪಕ್ಕದಲ್ಲಿ ತಿರುಗಾಡುತ್ತಿದ್ದರು.ಅವರಿಬ್ಬರೂ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಅಡುಗೆ ಸಿಬ್ಬಂದಿಗಳು.ಅವರ ಪೈಕಿ ಒಬ್ಬನ ತಾಯಿ ಊರಲ್ಲಿ ಮೃತಪಟ್ಟಿದ್ದು ಊರಿಗೆ ಹೋಗಲು ಬೆದ್ರ ಸ್ಟಾಂಡಿಗೆ ಬಂದಿದ್ದರು.
ರಾತ್ರಿ ಹನ್ನೊಂದೂವರೆಯ ಸಮಯ.ಹನೀಫ್ ಅವರ ಬೆದ್ರ ಕೆಫೆ ಅಲ್ಲೇ ಇರುವುದರಿಂದ ಇವರಿಬ್ಬರ ತಿರುಗಾಟ,ಅಸಹಾಯಕತೆ,ಅವರ ಕಂಗಾಲು ಹನೀಫ್ ಅವರ ಗಮನಕ್ಕೆ ಬರುತ್ತದೆ.ಅಳುತ್ತಿರುವ ಅವರನ್ನು ಹತ್ತಿರಕ್ಕೆ ಕರೆದು ವಿಚಾರಿಸಿದಾಗ ಅವರ ಅಸಹಾಯಕತೆಯನ್ನು ವಿವರಿಸುತ್ತಾರೆ.ಕೂಡಲೇ ಅವರ ಕಣ್ಣೀರೊರಸುವ ಕೆಲಸಕ್ಕಿಳಿದ ಹನೀಫ್ ಅವರು ಅವರಿಗೆ ಧೈರ್ಯ ತುಂಬುತ್ತಾರೆ.
ಕೂಡಲೇ ಕಾರೊಂದನ್ನು ತರಿಸಿ ಅವರನ್ನು ಊರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಸಾಸ್ತಾನದವರೆಗೆ ಅವರನ್ನು ಕಾರಲ್ಲಿ ಕರೆದೊಯ್ದು ಅಲ್ಲಿಂದ ಊರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ವಾಪಾಸು ಬರುವಾಗ ಬೆಳಗ್ಗಿನ ಜಾವ ಮೂರೂವರೆ.
ಅಸಹಾಯಕರಿಗೆ ನೆರವಾಗಿ ಮಾನವೀಯ ಸೇವೆ ಮಾಡಿದ ಹನೀಫ್ ಅವರ ಈ ಒಂದು ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಹನೀಫ್ ಅವರ ಜೊತೆಗೆ ಹಫೀಝ್ ತೋಡಾರ್, ರಿಝ್ವಾನ್ ತೋಡಾರ್ ಅವರು ಕಾರಿನಲ್ಲಿ ಹೋಗಿ ನೆರವಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top