ಕೆಪಿಸಿಸಿ ಕಾರ್ಯದರ್ಶಿ, ಯುವನಾಯಕ ಮಿಥುನ್ ರೈ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಲಭಿಸುವ ಸಾಧ್ಯತೆ ಇದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿದ್ದು ಮಿಥುನ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಈ ಬಾರಿ ಮಂಗಳೂರು ನಗರ ಹಾಗೂ ಗ್ರಾಮಾಂತರ ಎಂದು ಎರಡು ವಿಭಾಗಗಳಲ್ಲಿ ಅಧ್ಯಕ್ಷರನ್ನಾಗಿ ಜವಾಬ್ದಾರಿ ನೀಡಲು ಕಾಂಗ್ರೆಸ್ ಮುಂದಾಗಿದ್ದು ನಗರ ಅಧ್ಯಕ್ಷರನ್ನಾಗಿ ಮಿಥುನ್ ರೈ ಅವರನ್ನೇ ನೇಮಕಗೊಳಿಸಬೇಕೆಂಬ ಆಗ್ರಹಗಳು ಕೇಳಿ ಬರುತ್ತಿದೆ.
ಸರಕಾರ ಬಂದು ಎರಡು ವರ್ಷ ಕಳೆದರೂ ಮಿಥುನ್ ರೈ ಅವರಿಗೆ ಯಾವುದೇ ಸೂಕ್ತವಾದ ಸ್ಥಾನಮಾನ ಸಿಕ್ಕಿಲ್ಲ.ಈ ಹಿನ್ನೆಲೆಯಲ್ಲಿ ಅವರಿಗೆ ಜಿಲ್ಲಾಧ್ಯಕ್ಷ ಎನ್ನುವ ದೊಡ್ಡ ಜವಾಬ್ದಾರಿ ನೀಡುವ ಸಾಧ್ಯತೆ ಹೆಚ್ಚಿದೆ.
ಮೂಡುಬಿದಿರೆ, ಉಳ್ಳಾಲ,ಮಂಗಳೂರು ಉತ್ತರ ಹಾಗೂ ಮಂಗಳೂರು ದಕ್ಷಿಣ ಈ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿಕೊಂಡು ನಗರ ಹಾಗೂ ಬೆಳ್ತಂಗಡಿ, ಪುತ್ತೂರು,ಬಂಟ್ವಾಳ ಹಾಗೂ ಸುಳ್ಯ ಈ ನಾಲ್ಕು ಕ್ಷೇತ್ರಗಳನ್ನು ಸೇರಿಸಿ ಗ್ರಾಮಾಂತರ ಎಂದು ವಿಭಜಿಸಿ ಇಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ಜವಾಬ್ದಾರಿ ನೀಡುವುದು ಪಕ್ಷದ ಗುರಿಯಾಗಿದೆ.
ಮಿಥುನ್ ರೈ ಅವರನ್ನು ಮಂಗಳೂರು ನಗರ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕಗೊಳಿಸಬೇಕೆಂದು ನಾಲ್ಕು ವಿಧಾನಸಭಾ ಕ್ಷೇತ್ರಗಳ ಬ್ಲಾಕ್ ಅಧ್ಯಕ್ಷರುಗಳು,ಮಹಿಳಾ ಕಾಂಗ್ರೆಸ್ ಅಧ್ಯಕ್ಷರುಗಳು ,ಯುವ ಕಾಂಗ್ರೆಸ್ ಹಾಗೂ ವಿವಿಧ ಪದಾಧಿಕಾರಿಗಳ ನಿಯೋಗವು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಬೆಂಗಳೂರಿಗೆ ತೆರಳಿದೆ.






