ಅಮೃತ್ ಯೋಜನೆ. ಸುಮಾರು 77 ಕೋಟಿ ರೂ.ವೆಚ್ಚದ ಕುಡಿಯುವ ನೀರಿನ ಸಂಪರ್ಕದ ಈ ಯೋಜನೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಅವರು ಮೂಡುಬಿದಿರೆ ಪುರಸಭಾ ವ್ಯಾಪ್ತಿಗೆ ವಿಶೇಷ ಆದ್ಯತಾ ನೆಲೆಯಲ್ಲಿ ತರಿಸಿದ್ದರು.
ಆದರೆ ಈ ಯೋಜನೆಯ ಅಧಿಕಾರಿವರ್ಗ ಆರಂಭದಲ್ಲೇ ಎಡವಟ್ಟು ಮಾಡಿಕೊಂಡು ಸಮರ್ಪಕವಾದ ಮಾಹಿತಿ ನೀಡದೆ ಪುರಸಭಾ ಸದಸ್ಯರಿಂದ ತರಾಟೆಗೊಳಗಾಗಿದ್ದರು.
ಆ ಬಳಿಕ ಕೆಲವೆಡೆ ಕಾಮಗಾರಿಗಳು ನಡೆದಿದ್ದರೂ ಅಲ್ಲಲ್ಲಿ ಲೋಪದೋಷದ ಆರೋಪಗಳು ಕೇಳಿಕೊಂಡಿತ್ತು.
ಸೋಮವಾರ ಪುರಸಭಾ ಕಚೇರಿಯಲ್ಲಿ ಶಾಸಕ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆದಿದೆ. ಬರುವಾಗಲೇ ತಡವಾಗಿ ಬಂದಿದ್ದ ಈ ಯೋಜನೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
‘ ಈ ಬಹುಕೋಟಿ ವೆಚ್ಚದ ಕಾಮಗಾರಿಯ ಸಮರ್ಪಕ ಮಾಹಿತಿಯನ್ನು ನನಗೆ ನೀಡುತ್ತಿಲ್ಲ,ಪುರಸಭಾಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿ ನಡೆಸಿದ್ದೀರಿ,ಇದರಲ್ಲಿ ಸಾಕಷ್ಟು ಲೋಪದೋಷಗಳಾಗಿರುವುದು ನನ್ನ ಗಮನಕ್ಕೆ ಬಂದಿದೆ,ಮಂದೆ ಹೀಗಾದರೆ ಸುಮ್ಮನಿರಲ್ಲ,ಮುಂದಿನ ಹದಿನೈದು ದಿನಗಳಲ್ಲಿ ಲೋಪವಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿಯೇ ಹೊಸ ಕಾಮಗಾರಿಯನ್ನು ಪ್ರಾರಂಭಿಸಿ’ ಎಂದು ಎಚ್ಚರಿಸಿದರು.
ಈ ಯೋಜನೆ ಬಗ್ಗೆ ಸಮರ್ಪಕ ಮಾಹಿತಿ ನೀಡಿ ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಿ ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳಲ್ಲಿ ವಿನಂತಿಸಿದ್ದರೂ ಯಾವುದಕ್ಕೂ ಸ್ಪಂದನೆ ನೀಡಿಲ್ಲ, ಅಧಿಕಾರಿಗಳ ಮನಸ್ಸಿಗೆ ಬಂದಂತೆ ಕೆಲಸ ಮಾಡಿದ್ದಾರೆ, ನೀವು ನಾಟಕ ಮಾಡುವುದನ್ನು ಮೊದಲು ನಿಲ್ಲಿಸಿ ಎಂದು ಎಚ್ಚರಿಸಿದ ಪುರಸಭಾ ಹಿರಿಯ ಸದಸ್ಯ ಪಿ.ಕೆ.ಥೋಮಸ್ ‘ ಈ ಯೋಜನೆ ಜನೋಪಯೋಗಿಯಾಗಿರಬೇಕೇ ಹೊರತು ಜನರಿಗೆ ತೊಂದರೆ ಮಾಡುವಂತಿರಬಾರದು’ ಎಂದು ಹೇಳಿದರು.
ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣ ಎದುರಿನ ಪಾರ್ಕಿಂಗ್ ಸಮಸ್ಯೆ ಮತ್ತೆ ಮತ್ತೆ ಮುಂದುವರಿಯುತ್ತಿದೆ,ವ್ಯಾಪರಸ್ಥರಿಗೂ ಅನ್ಯಾಯವಾಗುತ್ತಿದೆ ,ಈ ಸಮಸ್ಯೆ ಶೀಘ್ರ ಪರಿಹಾರ ಕಾಣಬೇಕೆಂದು ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ,ರಾಜೇಶ್ ನಾಯ್ಕ್ ಸಭೆಯಲ್ಲಿ ಗಮನಕ್ಕೆ ತಂದರು.
ಪುರಸಭಾಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಸುರೇಶ್ ಪ್ರಭು,ಸುರೇಶ್ ಕೋಟ್ಯಾನ್, ಪ್ರಸಾದ್ ಕುಮಾರ್, ಕೊರಗಪ್ಪ,ಇಕ್ಬಾಲ್ ಕರೀಮ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಸಹಿತ ವಿವಿಧ ಇಲಾಖಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.






