ಬಹುಶಃ ರಾಣಿ ಅಬ್ಬಕ್ಕರವರ ಬಗ್ಗೆ ಮೂಡುಬಿದಿರೆಯಲ್ಲಿ ಬಲುದೊಡ್ಡ ಕಲ್ಪನೆ, ಕನಸು ಹೊತ್ತು ಪ್ರತಿಮೆಯನ್ನು ಸ್ಥಾಪಿಸಿ ಇಂದಿನ ಪೀಳಿಗೆಗೆ ರಾಣಿ ಅಬ್ಬಕ್ಕಳನ್ನು ಪರಿಚಯಿಸಿದ್ದೇ ಈ ಸಪೂರದ ಮನುಷ್ಯ ಅಮರ್ ಕೋಟೆ!
ಉಳ್ಳಾಲ ರಾಣಿ ಅಬ್ಬಕ್ಕ ಮೂಡುಬಿದಿರೆಯ ಮಣ್ಣಿನ ಮಗಳು.ಹದಿನಾರನೇ ಶತಮಾನದಲ್ಲಿ ವಸಾಹತುಶಾಹಿಗಳ ವಿರುದ್ಧ ಹೋರಾಡಿ, ಅವರ ದಾಳಿಯನ್ನು ಹಿಮ್ಮೆಟ್ಟಿಸಿ ಇತಿಹಾಸದ ಪುಟಗಳಲ್ಲಿ ಹೊಸ ಚರಿತ್ರೆಯನ್ನು ಸೃಷ್ಟಿಸಿದ ಧೀರ ಮಹಿಳೆ ಅಬ್ಬಕ್ಕ ಮೂಡುಬಿದಿರೆಯವಳು.ವೀರರಾಣಿ ಎಂಬ ಹೆಸರುಗಳಿಸಿದ ಆಕೆ ಇಲ್ಲಿನ ಚೌಟರಸರ ವಂಶದವಳು.
ಮೂಡುಬಿದಿರೆಯ ಮಣ್ಣಿನ ಮಗಳಾಗಿರುವ ಆ ಧೀರ ಮಹಿಳೆಯ ಪ್ರತಿಮೆಯನ್ನು ಮೂಡುಬಿದಿರೆಯಲ್ಲಿ ಯಾವತ್ತೋ ನಿರ್ಮಾಣ ಮಾಡಬೇಕಿತ್ತು.ಆದರೆ ಯಾರಿಂದ ಅದು ಸಾಧ್ಯವಿತ್ತಾ ಅಂತವರು ಮನಸ್ಸು ಮಾಡಲೇ ಇಲ್ಲ. ನಿಜವಾಗಿಯೂ ಆಕೆಯ ದೊಡ್ಡದಾದ ಪ್ರತಿಮೆ ಆಗಬೇಕಿದ್ದು ಬೆದ್ರದ ಪ್ರಮುಖ ಜಾಗದಲ್ಲಿ. ಅಂದರೆ ದಿನಂಪ್ರತಿ ಸಾವಿರಾರು ಜನ ತಿರುಗುವ ಜಾಗದಲ್ಲಿ.
ಅಬ್ಬಕ್ಕಳ ಇತಿಹಾಸ ಎಲ್ಲರಿಗೂ ಗೊತ್ತಿದೆ.ಗೊತ್ತಿಲ್ಲದವರು ಪುಸ್ತಕದ ಮೂಲಕ ತಿಳಿದುಕೊಳ್ಳುತ್ತಾರೆ.ವಿಷಯ ಅದಲ್ಲ, ಈ ಅಬ್ಬಕ್ಕಳ ಪ್ರತಿಮೆಯ ಬಗ್ಗೆ ,ಆಕೆಯ ಇತಿಹಾಸದ ಬಗ್ಗೆ ಯಾರೂ ಯಾರಿಗೂ ತಿಳಿಯಪಡಿಸುವ ಗೋಜಿಗೆ ಹೋಗದಿದ್ದಾಗ ಎಂಟ್ರಿಯಾದದ್ದೇ ಈ ಅಮರ್ ಕೋಟೆ.
ಮೂಡುಬಿದಿರೆಯಲ್ಲೊಂದು ಅಬ್ಬಕ್ಕ ಪ್ರತಿಮೆ ನಿರ್ಮಾಣವಾಗಬೇಕೆಂಬ ಕನಸುಕಂಡವರೇ ಈ ಅಮರ್ ಕೋಟೆ.ಆದರೆ ಈ ‘ಜವನೆ’ ಯ ಕಲ್ಪನೆ, ಕನಸಿನ ಲಾಭವನ್ನು ಪಡೆದುಕೊಂಡದ್ದು ಮಾತ್ರ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್.
ಒಂದು ದೊಡ್ಡ ಸಂಖ್ಯೆಯ ಜವನೆರನ್ನು ಕಟ್ಟಿಕೊಂಡು ,ಜವನೆರ್ ಬೆದ್ರ ಎಂಬ ಸಂಘಟನೆಯ ಮೂಲಕ ,ಮೂಡುಬಿದಿರೆ ಪರಿಸರದಲ್ಲಿ ಹಲವು ಜನಪರ ಕಾಳಜಿಯ ಕೆಲಸಗಳನ್ನು ಮಾಡುತ್ತಾ ಪ್ರಸಿದ್ಧಿಗೆ ಬಂದಿದ್ದ ಇದೇ ಅಮರ್ ಕೋಟೆಯ ತಲೆಯಲ್ಲಿ ತಮ್ಮ ಸಂಘಟನೆಯ ಮೂಲಕ ಬೆದ್ರದಲ್ಲೊಂದು ಅಬ್ಬಕ್ಕಳ ಪ್ರತಿಮೆಯನ್ನು ನಿರ್ಮಾಣ ಮಾಡಬೇಕೆಂಬ ಕಲ್ಪನೆಯಿತ್ತು. ವಿದ್ಯಾಗಿರಿಯಲ್ಲಿ ಈ ಪ್ರತಿಮೆ ನಿರ್ಮಿಸಬೇಕೆಂಬ ಉದ್ದೇಶವೂ ಇತ್ತು.ಅದಕ್ಕಾಗಿ ಸಂಸದ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಹೆದ್ದಾರಿಯವರ ,ರಾಜ್ಯ ಹೆದ್ದಾರಿಯವರ ಎಂದು ಅನುಮತಿಗಾಗಿ ಅಲೆದಾಡುತ್ತಿದ್ದರು.ಆ ಸಂದರ್ಭದಲ್ಲಿ ಪ್ರಪ್ರಥಮವಾಗಿ ಶಾಸಕರಾಗಿ ಆಯ್ಕೆಯಾಗಿದ್ದವರು ಉಮಾನಾಥ ಕೋಟ್ಯಾನ್.
ಅದು 2019 ರ ಸಮಯ.ಈ ವಿಷಯವನ್ನು ಹೊಸ ಶಾಸಕರ ಗಮನಕ್ಕೆ ತಂದಾಗ ‘ ಅದನ್ನು ನಾನು ಮಾಡ್ತೇನೆ, ನಿನಗೆ ಮಂಡೆಬಿಸಿ ಬೇಡ’ ಎಂದು ಜವಾಬ್ದಾರಿ ವಹಿಸಿಕೊಂಡರು. ಆದರೆ ಆ ಪ್ರತಿಮೆ ನಿರ್ಮಾಣವಾದದ್ದು ಮಾತ್ರ ಕಡಲಕೆರೆ ನಿಸರ್ಗಧಾಮದಲ್ಲಿ- ಕಂಬಳ ನಡೆಯುವ ಜಾಗದಲ್ಲಿ.
ಸಾಕಷ್ಟು ಎತ್ತರದ ಕುದುರೆಮೇಲಿನ ಅಬ್ಬಕ್ಕಳ ಪ್ರತಿಮೆಯನ್ನು ಅಂದಿನ ಜಿಲ್ಲಾಧಿಕಾರಿಯವರು ಉದ್ಘಾಟಿಸಿದ್ದರು. ವರ್ಷಕ್ಕೊಮ್ಮೆ ನಡೆಯುವ ಕಂಬಳದ ಸಮಯದಲ್ಲಿ ಮಾತ್ರ ಜನರು ಈ ಪ್ರತಿಮೆಯನ್ನು ನೋಡಿ, ಒಂದಿಷ್ಟು ಮಂದಿ ಫೊಟೊ ಕ್ಲಿಕ್ಕಿಸಿಕೊಳ್ಳುತ್ತಾರೆಯೇ ವಿನಹ ಅದು ಅಲ್ಲಿ ನಿರ್ಮಾಣವಾಗಿ ಯಾವ ಪ್ರಯೋಜನವೂ ಇಲ್ಲ.ಕೇವಲ ಕೋಟ್ಯಾನ್ ಅವರು ಶಾಸಕರಾದ ಕೂಡಲೇ ಈ ಪ್ರತಿಮೆಯನ್ನೂ ಮಾಡಿಸಿದ್ದಾರೆ ಎಂದು ದಾಖಲೆ ಹೇಳಿಕೊಳ್ಳಲು ಮಾತ್ರ ನಿರ್ಮಾಣವಾದಂತಿದೆ.ಅದೇ ಪ್ರತಿಮೆಯನ್ನು ವಿದ್ಯಾಗಿರಿಯಲ್ಲೋ, ಬೆದ್ರ ಪೇಟೆಯಲ್ಲೋ ನಿರ್ಮಾಣ ಮಾಡಬಹುದಿತ್ತಾದರೂ ನಾಲ್ಕು ಬಾರಿ ಶಾಸಕರಾಗಿದ್ದ ಅಭಯರಿಗಾಗಲೀ, ಎರಡು ಬಾರಿ ಶಾಸಕರಾದ ಕೋಟ್ಯಾನ್ ರವರಿಗಾಗಲೀ ಮಂಡೆಗೆ ಹೋದದ್ದೇ ಇಲ್ಲ.
ಅದು ಬಿಡಿ, ಸುಂದರ ಕಲ್ಪನೆಯ ಐಡಿಯಾವನ್ನು ಯಾವ ಅಮರ್ ಕೋಟೆ ಕೊಟ್ಟಿದ್ದರೋ ಅದೇ ಅಮರ್ ಕೋಟೆಗೆ ಸೌಜನ್ಯಕ್ಕಾದರೂ ಪ್ರತಿಮೆ ಅನಾವರಣ ದಿನ ಹೇಳಲೇ ಇಲ್ಲ.ಅಮರ್ ಕೋಟೆಯ ಕನಸಿನ ಕೋಟೆಗೆ ಗಾಯವಾದದ್ದೇ ಆಗ.
ಆದರೆ ಈ ಮನುಷ್ಯ ಸುಮ್ಮನೆ ಕೂರಲಿಲ್ಲ. 2019 ರ ಡಿಸೆಂಬರ್ ನಲ್ಲಿ ಕಡಲ ಕೆರೆಯಲ್ಲಿ ಶಾಸಕ ಕೋಟ್ಯಾನ್ ಪ್ರತಿಮೆಯನ್ನು ಅನಾವರಣಗೊಳಿಸಿದರೆ ಕೇವಲ ಒಂದೇ ತಿಂಗಳ ಅಂತರದಲ್ಲಿ ಅಂದರೆ 2020 ರ ಜನವರಿ 26 ಕ್ಕೆ ಚೌಟರ ಅರಮನೆಯ ಮುಂಭಾಗದಲ್ಲಿ ಒಂದು ಸಣ್ಣದಾದ ಪ್ರತಿಮೆ ನಿರ್ಮಿಸಿ ಅನಾವರಣಗೊಳಿಸಿದ್ದ ಹೆಗ್ಗಳಿಕೆ ಕೋಟೆಯವರದ್ದು.
ಇದೀಗ 5 ವರ್ಷಗಳ ಅವಧಿಯಲ್ಲಿ ಅದೇ ಪ್ರತಿಮೆಯನ್ನು ದೊಡ್ಡದಾಗಿ ನಿರ್ಮಿಸಿ ನಾಳೆಯ ದಿನ ಲೋಕಾರ್ಪಣೆಗೊಳಿಸಲು ಸಿದ್ಧತೆ ನಡೆಯುತ್ತಿದೆ. ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು 6.5 ಅಡಿ ಎತ್ತರದ ಅಬ್ಬಕ್ಕಳ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಅಮರ್ ಕೋಟೆ ಒಂದು ಸುಂದರ ಬೆದ್ರದ ಕನಸುಗಾರ.ಅವರಲ್ಲಿ ಅನೇಕ ಅಭಿವೃದ್ಧಿಯ ಚಿಂತನೆಗಳಿವೆ.ಅವರ ಗಾತ್ರದಷ್ಟೇ ದೊಡ್ಡ ಸಂಖ್ಯೆಯಲ್ಲಿ ಅವರೊಂದಿಗೆ ‘ಜವನೆ’ರ್ ಇದ್ದಾರೆ.ಇಂತಹ ಅಭಿವೃದ್ಧಿ ಕನಸಿನ ಯುವಕನನ್ನು ಎರಡೂ ಪ್ರಬಲ ರಾಜಕೀಯ ಪಕ್ಷಗಳು ಬಳಸಿಕೊಳ್ಳದಿರುವುದೇತಕೆ ಎನ್ನುವುದೇ ಪ್ರಶ್ನೆ.
‘ಯುವ ನಾಯಕ’ ನೆಂದು ಕರೆಸಿಕೊಳ್ಳುವ ಪಕ್ಷ ಪ್ರಮುಖನೋರ್ವನೊಂದಿಗೆ ಈ ಅಮರ್ ಕೋಟೆ ‘ ಕೈ’ ಜೋಡಿಸಿಕೊಳ್ಳುತ್ತಾರಾ ಎನ್ನುವ ಚರ್ಚೆಗಳು ಕೂಡಾ ನಡೆಯುತ್ತಿದೆ.











