ಇರುವೈಲು ಪಂಚಾಯತ್ ಗೆ ಹೋಗಲು ಎರಡೂವರೆ ಕಿ.ಮೀ. ನಡೆಯಬೇಕು! *ಲ್ಯಾಂಡ್ ಕಾಂಪ್ಲಿಕೇಷನ್ *ಹೊಸ ಕಟ್ಟಡವೇ ಅಕ್ರಮ?

Picture of Namma Bedra

Namma Bedra

Bureau Report

ಇರುವೈಲು ಗ್ರಾಮ ಪಂಚಾಯತ್ ನ ಹೊಸ ಕಟ್ಟಡಕ್ಕೂ- ಕಾಂಪ್ಲಿಕೇಷನ್ ಗಳಿಗೂ ಕೈತಲ್ ಕೈತಲ್ ನ ಸಂಬಂಧವಿದೆ ಎಂದು ಕಾಣುತ್ತಿದೆ.
ಇದೀಗ ಈ ಪಂಚಾಯತ್ ಕಚೇರಿಗೆ ಹೋಗಬೇಕಾದರೆ ಎರಡೂವರೆ ಕಿ.ಮೀ.ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಭಾಗದ ಜನಸಾಮಾನ್ಯರು ಸಮಸ್ಯೆಯಲ್ಲಿದ್ದಾರೆ.
ಖಂಡಿತ ಇಲ್ಲೊಂದು ಸಮಸ್ಯೆ ಇದೆ ಅಂತ ತಿಳಿದುಕೊಂಡು ಆ ಸಮಸ್ಯೆಗೆ ಕಾರಣ ಹುಡುಕುತ್ತಾ ಹೋದರೆ ಲೋಕಲ್ ರಾಜಕೀಯವೇ ಕಂಡುಬರುತ್ತದೆ.
ಹೊಸಬೆಟ್ಟು ಪಂಚಾಯತ್ ನಿಂದ ಬೇರ್ಪಟ್ಟ ಇರುವೈಲು ಪಂಚಾಯತ್ ಕೆಲ ಸಮಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಿತ್ತು.
ತಮ್ಮದೇ ಒಂದು ಸ್ವಂತ ಕಟ್ಟಡ ಬೇಕು ಅಂತ ತೀರ್ಮಾನಿಸಿದ್ದ ಅಂದಿನ ಪಂಚಾಯತ್ ಅಧ್ಯಕ್ಷ,ಸೀನಿಯರ್ ಮೋಸ್ಟ್ ಪಾಲಿಟಿಷಿಯನ್ ವಲೇರಿಯನ್ ಕುಟಿನ್ಹೊ ಅವರು ನಿರ್ಧರಿಸಿ ಸ್ವಂತ ಕಟ್ಟಡಕ್ಕೆ ಕೈ ಹಾಕಿದ್ದರು.ಅವರೊಬ್ಬ ಸುದೀರ್ಘ ವರ್ಷಗಳ ಜನಸೇವಕ. ತನ್ನ ಅವಧಿಯಲ್ಲಿ ಊರ ಜನರಿಗೆ ಅನುಕೂಲವಾಗಲಿ ಎಂಬ ಅವರ ಚಿಂತನೆಯಾಗಿತ್ತು. ಅವರ ಕಲ್ಪನೆಯಂತೆ ಪಂಚಾಯತ್ ಕಟ್ಟಡ ಉದ್ಘಾಟನೆಯೂ ಆಗಿತ್ತು. ಅಂದು ಕಾಂಗ್ರೆಸ್-ಬಿಜೆಪಿಯ ನಡುವೆ ಪ್ರೋಟೋಕಾಲ್ ವಿಚಾರದಲ್ಲಿ ರಾಜಕೀಯ ನಡೆದು ಉದ್ಘಾಟನೆ ದಿನಕ್ಕೆ ಅಡ್ಡಿಯಾಗಿ ದುಂಬು ಪೋಂಡು ಎನ್ನುವಂತಾಗಿತ್ತು.ಅಂತೂ ಒಂದು ಎಡ್ಡೆ ದಿನ ನೋಡಿ ಸುಮಾರು ಮುನ್ನೂರರಷ್ಟು ಪೊಲೀಸರ ಇರುವಿಕೆಯಲ್ಲಿ ಶಾಸಕ ಕೋಟ್ಯಾನ್ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿದ್ದರು.


ಹಾಗೆ ಉದ್ಘಾಟನೆಯಾಗಿ ವರ್ಷ ಕಳೆದಿದೆ. ಆದರೆ ‘ ವಲೇರಿಯನ್ ಕುಟಿನ್ಹೊ ಅವರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರಿಯಂತೆ ತನ್ನದೇ ನಡೆಯಬೇಕು ಎಂಬ ಹಠಕ್ಕೆ ಬಿದ್ದು ತಮ್ಮ ಅವಧಿಯಲ್ಲೇ ಆದದ್ದು ಎಂಬ ಕ್ರೆಡಿಟ್ ಪಡೆದುಕೊಳ್ಳಲು ಗೋಮಾಳ ಜಾಗದಲ್ಲಿ ಕೇವಲ ಒಂದು ಸೆನ್ಸ್ ಜಾಗವನ್ನು ಮಾತ್ರ ಕನ್ವರ್ಷನ್ ಮಾಡಿಸಿ ಕಟ್ಟಡ ನಿರ್ಮಿಸಿದ್ದಾರೆ, ಉದ್ಯೋಗ ಖಾತರಿ ಯೋಜನೆಯಲ್ಲಿ ಇದು ನಿರ್ಮಾಣವಾಗಿದೆ,ಪಂಚಾಯತ್ ಎದುರಿನ ಜಾಗ ಖಾಸಗಿಯವರದ್ದಾಗಿದ್ದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಟ್ಟಡ ನಿರ್ಮಿಸಿ ಈಗ ಜನರಿಗೆ ಸಮಸ್ಯೆಯಾಗುವಂತೆ ಮಾಡಿದ್ದಾರೆ, ಈ ಕಟ್ಟಡವೇ ಅಕ್ರಮವಾದದ್ದು,ಲೋಕಾಯುಕ್ತ ತನಿಖೆಯಾದರೆ ಎಲ್ಲವೂ ಹೊರಬೀಳುತ್ತದೆ’ ಎಂದು ಹೇಳುವವರೂ ಇದ್ದಾರೆ.
ಹೀಗೆ ಹೇಳಲೂ ಒಂದು ಕಾರಣವಿದೆ.ಪಂಚಾಯತ್ ಕಟ್ಟಡದ ಎದುರಿನ ಜಾಗವು ಖಾಸಗಿಯವರಿಗೆ ಸೇರಿದ್ದಾಗಿದ್ದು ಅವರಿಗೇ ನೋಟೀಸು ನೀಡಿರುವುದು ಮಾತ್ರವಲ್ಲದೆ ಅವರಿಗೇ ಜೋರುಮಾಡಿದ್ದಾರೆಂದೂ, ಇದರಿಂದ ಅಸಮಾಧಾನಗೊಂಡ ಖಾಸಗಿಯವರು ತಮ್ಮ ಜಾಗಕ್ಕೆ ತಂತಿ ಬೇಲಿ ಹಾಕಿದರೆಂದೂ,ಇದರ ಪರಿಣಾಮ ವಾಹನಗಳು ಬರಲು ಅಸಾಧ್ಯವಾಗಿ ಜನರು ಎರಡೂವರೆ ಕಿ.ಮೀ.ನಡೆದುಕೊಂಡೇ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆಯೆಂದೂ ಹೇಳಲಾಗುತ್ತಿದೆ.
ಇದಕ್ಕೆಲ್ಲಾ ಪಂಚಾಯತ್ ನವರು ಸ್ಪಷ್ಟನೆ ನೀಡಬೇಕಿದೆ,ತಹಶೀಲ್ದಾರರು ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಈ ಸಮಸ್ಯೆಯನ್ನು ನಿವಾರಿಸಬೇಕಿದೆ.ಈಗ ಜನರಿಗೂ, ಪಂಚಾಯತ್ ಸಿಬ್ಬಂದಿಗಳಿಗೂ ಸಮಸ್ಯೆಯಾಗಿದ್ದು ಈ ಸಮಸ್ಯೆಯನ್ನು ನಿವಾರಿಸಿ ಸಾರ್ವಜನಿಕ ಅನುಕೂಲತೆಗೊಂದು ದಾರಿ ತೋರಿಸಬೇಕಾದ ಅನಿವಾರ್ಯತೆಯಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top