ಈ ಸೀಝನ್ ನ ಮೊದಲ ಕಂಬಳ ಇದೇ ತಿಂಗಳ 15 ನೇ ತಾರೀಕಿನಂದು ಪಣಪಿಲದಲ್ಲಿ ನಡೆಯಲಿದೆ.ಜಯ-ವಿಜಯ ಹೆಸರಿನಲ್ಲಿ ನಡೆಯುವ ಈ ಪಣಪಿಲ ಕಂಬಳಕ್ಕೆ ಈಬಾರಿ ಹದಿನಾರನೇ ವರ್ಷ.
ಪಣಪಿಲ ಎಂಬ ಗ್ರಾಮೀಣ ಪ್ರದೇಶದಲ್ಲಿ ಹದಿನೈದು ವರ್ಷಗಳ ಹಿಂದೆ ಪ್ರಾರಂಭಗೊಂಡ ಇಲ್ಲಿನ ಕಂಬಳಕ್ಕೆ ಒಂದು ಒಳ್ಳೆಯ ಹೆಸರಿದೆ.ನಂದೊಟ್ಟು ಪಣಪಿಲದ ಯುವರಾಜ್ ಜೈನ್ ಎನ್ನುವ ಹಿರಿಯರೋರ್ವರ ಮುತುವರ್ಜಿ, ಶ್ರಮ, ಸಾರಥ್ಯದ ಫಲ ಕಳೆದ ಹದಿನೈದು ವರ್ಷಗಳ ಕಂಬಳದ ಯಶಸ್ಸಿನ ಹಿಂದಿದೆ.

ಈ ಭಾಗದ ಹಿರಿಯ- ಕಿರಿಯರೆಲ್ಲಾ ಬಹಳಷ್ಟು ಉತ್ಸಾಹದಿಂದ ಕಂಬಳ ಕರೆ, ರಸ್ತೆ ಮುಂತಾದ ಅನೇಕ ಕೆಲಸಗಳನ್ನು ಮಾಡುತ್ತಾ ಬಂದು ಕಂಬಳಾಭಿಮಾನಿಗಳ ಸುಗಮ ಆಗಮನಕ್ಕೆ ದೊಡ್ಡ ಮಟ್ಟಿನ ಪ್ರಯತ್ನ ಪಟ್ಟಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಕಂಬಳದ ಯಶಸ್ಸಿಗೆ ಬೇಕಾಗಿ ಒಂದು ಮುಂಡಾಸಿನೊಳಗಿನ ತಲೆ ಎಲ್ಲ ರೂಪುರೇಷೆಗಳನ್ನು ಹಾಕುತ್ತಿದೆ.ಆ ಮುಂಡಾಸಿನೊಳಗಿನ ತಲೆ ಬೇರೆ ಯಾರದ್ದೂ ಅಲ್ಲ.ಅಶ್ವಥ್ ಪಣಪಿಲ ಎಂಬ ಕ್ರಿಯಾಶೀಲ ಯುವಕನ ತಲೆ. ಆ ತಲೆಯೊಳಗಿನ ಐಡಿಯಾಗಳೇ ಇಲ್ಲಿನ ಕಂಬಳವನ್ನು ಯಶಸ್ಸಿನತ್ತ ಸಾಗಿಸುತ್ತಿದೆ ಎನ್ನುವುದು ಆ ಪರಿಸರದವರ ಅಭಿಪ್ರಾಯ.
ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ದೊಡ್ಡ ಜವಾಬ್ದಾರಿ ವಹಿಸಿಕೊಂಡು ಕಂಬಳಕ್ಕೆ ಸಾಕಷ್ಟು ತಿಂಗಳ ಹಿಂದೆಯೇ ಹಲವು ಯೋಜನೆ, ಯೋಚನೆಗಳನ್ನು ಹಾಕಿ ಅದನ್ನು ಸಮಿತಿಯ ಪದಾಧಿಕಾರಿಗಳ ಮುಂದಿಟ್ಟು ಕಾರ್ಯರೂಪಗೊಳಿಸುವಲ್ಲಿ ಈ ಅಶ್ವಥ್ ಪಣಪಿಲ ಎಂಬ ಯುವಕ ಯಶಸ್ವಿಯಾಗುತ್ತಿರುವುದು ಕುಷಿಯ ವಿಚಾರ.
ಒಂದು ಗ್ರಾಮೀಣ ಪ್ರದೇಶದಲ್ಲಿ ಕಂಬಳ ನಡೆಸುವುದು ಸುಲಭದ ವಿಷಯವಲ್ಲ, ಅದರಲ್ಲೂ ಹೊನಲು ಬೆಳಕಿನ ಕಂಬಳ ನಡೆಸುವುದೆಂದರೆ ಒಂದು ಸಾಹಸವೇ ಸರಿ.ಸಾಕಷ್ಟು ಸಿದ್ಧತೆ,ತಯಾರಿ, ಹಣಕಾಸು ಹೊಂದಿಸುವಿಕೆ, ಸಮಿತಿ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಚ್ಚುಕಟ್ಟಾದ ಕಾರ್ಯಕ್ರಮವನ್ನು ಆಯೋಜಿಸಿ ಅಷ್ಟೇ ಜವಾಬ್ದಾರಿಯಿಂದ ಮುಗಿಸುವುದು ಬಹುದೊಡ್ಡ ಹೊಣೆಗಾರಿಕೆ.
ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಥ್ ಪಣಪಿಲ ಅವರು ಈ ಎಲ್ಲಾ ವಿಷಯಗಳಲ್ಲೂ ಸಕ್ಸಸ್ ಆಗುತ್ತಿದ್ದಾರೆಂದರೆ ಅದು ಅವರ ಕ್ರಿಯಾಶೀಲತೆ ಮತ್ತು ಸಂಘಟನಾ ಚತುರತೆಯನ್ನು ತೋರಿಸುತ್ತದೆ.
ರಾಜಕೀಯವಾಗಿಯೂ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿರುವ ಅಶ್ವಥ್ ಅವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೂ ತನ್ನದೇ ಆದ ಸೇವೆಯನ್ನು ನೀಡುತ್ತಾ ಬಂದಿದ್ದಾರೆ.
ಪಣಪಿಲ ಜಯ-ವಿಜಯ ಜೋಡುಕರೆ ಕಂಬಳದ ಗೌರವಾಧ್ಯಕ್ಷರಾಗಿ ಶಾಸಕ ಉಮಾನಾಥ ಕೋಟ್ಯಾನ್, ಅಧ್ಯಕ್ಷರಾಗಿ ಯುವರಾಜ್ ಜೈನ್, ಕಾರ್ಯಾಧ್ಯಕ್ಷರಾಗಿ ಸುಭಾಷ್ ಚಂದ್ರ ಚೌಟ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಥ್ ಕೆ.ಪಣಪಿಲ,ಜೊತೆ ಕಾರ್ಯದರ್ಶಿಗಳಾಗಿ ಯೋಗೀಶ್ ನಂದೊಟ್ಟು,ದೀಕ್ಷಿತ್ ಪಣಪಿಲ, ಕೋಶಾಧಿಕಾರಿಯಾಗಿ ಜಯಚಂದ್ರ ಎನ್, ಉಪಾಧ್ಯಕ್ಷರಾಗಿ ಮುನಿರಾಜ ಹೆಗ್ಡೆ,ರಮಾನಾಥ ಸಾಲ್ಯಾನ್,ರವಿ ಪೂಜಾರಿ ಹಾಗೂ ಪ್ರವೀಣ್ ಕೋಟ್ಯಾನ್ ಅವರು ಕಾರ್ಯನಿರ್ವಹಿಸುತ್ತಿದ್ದು ಕಂಬಳದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.ಅನೇಕ ಮಂದಿ ಯುವಕರು ಸಮಿತಿ ಸದಸ್ಯರಾಗಿ ಪದಾಧಿಕಾರಿಗಳಿಗೆ ಕೈಜೋಡಿಸುತ್ತಿದ್ದಾರೆ.
ಇಲ್ಲಿ ಬಿಜೆಪಿ, ಕಾಂಗ್ರೆಸ್ ಎಂಬ ಎರಡೂ ಪಕ್ಷದವರೂ ಇದ್ದಾರೆ. ಆದರೆ ಊರಿನ ಕಂಬಳದ ಯಶಸ್ಸಿಗಾಗಿ ಇದರ ಯೋಚನೆಯೇ ಯಾರಲ್ಲೂ ಇಲ್ಲದಿರುವುದು ಕೂಡಾ ಯಶಸ್ಸಿಗೆ ಕಾರಣವಾಗಿದೆ.
ಇವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ಸಿನ ದಡ ಸೇರಿಸುವುದು ಸಮಿತಿ ಕಾರ್ಯದರ್ಶಿಯ ದೊಡ್ಡ ಜವಾಬ್ದಾರಿ. ಅದನ್ನು ಅಶ್ವಥ್ ಪಣಪಿಲ ಎಂಬ ಕನಸು ಕಂಗಳ ಯುವಕ ಮಾಡುತ್ತಿದ್ದಾರೆ.ಅವರೆಲ್ಲಾ ಕಾರ್ಯ ಯೋಜನೆಗಳು ಯಶಸ್ವಿಯಾಗಲಿ ಎಂಬ ಹಾರೈಕೆ.






