ಧರ್ಮಸ್ಥಳ ಕ್ಷೇತ್ರದ ವಿರುದ್ಧ ಕೆಲವು ದುರುದ್ದೇಶಿತ ಶಕ್ತಿಗಳು ರಾಜಕೀಯ ಮತ್ತು ವೈಯಕ್ತಿಕ ಸ್ವಾರ್ಥಕ್ಕಾಗಿ ಇಲ್ಲಸಲ್ಲದ ಆರೋಪವನ್ನು ಮಾಡುತ್ತಿದೆ,ಧರ್ಮಸ್ಥಳ ದೇವಸ್ಥಾನ, ಅದರ ಆಡಳಿತ ಮಂಡಳಿ ಅಥವಾ ಅದರ ಕುಟುಂಬ ಸದಸ್ಯರ ವಿರುದ್ಧ ಯಾವುದೇ ಅತ್ಯಾಚಾರ ಅಥವಾ ಕೊಲೆಘಟನೆ ದೇವಸ್ಥಾನದ ಆವರಣದಲ್ಲಿ ಅಥವಾ ಅದರ ಸುತ್ತಮುತ್ತ ನಡೆದಿದೆಯೆಂದು ಆರೋಪಿಸುತ್ತಿರುವವರು ಇದೇ ಡಿಸೆಂಬರ್ 31 ರೊಳಗೆ ಅದಕ್ಕೆ ಸಂಬಂಧಪಟ್ಟ ಸ್ಪಷ್ಟವಾದ ಸಾಕ್ಷ್ಯವನ್ನು ಸಲ್ಲಿಸಬೇಕು,ಒಂದುವೇಳೆ ಆರೋಪ ಮಾಡುತ್ತಿರುವವರು ಸಾಕ್ಷ್ಯ ಸಲ್ಲಿಸಲು ವಿಫಲವಾದರೆ ಧರ್ಮಸ್ಥಳದ ವಿರುದ್ಧ ನಡೆಸುತ್ತಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದುದು ಮತ್ತು ಈ ಪ್ರಕರಣವನ್ನು ಮುಚ್ಚಲಾಗಿದೆ ಎಂದು ರಾಜ್ಯ ಗೃಹಸಚಿವರು ಅಧಿಕೃತವಾಗಿ ಘೋಷಿಸಬೇಕು ಎಂದು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಆಗ್ರಹಿಸಿದೆ.
ಈ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಸ್ಥಾಪಕರಾಗಿರುವ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ‘ ಪ್ರಸ್ತುತ ಧರ್ಮಸ್ಥಳ ಪ್ರಕರಣದ ಬಗ್ಗೆಯೇ ಚರ್ಚೆ ನಡೆಯುತ್ತಿದೆ,ಇದೆಲ್ಲಾ ಕೆಲ ಸ್ಥಾಪಿತ ಹಿತಾಸಕ್ತ ತಂಡದ ಷಡ್ಯಂತ್ರ, ಬರೇ ಸುಳ್ಳು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ,ಆರೋಪ ಮಾಡುವವರಲ್ಲಿ ಸಾಕ್ಷ್ಯ ಇದ್ದರೆ ನೀಡಲಿ,ಇಲ್ಲದಿದ್ದಲ್ಲಿ ಪೊಲೀಸರು ಸುಳ್ಳು ಆರೋಪ ಮಾಡುವವರ ವಿರುದ್ಧ ಸುಮೊಟೊ ಕೇಸು ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಆದಷ್ಟು ಬೇಗ ಗೃಹಸಚಿವರು ಎಸ್.ಐ.ಟಿ ತಂಡದಿಂದ ವರದಿ ತರಿಸಿ ಜನರಿಗೆ ಸತ್ಯಾ ಸತ್ಯತೆ ತಿಳಿಸಬೇಕು, ಧರ್ಮಸ್ಥಳ ವಿಚಾರವನ್ನು ಕೆಲವರು ಉದ್ದೇಶಪೂರ್ವಕವಾಗಿ ಭಾರತ ಹಾಗೂ ವಿಶ್ವದಾದ್ಯಂತ ತಪ್ಪಾಗಿ ಬಿಂಬಿಸುತ್ತಿದ್ದಾರೆ,ಈ ಊಹಾಪೋಹಗಳಿಗೆ ಶೀಘ್ರ ತೆರೆ ಎಳೆಯಬೇಕೆಂದು ಒತ್ತಾಯಿಸಿದ ಅವರು ಜಿಲ್ಲೆಯಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡುತ್ತಾ ಬಂದಿರುವ ನಮ್ಮ ಸಮಿತಿಯು ಧರ್ಮಸ್ಥಳ ವಿಷಯದಲ್ಲೂ ಮುಂದೆ ಬಂದಿದ್ದು ಧಾರ್ಮಿಕ ಕ್ಷೇತ್ರದ ವಿರುದ್ಧ ಆಗುತ್ತಿರುವ ಅಪಪ್ರಚಾರವನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಸಮಿತಿಯ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ರಾಜ್ಯ ಸಂಯೋಜಕ ಜಗದೀಶ್ ಅಧಿಕಾರಿ,ಜಿಲ್ಲಾ ಉಪಾಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.










