“ಯಾರೂ ಇಲ್ಲದಾಗ ಬಂದು ಬಾರೀ ಮಾತಾಡ್ತೀರಿ, ನಮ್ಮ ಕೃಷಿಯನ್ನು ನಾಶ ಮಾಡಿದ್ದೀರಿ,ಪೊಲೀಸರೊಂದಿಗೆ ಬಂದು ನಮ್ಮ ಶಕ್ತಿಯನ್ನು ದುರ್ಬಲಗೊಳಿಸಲು ಯತ್ನಿಸಿದ್ದೀರಿ, ಅದೆಲ್ಲಾ ಇಲ್ಲಿ ನಡೆಯೋದಿಲ್ಲ,ಇಲ್ಲಿಗೆ ಯಾಕೆ ಬಂದಿದ್ದೀರಿ, ನಡಪ್ಪಿ,ನಡಪ್ಪಿ” ಎಂದು ಪ್ರತಿಭಟನಾ ಸಂದರ್ಭದಲ್ಲಿ ಮತ್ತೊಂದು ಕಡೆ ಕುಳಿತಿದ್ದ ಸ್ಟೆರ್ ಲೈಟ್ ಕಂಪೆನಿಯ ಸಿಬ್ಬಂದಿಗಳನ್ನು, ಅಧಿಕಾರಿಗಳನ್ನು ವಾಪಾಸು ಕಳುಹಿಸಿದ ಘಟನೆ ಇಂದು ತೆಂಕಮಿಜಾರಿನ ಓಂಟೆಮಾರ್ ನಲ್ಲಿ ನಡೆದಿದೆ.
ಉಡುಪಿ- ಕಾಸರಗೋಡು ನಡುವೆ ಹಾದು ಹೋಗುವ 440 ಕೆವಿ ವಿದ್ಯುತ್ ಕಾಮಗಾರಿಯ ಸಂದರ್ಭದಲ್ಲಿ ಇಲ್ಲಿನ ಕೆಲವರ ಕೃಷಿಯನ್ನು ಯಾವುದೇ ಮಾಹಿತಿ ನೀಡದೆ,ಯಾವುದೇ ನೋಟೀಸು ನೀಡದೆ, ಪರಿಹಾರವನ್ನೂ ನೀಡದೆ ಪೊಲೀಸರೊಂದಿಗೆ ಬಂದು ಕೃಷಿ ನಾಶ ಮಾಡಿರುವ ಸ್ಟೆರ್ ಲೈಟ್ ಕಂಪೆನಿಯ ವಿರುದ್ಧ ಇಂದು ಭಾಸ್ಕರ ಶೆಟ್ಟಿ ಅವರ ಕೃಷಿ ಭೂಮಿಯಲ್ಲಿ ಈ ಪರಿಸರದ ಕೃಷಿಕರು ಒಂದಾಗಿ ಪ್ರತಿಭಟನೆ ನಡೆಸಿದರು.
ಭಾರತೀಯ ಕಿಸಾನ್ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ ಹಾಗೂ ತುಳುನಾಡ ಸೇನೆಯ ಮುಖ್ಯಸ್ಥ ಮಿಜಾರು ದೋಟ ಸುರೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕೃಷಿಕರನೇಕರು ಭಾಗವಹಿಸಿದ್ದರು.


ಕಂಪೆನಿ ನಾಶಪಡಿಸಿದ ಭಾಸ್ಕರ ಶೆಟ್ಟಿ ಅವರ ತೋಟದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಂತಿ ಪ್ರಸಾದ್ ಹೆಗ್ಡೆಯವರು ” ಸ್ಟೆರ್ ಲೈಟ್ ಕಂಪೆನಿಯವರು ಯಾವ ಮಾಹಿತಿಯನ್ನಾಗಲೀ, ಪರಿಹಾರವನ್ನಾಗಲೀ ನೀಡದೆ ಪೊಲೀಸರೊಂದಿಗೆ ಬಂದು ಬೆದರಿಸಿ ಅಕ್ರಮವಾಗಿ ಕೃಷಿ ನಾಶ ಮಾಡಿ ರೈತರ ಮೇಲೆ ದೌರ್ಜನ್ಯವೆಸಗಿದ್ದಾರೆ, ಸುಪ್ರೀಂ ಕೋರ್ಟ್ ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರು ಮಧ್ಯಪ್ರವೇಶಿಸಬಾರದೆಂದು ಸ್ಪಷ್ಟ ಆದೇಶ ನೀಡಿದ್ದರೂ ಇಲ್ಲಿನ ಕಂಪೆನಿಯವರಿಗೆ ಪೊಲೀಸರು ಬೆಂಬಲ ನೀಡಿದ್ದಾರೆ, ಪೊಲೀಸ್ ಮತ್ತು ಕಂಪೆನಿಯವರು ಸೇರಿಕೊಂಡು ರೈತರಿಗೆ ಅನ್ಯಾಯವೆಸಗಿದ್ದಾರೆ, ಇದನ್ನು ರೈತರು ಸಹಿಸುವುದಿಲ್ಲ,ಇದಕ್ಕೆಲ್ಲಾ ಸರಕಾರವೇ ಹೊಣೆ, ರೈತರಿಗೆ ಅನ್ಯಾಯವಾದರೆ ರೈತರು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ, ಮುಂದಿನ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಒಂದಾಗಿ ಪ್ರತಿಭಟನೆ ನಡೆಸಲಿದ್ದೇವೆ ” ಎಂದು ಎಚ್ಚರಿಸಿದರು.


ಅಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿ, ಸಂಸದರ ಉಪಸ್ಥಿತಿಯಲ್ಲಿ ಒಂದು ಅಂತಿಮ ನಿರ್ಧರ ಆಗುವವರೆಗೆ ಕಂಪೆನಿಯವರನ್ನು ಇಲ್ಲಿ ಕಾಮಗಾರಿ ಮುಂದುವರಿಸಲು ಬಿಡುವುದಿಲ್ಲ ಎಂದರಲ್ಲದೆ ಕೃಷಿ ನಾಶ ಮಾಡಿದ್ದಕ್ಕಾಗಿ ಪರಿಹಾರ ನೀಡಬೇಕು,ವಿದ್ಯುತ್ ಲೈನ್ ಹಾದು ಹೋಗುವ ಜಾಗದಲ್ಲಿ ಜಾಗ ಕಳೆದುಕೊಳ್ಳುವವರಿಗೆ ಪ್ರತ್ಯೇಕ ಜಾಗ ನೀಡಬೇಕೆಂದು ಅವರು ಆಗ್ರಹಿಸಿದರು .



ಮಿಜಾರು ದೋಟ ಸುರೇಶ್ ಶೆಟ್ಟಿ, ಭಾಸ್ಕರ ಶೆಟ್ಟಿ, ಸಂಜೀವ ಗೌಡ,ರಾಜೇಶ್ ಭಂಡಾರಿ, ಪ್ರವೀಣ್ ರೈ,ಜಾನ್ ರೆಬೆಲ್ಲೊ, ಜೆಸಿಂತಾ, ತೆಂಕಮಿಜಾರು ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ,ವಸಂತ ಭಟ್,ಅರುಣ್ ಭಟ್ ,ದಿನೇಶ್ ಶೆಟ್ಟಿ, ರವಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆ ಮುಗಿಯಲಿ ಎಂದು ಇನ್ನೊಂದು ಬದಿಯಲ್ಲಿ ಕಾದು ಕುಳಿತಿದ್ದ ಕಂಪೆನಿಯ ಸಿಬ್ಬಂದಿಗಳ ವಿರುದ್ಧ ಕೋಪಗೊಂಡ ಕೃಷಿಕರು ‘ ನೀವು ಇಲ್ಲೇಕೆ ಕಾದು ಕುಳಿತದ್ದು? ನಿಮ್ಮನ್ನು ಇನ್ನು ಇಲ್ಲಿ ಕೆಲಸ ಮಾಡಲು ಬಿಡುವುದಿಲ್ಲ, ಇಲ್ಲಿಂದ ಹೊರಟು ಹೋಗಿ” ಎಂದು ವಾಪಾಸು ಕಳುಹಿಸಿದರು.
ಇದೇ ಸಂದರ್ಭದಲ್ಲಿ ಬಂದ ಅಧಿಕಾರಿಗಳಿಗೂ ಮುತ್ತಿಗೆ ಹಾಕಿ ಅವರಿಗೆ ಎಚ್ಚರ ನೀಡಿ ವಾಪಾಸು ಕಳುಹಿಸಿದರು.










