ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಶೆಟ್ಟಿ ಅವರ ಹಿಂಭಡ್ತಿ ಆದೇಶ ರದ್ದಾಗಿದ್ದು ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಯಾವುದೇ ನೋಟೀಸು, ಸಕಾರಣ ನೀಡದೆ ಏಕಾಏಕಿಯಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಅನಿತಾ ಶೆಟ್ಟಿ ಅವರಿಗೆ ಹಿಂಭಡ್ತಿ ನೀಡಲಾಗಿತ್ತು.
ಇದು ಸಾಕಷ್ಟು ವಿವಾದಕ್ಕೆಡೆಮಾಡಿಕೊಟ್ಟಿತ್ತು. ಆಳ್ವಿನ್ ಮಿನೇಜಸ್ ಎಂಬವರ ದೂರಿನ ಹಿನ್ನೆಲೆಯಲ್ಲಿ ಈ ಹಿಂಭಡ್ತಿ ನೀಡಲಾಗಿತ್ತೆನ್ನಲಾಗಿದೆ.ಆದರೆ ಅನಿತಾ ಶೆಟ್ಟಿ ಅವರನ್ನು ವಿಚಾರಣೆ ನಡೆಸದೆ ಏಕಾಏಕಿಯಾಗಿ ಕರ್ತವ್ಯದಿಂದ ಹಿಂಭಡ್ತಿಗೊಳಿಸಿರುವುದು ಕಲ್ಲಬೆಟ್ಟು ಬ್ಯಾಂಕ್ ನ ಹೆಚ್ಚಿನ ಸದಸ್ಯರು, ಗ್ರಾಹಕರು ಮತ್ತು ಸ್ಥಳೀಯರಲ್ಲಿ ಅಸಮಾಧಾನ ತರಿಸಿತ್ತು.
ಈ ಹಿಂಭಡ್ತಿಯ ವಿಚಾರದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ಪ್ರತಿಭಟನೆ ನಡೆದಿತ್ತು. ಈ ಸಂದರ್ಭದಲ್ಲಿ ಪಕ್ಷಬೇಧ ಮರೆತು ಈ ಭಾಗದ ಜನ ಸೇರಿದ್ದರು.ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ಪ್ರತಿಭಟನಾ ಸ್ಥಳದಿಂದಲೇ ಶಾಸಕ ಕೋಟ್ಯಾನ್ ತರಾಟೆಗೆ ತೆಗೆದುಕೊಂಡಿದ್ದರು.
ಅನಿತಾ ಶೆಟ್ಟಿ ಅವರು ತನಗಾದ ಅನ್ಯಾಯದ ವಿರುದ್ಧ ರಾಜ್ಯ ಉಚ್ಚನ್ಯಾಯಾಲಯದ ಮೊರೆ ಹೋಗಿದ್ದರು.
ಹೈಕೋರ್ಟ್ ನಲ್ಲಿ ಅನಿತಾ ಶೆಟ್ಟಿ ಪರ ಆದೇಶ ಬಂದಿದ್ದು ಅವರು ಸಿ.ಇ.ಒ.ಆಗಿ ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತಾಗಿದೆ.










