ಬೆದ್ರ ರಂಗಭೂಮಿಯಲ್ಲೊಂದು ಬ್ರೇಕಿಂಗ್ ನ್ಯೂಸ್! *ಮುರಿದುಬಿತ್ತು ಚೋಟು- ಲಕ್ಷ್ಮೀಶ್ ಜೋಡಿ !

Picture of Namma Bedra

Namma Bedra

Bureau Report

ಚೋಟು- ಲಕ್ಷ್ಮೀಶ್ ಗಂಜಿಮಠ. ಈ ಹಾಸ್ಯ ಜೋಡಿಯನ್ನು ತುಳುನಾಟಕಗಳಲ್ಲಿ ನೋಡದ ನಾಟಕ ಪ್ರೇಮಿಗಳು ಜಿಲ್ಲೆಯಲ್ಲಿರಲಿಕ್ಕಿಲ್ಲ. ಈ ಸೂಪರ್ ಜೋಡಿಯ ನಡುವೆ ಒಂದು ಸಣ್ಣ ಭಿನ್ನಾಭಿಪ್ರಾಯ ಮೂಡಿ ಸುದೀರ್ಘ ವರ್ಷಗಳ ಕಲಾ ಸಂಬಂಧ ಮುರಿದುಬಿದ್ದಿದ್ದು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಚೋಟು- ಗಂಜಿಮಠರವರ ಜೋಡಿಯ ಹಾಸ್ಯ ದೃಶ್ಯಗಳನ್ನು ನೋಡಲೆಂದೇ ಕಲಾಭಿಮಾನಿಗಳು ಸೇರುತ್ತಿದ್ದರು.ಗಂಡ-ಹೆಂಡತಿಯಾಗಿ, ಪ್ರೇಮಿಗಳಾಗಿ ಅವರು ನಟಿಸಿದ್ದ ಅದೆಷ್ಟೋ ತುಳುನಾಟಕಗಳ ನೆನಪು ಇನ್ನೂ ಜನರಲ್ಲಿದೆ.
ಟೀಮ್ ನಾಟಕವಲ್ಲದೆ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ತುಳು ನಾಟಕಗಳಲ್ಲಿ ಈ ಜೋಡಿ ಅತಿಥಿ ಕಲಾವಿದರಾಗಿ ಭಾಗವಹಿಸಿ ಕಲಾಪ್ರಿಯರನ್ನು ರಂಜಿಸುತ್ತಿತ್ತು.
ನಮ್ಮ ಕಲಾವಿದೆರ್ ಬೆದ್ರ ಎಂಬ ತಂಡವನ್ನು ಕಟ್ಟಿಕೊಂಡು ,ಅದರಲ್ಲಿ ಖ್ಯಾತ ಕಲಾವಿದರನ್ನು ಸೇರಿಸಿಕೊಂಡು ಹಲವು ಹಾಸ್ಯಪ್ರಧಾನ ಸಾಮಾಜಿಕ ನಾಟಕಗಳನ್ನು ತುಳು ರಂಗಭೂಮಿಗರ್ಪಿಸಿದ ಹೆಗ್ಗಳಿಕೆ ಚೋಟು ( ಉಮೇಶ್ ಮಿಜಾರ್ ) ಅವರದ್ದು.
ಬುದ್ಧಿ ಬುಡಯೆ, ಆತೇ ಪನೊಡಾತೆ, ಪಾಂಡುನ ಅಲಕ್ಕ ಪೋಂಡು,ಮನಸ್ ಮೈದಾನ್ …ಹೀಗೆ ಇನ್ನೂ ಹಲವು ನಾಟಕಗಳಲ್ಲಿ ಈ ಇಬ್ಬರು ಕಲಾವಿದರೂ ಮಿಂಚಿದ್ದರು.ಜನಮನದಲ್ಲಿ ಶಾಶ್ವತವಾಗಿ ನೆನಪಲ್ಲುಳಿಯುವಂತಹ ಮನೋಜ್ಞ ಅಭಿನಯವನ್ನು ಈ ಜೋಡಿ ನೀಡಿದೆ.ಹಾಗಾಗಿ ಈ ಜೋಡಿಯನ್ನೇ ಜನ ಹೆಚ್ಚು ಅಪೇಕ್ಷೆಪಡುತ್ತಿದ್ದರು.


ನಾಟಕ ಮಾತ್ರವಲ್ಲದೆ ಬಲೇ ತೆಲಿಪಾಲೆ ,ತೆಲಿಕೆದ ಗೊಂಚಿಲ್ ಮುಂತಾದ ಕಾರ್ಯಕ್ರಮಗಳ ಮೂಲಕವೂ ಗಮನಸೆಳೆದಿತ್ತು. ಸುದೀರ್ಘ ಎರಡು ದಶಕಗಳಿಗಿಂತಲೂ ಅಧಿಕ ಕಾಲ ಒಂದೇ ತಂಡದಲ್ಲಿದ್ದ ಈ ಜೋಡಿ ಅದ್ಯಾವುದೋ ಸಣ್ಣ ಅಸಮಾಧಾನದಿಂದ ಬೇರ್ಪಟ್ಟಿದೆ.


ನಮ್ಮ ಕಲಾವಿದೆರ್ ಬೆದ್ರ ತಂಡದಲ್ಲಿದ್ದ ಲಕ್ಷ್ಮೀಶ್ ಗಂಜಿಮಠ ಸಹಿತ ನಿತಿನ್ ತುಂಬೆ, ಶರಣ್ ಕೈಕಂಬ,ಸತೀಶ್ ಅಮೀನ್ ಕಲ್ಲಮುಂಡ್ಕೂರು ಮುಂತಾದ ಖ್ಯಾತ ಕಲಾವಿದರು ಚೋಟು ಅವರ ತಂಡದಿಂದ ಹೊರಬಂದು ಬಾಂಧವ್ಯ ಕಲಾವಿದೆರ್ ಬೆದ್ರ ಎಂಬ ಹೊಸ ತಂಡವನ್ನು ಕಟ್ಟಿಕೊಂಡಿದ್ದಾರೆ.ಇದೀಗ ಒಂದೂವರೆ ಗಂಟೆಗಳ ‘ತೆಲಿಕೆ ನಲಿಕೆ’ ಎಂಬ ಕಾರ್ಯಕ್ರಮದಲ್ಲಿ ಮಿಮಿಕ್ರಿ,ಹಾಸ್ಯ,ನೃತ್ಯ, ಗಾಯನ ಇರಲಿದ್ದು ಮುಂದಿನ ದಿನಗಳಲ್ಲಿ ಇದೇ ತಂಡದಿಂದ ಹೊಸ ನಾಟಕ ಪ್ರದರ್ಶನಗೊಳ್ಳಲಿದೆ.
ಅತ್ತ ಚೋಟು ಅವರು ಅದೇ ತಂಡವನ್ನು ಮುಂದುವರಿಸುತ್ತಾ ಹೊಸ ಕಲಾವಿದರಿಗೆ ಅವಕಾಶ ನೀಡಿದ್ದಾರೆ. ಹರಿಶ್ಚಂದ್ರ ಪೆರಾಡಿ,ಅನೀಶಾ ಕುಲಾಲ್, ಹರೀಶ್ ಕಡಂದಲೆ ಮುಂತಾದ ಪ್ರಬುದ್ಧ ಕಲಾವಿದರು ಆ ತಂಡದಲ್ಲಿದ್ದಾರೆ.ಅವರ ಈ ವರ್ಷದ ಹೊಸ ನಾಟಕ ‘ವೈರಲ್ ವೈಶಾಲಿ’ ನಾಟಕದ ಮುಹೂರ್ತ ಇದೇ ಶುಕ್ರವಾರದಂದು ಧರ್ಮಸ್ಥಳದಲ್ಲಿ ನಡೆಯಲಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top