ಇದು ನಮಗೆ ಹೆಮ್ಮೆಯ ವಿಷಯ. ನಮ್ಮ ನಡುವಿನ ಓರ್ವ ಸಾಧಕ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿಕೊಂಡಿರುವ ಮೂಡುಬಿದಿರೆ ಬನ್ನಡ್ಕದ ಎಸ್.ಕೆ.ಎಫ್. ಸಂಸ್ಥೆಯ ಮುಖ್ಯಸ್ಥ ಡಾ.ರಾಮಕೃಷ್ಣ ಆಚಾರ್ ಅವರ ಸಾಧನೆಯ ಕುರಿತಾಗಿ ಪ್ರಸಿದ್ಧ ಮ್ಯಾಗಝಿನ್ Outlook ನಲ್ಲಿ ಲೇಖನ ಪ್ರಕಟಗೊಂಡಿದೆ.

ದೇಶದ ಸುಮಾರು 36 ಸಾಧಕರ ಕುರಿತಾದ ಲೇಖನಗಳು ಈ ಮ್ಯಾಗಝಿನ್ ನಲ್ಲಿ ಪ್ರಕಟಗೊಂಡಿದ್ದು ಅದರಲ್ಲಿ ಎರಡನೇ ಸ್ಥಾನದಲ್ಲಿ ನಮ್ಮ ಆಚಾರ್ ಅವರ ಬಗ್ಗೆ ಇರುವುದು ನಾವೆಲ್ಲರೂ ಹೆಮ್ಮೆ ಪಡುವಂತಹ ವಿಚಾರ.
ಮೂಡುಬಿದಿರೆಯ ಸ್ವರಾಜ್ಯ ಮೈದಾನ ಬಳಿ ಎಸ್.ಕೆ.ಎಫ್.ಎನ್ನುವ ಸಂಸ್ಥೆಯನ್ನು ಪ್ರಾರಂಭಿಸಿ ಐ.ಟಿ.ಐ. ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿ, ಸಂಸ್ಥೆಯ ಮೂಲಕ ಅದೆಷ್ಟೋ ಜನರಿಗೆ ಉದ್ಯೋಗ ನೀಡಿ ಇದೀಗ ದೇಶ ವಿದೇಶಗಳಲ್ಲೂ ತನ್ನದೇ ಆದ ಒಂದು ಪ್ರತಿಷ್ಠಿತ ಹೆಸರು ಪಡೆದುಕೊಂಡಿರುವ ಎಸ್.ಕೆ.ಎಫ್ ಮತ್ತು ರಾಮಕೃಷ್ಣ ಆಚಾರ್ ಅವರ ಸಾಹಸ, ಸಾಧನೆ ದೊಡ್ಡದು.
ಅವರಿಗೆ ಅಭಿನಂದನೆಗಳು.

(ಆಚಾರ್ ಅವರ ಬಗ್ಗೆ ವಾಟ್ಸಾಪಲ್ಲಿ ಬಂದ ಒಂದು ಬರಹವನ್ನು ಇಲ್ಲಿ ನೀಡಲಾಗಿದೆ. ಬರೆದವರಾರೆಂದು ಗೊತ್ತಿಲ್ಲ.)
ಮಧ್ಯ ಪ್ರದೇಶದ ಭೋಪಾಲದಲ್ಲಿ ಅನಾಮತ್ತು ಸಾವಿರದ ಇನ್ನೂರು ಟನ್ನು ಭತ್ತವನ್ನು ಬೇಯಿಸಿ ಅಕ್ಕಿಯಾಗಿಸುವ ಬೃಹತ್ ರೈಸ್ ಮಿಲ್ಲು ತಲೆಯೆತ್ತಿದೆ. ಭಾಸ್ಮತಿಯ ಸುಗಂಧ ಹರಡುವ ಈ ಅಕ್ಕಿ ಮಿಲ್ಲು ಏಷ್ಯಾದಲ್ಲೇ ಅತಿ ದೊಡ್ಡ ಅಕ್ಕಿ ಉತ್ಪಾದನೆಯ ಕೇಂದ್ರವಾಗಿದೆ. ಆದರೆ ಈ ತಂತ್ರಜ್ಞಾನವನ್ನು ಇವರಿಗೆ ಒದಗಿಸಿದ್ದು ಮಾತ್ರ ನಮ್ಮ ಮೂಡುಬಿದರೆಯ ಎಸ್ ಕೆ ಎಫ್ ಎಕ್ಸೈಲರ್ ಕಂಪನಿ!
ಈ ಕಂಪನಿಯ ಮಾಲೀಕರು ನನ್ನ ಆತ್ಮೀಯ ಮಿತ್ರರಾದ ರಾಮಕೃಷ್ಣ ಆಚಾರ್ಯರು. ಶೂನ್ಯದಿಂದಲೇ ಸರ್ವಸ್ವವನ್ನು ಸಾಧಿಸುತ್ತೇನೆ ಎನ್ನುವ ಇವರ ಅಧಮ್ಯ ಛಲ ಕೇವಲ ಒಂದು ಪೈಸೆಯಿಂದ 800 ಕೋಟಿಯ ಸಾಮ್ರಾಜ್ಯವನ್ನು ಕಟ್ಟಲು ಪ್ರೇರಣೆ ಆಯಿತು.
ಬಡತನವನ್ನೇ ಹೊದ್ದು ಮಲಗಿದ್ದ ಬಡಗಿಯೊಬ್ಬರ ಏಳು ಜನ ಮಕ್ಕಳಲ್ಲಿ ಒಬ್ಬನಾಗಿ ಹುಟ್ಟಿದ ರಾಮಕೃಷ್ಣ ಆಚಾರ್ಯರು ಕಡು ಡತನದ ಕರಾಳ ಮುಖವನ್ನು ಕಂಡವರು.
ಅವರಿವರು ಕೊಟ್ಟ ಬಟ್ಟೆಯನ್ನೇ ತೊಟ್ಟು ಶಾಲೆ ಕಲಿತವರು. ಬದುಕಿನ ಹೆಜ್ಜೆ ಹೆಜ್ಜೆಯಲ್ಲೂ ಸ್ವಾಭಿಮಾನವನ್ನು ಇರಿಯುತ್ತಿದ್ದ ಕ್ರೂರ ಬಡತನವನ್ನು ಹೇಗಾದರೂ ಸರಿ ಬಗ್ಗು ಬಡಿಯಲೇಬೇಕು ಎಂದು ಪಣತೊಟ್ಟ ರಾಮಕೃಷ್ಣ ಆಚಾರ್ಯರು ಬಾಲ್ಯದ ದಿನದಲ್ಲೇ ನಾಲ್ಕು ಕಾಸು ಸಂಪಾದನೆಗೆ ಮುಂದಾದರು.
ಏರಿನಲ್ಲಿ ಸೈಕಲ್ ತುಳಿಯಲು ಏಗುವ ಮೀನುಗಾರರಿಗೆ ಸೈಕಲ್ ದೂಡಿ ಕೊಟ್ಟು ಅವರು ಕೊಟ್ಟ ಒಂದು ಪೈಸೆ ಭಕ್ಷೀಸು ಇವರ ಜೀವನದ ಮೊದಲ ಸಂಪಾದನೆ!
ಮೂರು ವರ್ಷಗಳ ಕಾಲ ಕಮ್ಮಾರನಾಗಿ ಕಬ್ಬಿಣ ಗುದ್ದಿದ್ದೂ ಆಯಿತು. ಗ್ಯಾರೇಜು ಸೇರಿ ಕೈ ಕಪ್ಪು ಮಾಡಿಕೊಂಡಿದ್ದಾಯಿತು. ಆದರೆ ಗೋಣಿಕೊಪ್ಪದಲ್ಲಿ ರೈಸು ಮಿಲ್ಲಿನ ಉಪಕರಣಗಳ ರಿಪೇರಿಗೆ ತೊಡಗಿಕೊಂಡ ದಿನವೇ ಆಚಾರ್ಯರ ಬದುಕಿನಲ್ಲಿ ಹೊಸ ಭರವಸೆಯ ಕಿರಣವೊಂದು ಮೂಡಿತು. ಅದರ ಮಾಲೀಕರಾಗಿದ್ದ ರಾಮಾಚಾರ್ಯರು, ರಾಮಕೃಷ್ಣನ ಕಠಿಣ ಪರಿಶ್ರಮವನ್ನು ಕಂಡು ಉನ್ನತ ವ್ಯಾಸಂಗಕ್ಕಾಗಿ ಮೈಸೂರಿಗೆ ಕಳುಹಿಸಿದರು.
ಮೈಸೂರಿನಲ್ಲಿ ಶಿಕ್ಷಣದ ಜೊತೆ ಜೊತೆಗೆ ಹಗಲಿರುಳೆನ್ನದೆ ದುಡಿದ ರಾಮಕೃಷ್ಣರು ರೈಸ್ ಮಿಲ್ ಉದ್ಯಮದಲ್ಲಿ ವಿಶೇಷ ಕೌಶಲ್ಯವನ್ನು ಮೈಗೂಡಿಸಿಕೊಂಡು ಹುಟ್ಟೂರಿಗೆ ಮರಳಿದರು.
ಮೂಡಬಿದ್ರೆಯ ಬನ್ನಡ್ಕದಲ್ಲಿದ್ದ ಹಳೆಯ ಕಾಳಿಕಾಂಬ ಗ್ಯಾರೇಜನ್ನು ಪಡೆದು ತನ್ನ ಕೆಲಸ ಆರಂಭಿಸಿದ ರಾಮಕೃಷ್ಣರು ಆ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಕಾಳಿಕಾಂಬೆ ಬಲವಾಗಿ ಕೈ ಹಿಡಿದಳು.
ದೇಶದಲ್ಲಿರುವ ಬಹುತೇಕ ಬೃಹತ್ ರೈಸ್ ಮಿಲ್ ಗಳ ಒಳಗೆ ಎಸ್ ಕೆ ಎಫ್ ರಾಮಕೃಷ್ಣ ಆಚಾರ್ಯರ ಭಾರೀ ಯಂತ್ರಗಳಿವೆ. ಆಂಧ್ರ ಪ್ರದೇಶದಲ್ಲಂತೂ ರಾಮಕೃಷ್ಣ ಆಚಾರ್ಯರು ಮನೆ ಮಾತಾಗಿದ್ದಾರೆ.
ಕೋಟ್ಯಂತರ ವ್ಯವಹಾರ..ಸಾವಿರಾರು ಉದ್ಯೋಗಿಗಳು.. ನೂರಾರು ಕಡೆ ಹರಡಿಕೊಂಡಿದ್ದ ವಹಿವಾಟುಗಳು ಉತ್ತುಂಗದಲ್ಲಿದ್ದಾಗಲೇ 2001ರಲ್ಲಿ ರಾಮಕೃಷ್ಣ ಆಚಾರ್ಯರಿಗೆ ಬರ ಸಿಡಿಲೊಂದು ಬಡಿಯಿತು. ಅದೇನೆಂದರೆ ಸರ್ಕಾರ ಅಕ್ಕಿ ರಫ್ತು ನಿಷೇಧಿಸಿತು. ಇದರಿಂದಾಗಿ ಅಕ್ಕಿ ಉತ್ಪಾದನೆಯ ಇಡೀ ವ್ಯವಹಾರವೇ ಕುಸಿದು ಬಿದ್ದಿತು.
ಅಕ್ಕಿ ಮಿಲ್ಲುಗಳ ಯಂತ್ರೋಪಕರಣಗಳನ್ನು ನಿರ್ಮಾಣ ಮಾಡಿಕೊಡುತ್ತಿದ್ದ ರಾಮಕೃಷ್ಣಚಾರ್ಯರು ಕೆಲಸವಿಲ್ಲದೆ ಕಂಗೆಟ್ಟರು.
ಆಚಾರ್ಯರು ಅನಿವಾರ್ಯ ಸ್ಥಿತಿಯಲ್ಲಿ ಐಟಿಐ ತೆರೆದು ಸಾವಿರಾರು ಮಕ್ಕಳಿಗೆ ತಾಂತ್ರಿಕ ಶಿಕ್ಷಣ ನೀಡಲು ಮುಂದಾದರು. ಇಷ್ಟಕ್ಕೆ ಸುಮ್ಮನಿರದ ರಾಮಕೃಷ್ಣ ಆಚಾರ್ಯರು ತನ್ನದೇ ಬುದ್ಧಿಶಕ್ತಿ ಅನುಭವವನ್ನು ಬಳಸಿ ಹೊಸ ತಂತ್ರಜ್ಞಾನಗಳನ್ನು ಹುಟ್ಟು ಹಾಕಿದರು.
ರಾಮಕೃಷ್ಣ ಆಚಾರ್ಯರು ಆವಿಷ್ಕರಿಸಿರುವ ಹಾಟ್ ಏರ್ ಟೆಕ್ನಾಲಜಿ ಮತ್ತು ಏಜೆಡ್ ರೈಸ್ ಟೆಕ್ನಾಲಜಿ ಗಳು ಅವರ ಎಸ್ ಕೆ ಎಫ್ ಸಂಸ್ಥೆಗೆ ಪುನರ್ಜೀವನ ನೀಡಿದವು. ಆಚಾರ್ಯರ ಈ ಹೊಸ ತಾಂತ್ರಿಕತೆಯನ್ನು ಖರೀದಿಸಲು ಭಾರತ ಮಾತ್ರವಲ್ಲ ಜಗತ್ತಿನ ಅನೇಕ ದೇಶದ ಜನರು ಸರತಿ ಸಾಲಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಯಿತು. ಯಾವುದೇ ಇಂಜಿನಿಯರಿಂಗ್ ಡಿಗ್ರಿ ಇಲ್ಲದೆ ಪರಿಶುದ್ಧ ಕುಡಿಯುವ ನೀರಿನ ಉತ್ಪಾದನೆ, ತ್ಯಾಜ್ಯ ನೀರಿನ ಶುದ್ಧತಾ ಘಟಕ , ರಾಸಾಯನಿಕ ರಹಿತ ಕೃಷಿ ಪದ್ಧತಿ, ದೇಶಿ ಗೋತಳಿಗಳ ಸಂರಕ್ಷಣೆ ಈ ರೀತಿಯ 10 ಹಲವು ರಂಗಗಳಲ್ಲಿ ಯಶಸ್ವಿಯಾಗಿ ದುಡಿಯುತ್ತಾ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದ ಮಹಾನ್ ಸಾಧಕ ರಾಮಕೃಷ್ಣ ಆಚಾರ್ಯರು.
ಇವತ್ತು ಹೀಗೆ ಔಟ್ಲುಕ್ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿರುವಾಗ ದೇಶದ ಪ್ರಸಿದ್ಧ ಉದ್ಯಮ ಪತಿಗಳ ಪಟ್ಟಿಯಲ್ಲಿ ನಮ್ಮೂರಿನ ರಾಮಕೃಷ್ಣ ಆಚಾರ್ಯರ ಹೆಸರು ಎರಡನೇ ಸ್ಥಾನದಲ್ಲಿ ಕಂಡಿತು.
ಪ್ರಚಂಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ರಾಮಕೃಷ್ಣ ಆಚಾರ್ಯರಂತ ಸಾವಿರಾರು ಜನರ ಕೊಡುಗೆ ಇದೆ.
ರಾಮಕೃಷ್ಣ ಆಚಾರ್ಯರ ಕೀರ್ತಿ ಇನ್ನಷ್ಟು ಉತ್ತುಂಗಕ್ಕೆ ಏರಲಿ. ಅವರ ನೆರಳಲ್ಲಿ ಬದುಕು ಕಟ್ಟಿಕೊಂಡಿರುವ ಸಾವಿರಾರು ಕುಟುಂಬಗಳ ಸಂಖ್ಯೆ ಲಕ್ಷ ಮೀರಲಿ.
ಕೃಪೆ: ಮಹಾಕಾಲ್













