ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂದು ಆಗ್ರಹಿಸಿ ಮೂಡುಬಿದಿರೆ ವಕೀಲರ ಸಂಘ, ಪುರಸಭೆ, ಮೂಡುಬಿದಿರೆ ಪ್ರೆಸ್ ಕ್ಲಬ್ ಹಾಗೂ ಸಾರ್ವಜನಿಕರಿಂದ ಪೋಸ್ಟ್ ಕಾರ್ಡ್ ಚಳುವಳಿ ನಡೆಯಿತು.
ಮೂಡುಬಿದಿರೆ ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್ ಅವರು ಪೋಸ್ಟ್ ಡಬ್ಬಕ್ಕೆ ಪೋಸ್ಟ್ ಕಾರ್ಡ್ ಹಾಕುವ ಮೂಲಕ ಚಳುವಳಿಗೆ ಚಾಲನೆ ನೀಡಿದರು.

ವಕೀಲರ ಸಂಘದ ಸ್ಥಾಪಕಾಧ್ಯಕ್ಷ, ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಅವರು ಈ ಸಂದರ್ಭದಲ್ಲಿ ಮಾತನಾಡಿ ‘ದ.ಕ,ಉಡುಪಿ, ಉತ್ತರಕನ್ನಡ ,ಕೊರಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸುಮಾರು ಒಂದು ಕೋಟಿಯಷ್ಟು ಜನರ ಸಂಪರ್ಕ, ಸಂಚಾರಕ್ಕೆ ಅನುಕೂಲವಾಗಲೆಂಬ ದೃಷ್ಟಿಯಿಂದ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂಬ ಹೋರಾಟ ನಡೆಯುತ್ತಿದೆ,ಕಳೆದೆರಡು ವರ್ಷಗಳಿಂದ ಈ ಹೋರಾಟಕ್ಕೆ ವೇಗ ಸಿಗುತ್ತಿದೆ,ಹೈಕೋರ್ಟ್ ಪೀಠಕ್ಕೆ ಮಂಗಳೂರಿನಲ್ಲಿ ಜಾಗವನ್ನೂ ಗುರುತಿಸಲಾಗಿದ್ದು ಪೀಠ ಸ್ಥಾಪನೆಗಾಗಿ ಒತ್ತಾಯಿಸಿ ಸರಕಾರ ಮತ್ತು ಮುಖ್ಯ ನ್ಯಾಯಾಧೀಶರಿಗೆ ಪತ್ರ ಮುಖೇನ ತಿಳಿಸಲು ಈ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ, ಸಂಘ ಸಂಸ್ಥೆಗಳು, ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕೆ’ಂದು ಹೇಳಿದರು.

ಸಾರ್ವಜನಿಕರ ನೆಲೆಯಲ್ಲಿ ವಿಶು ಕುಮಾರ್ ಅವರು ಮಾತನಾಡಿ ಬೆಂಬಲ ಸೂಚಿಸಿದರು.
ವಕೀಲರ ಸಂಘದ ಅಧ್ಯಕ್ಷ ಹರೀಶ್ ಪಿ, ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ, ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಲೋಬೋ, ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ, ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು, ಕೋಶಾಧಿಕಾರಿ ಪ್ರಸನ್ನ ಹೆಗ್ಡೆ,ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






