ಇಷ್ಟು ಬೇಗ ಹೀಗಾಗಬಾರದಿತ್ತು. ಒಕ್ಕೆಲ್ ಆಗಿ ಇನ್ನೂ ಮೂರು ತಿಂಗಳಾಗಲಿಲ್ಲ.ಅದೂ ಉಸ್ತುವಾರಿ ಮಂತ್ರಿ ಬಂದು ಒಕ್ಕೆಲ್ ಮಾಡಿದ್ದು.ಅಂದು ಸಜ್ಜಿಗೆ, ಉಪ್ಪಿಟ್ಟಿನ ಟೇಸ್ಟನ್ನು ಹಾಲಿ- ಮಾಜಿ ಸಚಿವರ ಸಹಿತ ಹಲವಾರು ಮಂದಿ ಸವಿದಿದ್ದರು. ಸಾಲಾಗಿ ನಿಂತು ಮಧ್ಯಾಹ್ನದ ಗಂಜಿ ಊಟ ಮಾಡಿದ್ದರು.’ಎಡ್ಡೆ ಉಂಡು,ಎಡ್ಡೆ ಉಂಡು’ ಅಂತ ಇನ್ನೊಂದು ರೌಂಡ್ ತೆಲಿಗಂಜಿ ಹಾಕಿಸಿಕೊಂಡಿದ್ದರು.
ಕೆಲವರಂತೂ ಯಾನೊರ ,ಯಾನೊರ ಅಂತ ಬಡಿಸುವ ಮುತುವರ್ಜಿ ವಹಿಸಿಕೊಂಡಿದ್ದರು.ಮತ್ತೆ ಕೆಲವು ಸಮಯ ಇಲ್ಲಿನ ಲೋಕಲ್ ಜನಪ್ರತಿನಿಧಿಗಳು ಕಾಂಡೆ-ಮಧ್ಯಾಹ್ನ ಅಂತ ಹೋಗಿ ಬಡಿಸುವಲ್ಲಿ ನೆರವಾಗಿ ಆ ಫೊಟೋಗಳನ್ನು ತಮ್ಮ ಸ್ಟೇಟಸ್ ಗಳಲ್ಲಿ ಹಾಕಿಕೊಂಡು ಕುಷಿಪಟ್ಟಿದ್ದರು.ಅದೆಲ್ಲಾ ಕಾಂಗ್ರೆಸಿಗರ ಹೆಮ್ಮೆಯಾಗಿತ್ತು.ನಮ್ಮದೇ ಸರಕಾರದ ವತಿಯಿಂದ ಮಂಜೂರಾದ ಬಡವರ ಕ್ಯಾಂಟೀನ್ ಎಂಬ ಅಭಿಮಾನ. ಬಡ ಜನರಿಗೆ ಕಡಿಮೆ ದರದಲ್ಲಿ ಊಟ,ತಿಂಡಿ ಸಿಗುವ ಕ್ಯಾಂಟೀನ್ ಮೂಡುಬಿದಿರೆಗೂ ಬಂತಲ್ಲಾ ಎಂಬ ಸಂತಸ ಅವರದ್ದು. ಹೀಗೆ ಬಡಿಸಿದವರ ಪೈಕಿ ಕೆಲವರು ಬೇರೆ ಹೋಟೆಲ್ ಗೆ ಹೋಗಿ ಊಟಮಾಡಿ ಬಂದಿದ್ದಾರೆ.ಅದು ವಿಷಯ ಬೇರೆ!
ಇಷ್ಟೆಲ್ಲಾ ಅಬ್ಬರದ ಪ್ರಚಾರ ಪಡೆದ ಈ ಇಂದಿರಾ ಕ್ಯಾಂಟೀನ್ ನಲ್ಲಿ ಈಗ ಸರಿಗಟ್ಟಾಗಿ ಎರಡು ಇಡ್ಲಿ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಬರುಬರುತ್ತಾ ಇಂದಿರಾ ಕ್ಯಾಂಟೀನ್ ಈಗ ಅಲಕ್ಕ ಫೈಲ್ ಆಗುತ್ತಿದೆ.ಇಲ್ಲಿ ಪೈಪೋಟಿಯಲ್ಲಿ ಬಡಿಸಲು ಬರುತ್ತಿದ್ದವರು ಈಗ ಮೂಸಿಯೂ ನೋಡುತ್ತಿಲ್ಲ.ಸಂಬಂಧಪಟ್ಟ ಅಧಿಕಾರಿಗಳು ಉದ್ಘಾಟನೆ ದಿನದಂದು ಲಾಡು ತಿಂದು ಹೋದವರು ಮತ್ತೆ ಬರಲಿಲ್ಲ. ಸಿಬ್ಬಂದಿ ವರ್ಗದವರು ಕೆಲವರಿದ್ದರು.ಅದರಲ್ಲಿ ಕೆಲವರು ಸಂಬಳ ಬರಲಿಲ್ಲ ಅಂತ ಹೋದವರು ಮತ್ತೆ ಬರಲಿಲ್ಲ. ಈಗ ಒಬ್ಬರು ಮಹಿಳೆ ಮಾತ್ರ ಇದ್ದಾರೆಂದು ಹೇಳಲಾಗುತ್ತಿದೆ.
ಬೆಳಿಗ್ಗೆ ಬೇಗನೇ ಓಪನ್ ಆಗಬೇಕಿದ್ದ ಕ್ಯಾಂಟೀನ್ ಎಂಟು ದಾಟಿದರೂ ಬಾಗಿಲು ತೆರೆಯುತ್ತಿಲ್ಲ. ಇಡ್ಲಿ,ವಡ,ಉಪ್ಪಿಟ್ಟಿನ ಪರಿಮಳವಿಲ್ಲ.ಮಧ್ಯಾಹ್ನ ಕೆಲವೊಮ್ಮೆ ಐದು ಗಂಜಿ ಹೋಗುತ್ತದೆಯಂತೆ.
ಹೀಗೆಲ್ಲಾ ಆಗಲು ಕಾರಣವೇನು? ಅಂತ ಕೇಳಿದರೆ ‘ಟೆಂಡರ್ ವಹಿಸಿಕೊಂಡವರು ಇಲ್ಲಿನವರ ಬೇಡಿಕೆಗೆ ಸ್ಪಂದಿಸುತ್ತಿಲ್ಲ’ ಎಂಬ ಉತ್ತರ ಬರುತ್ತಿದೆ.ಟೆಂಡರ್ ವಹಿಸಿಕೊಂಡವ ಅದೆಲ್ಲೋ ದೂರದ ಬೆಂಗಳೂರಿನವನು.ಆತನಿಗೇನು ಗೊತ್ತು ಇಲ್ಲಿನವರ ತಿಂಡಿರುಚಿ ?
ಇದು ಹೀಗೇ ಮುಂದುವರಿದರೆ ಇಂದಿರಾ ಕ್ಯಾಂಟೀನ್ ಬಾಗಿಲು ಮುಚ್ಚಿಕೊಳ್ಳುವುದರಲ್ಲಿ ಯಾವ ಡೌಟೂ ಇಲ್ಲ.






