‘ಮೂಡುಬಿದಿರೆ ಪುರಸಭಾ ಕಚೇರಿಯ ಎದುರಲ್ಲೇ ನಿರ್ಮಾಣವಾದ ಫಾರ್ಚೂನ್ ನೀತಿ ಹೈಟ್ಸ್ ಕಟ್ಟಡದವರು ತಮ್ಮ ಅನುಕೂಲಕ್ಕಾಗಿ ಪುರಸಭೆಯ ಜಾಗವನ್ನು ನುಂಗಿದ್ದಾರೆ, ನಮ್ಮ ಜಾಗದಲ್ಲಿ ಕಾಂಕ್ರೀಟ್ ರಸ್ತೆ ಮಾಡಿ ಗೇಟ್ ಹಾಕಿದ್ದಾರೆ, ಅವರಿಗೆ ಪರ್ಮಿಷನ್ ಕೊಟ್ಟವರ್ಯಾರು ? ಅವರು ಪುರಸಭೆಯಿಂದ ಅನುಮತಿ ಪಡೆದುಕೊಂಡಿದ್ದಾರಾ ? ದಾಖಲೆಯಲ್ಲಿ ಈಗಲೂ ಆ ಜಾಗ ಪುರಸಭೆಯದ್ದೆಂದೇ ಇದೆ, ಹಿಂದೆಲ್ಲಾ ಅಲ್ಲಿ ಟೆಂಪೊ ಪಾರ್ಕಿಂಗ್ ಇತ್ತು, ಪಕ್ಕದಲ್ಲೊಂದು ಬಾವಿ ಇತ್ತು, ನಾವೆಲ್ಲಾ ಅದೇ ಬಾವಿ ನೀರು ಉಪಯೋಗಿಸುತ್ತಿದ್ದೆವು, ಈಗ ಬಾವಿಯೇ ಮಯಕ್ಕವಾಗಿದೆ’.
ಹೀಗೆಂದು ಪುರಸಭಾ ಕೊನೆಯ ಅಧಿವೇಶನದಲ್ಲಿ ಆರೋಪಿಸಿದವರು ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್ ಮತ್ತು ಕೊರಗಪ್ಪ.
ಪುರಸಭೆಯ ಅನುಮತಿ ಪಡೆಯದೆ ಪುರಸಭಾ ಜಾಗವನ್ನು ಅವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಮಾಸ್ತಿಕಟ್ಟೆ ಸಮೀಪದ ಏದಾಡಿ ಎಂಬಲ್ಲಿ ತಿಂಗಳಿಗೆರಡರಂತೆ ಮನೆ ನಿರ್ಮಾಣವಾಗುತ್ತಿದೆ, ಆ ಪ್ರದೇಶದಲ್ಲಿ ಸಾಕಷ್ಟು ಮನೆಗಳಾಗಿದೆ.ಒಂದಕ್ಕೊಂದು ತಾಗಿಕೊಂಡೇ ಮನೆ ನಿರ್ಮಾಣವಾಗಿದ್ದು ಯಾವುದಕ್ಕೂ ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆಗಳಿಲ್ಲ, ಪುರಸಭೆಯ ವತಿಯಿಂದ ಲೈಸೆನ್ಸ್ ಕೊಡುವಾಗ ಇದನ್ನೆಲ್ಲಾ ಕೇಳುವುದಿಲ್ಲವಾ ? ಎಂದು ಸದಸ್ಯೆ ದಿವ್ಯಾ ಜಗದೀಶ್ ಸಭೆಯ ಗಮನಕ್ಕೆ ತಂದಾಗ ಸದಸ್ಯರಾದ ಕೊರಗಪ್ಪ,ರಾಜೇಶ್ ನಾಯ್ಕ್ ಇದಕ್ಕೆ ಧ್ವನಿಗೂಡಿಸಿದರು.
ಇನ್ನು ಮುಂದಕ್ಕೆ ಲೈಸನ್ಸ್ ನೀಡಬೇಕಾದರೆ ಅಲ್ಲಿನ ಮೂಲಭೂತ ಸೌಲಭ್ಯಗಳಿಗೆ ಪುರಸಭೆ ಮಾಡುವ ಖರ್ಚನ್ನು ಕೊಡುವುದಾದರೆ ಮಾತ್ರ ಲೈಸೆನ್ಸ್ ಕೊಡಿ ಎಂದು ಹಿರಿಯ ಸದಸ್ಯ ಪಿ.ಕೆ.ಥಾಮಸ್ ಅವರು ಸಲಹೆ ನೀಡಿದರು.


ಕಳೆದ ಸಭೆಯಲ್ಲಿ ಪ್ರಸ್ತಾಪವಾಗಿದ್ದ ಸ್ವರಾಜ್ಯ ಮೈದಾನದ ಬಳಿಯ ಕಟ್ಟಡದ ಬಗ್ಗೆ ಮತ್ತೆ ಪ್ರಸ್ತಾಪವಾಗಿ ಕೂಡಲೇ ಪರಿಶೀಲನೆಗೆ ಇಂಜಿನಿಯರ್ ಅವರನ್ನು ಕಳುಹಿಸಿಕೊಡಲು ನಿರ್ಧರಿಸಲಾಯಿತು.
ಮಾರ್ಕೆಟ್ ಕಟ್ಟಡದ ಗುತ್ತಿಗೆದಾರರು ಅಂಗಡಿ ಕೋಣೆಗಳಿಗೆ ಸಾಕಷ್ಟು ಹಣ ಪಡೆದಿದ್ದಾರೆಂಬ ಮಾತುಗಳು ಕೇಳಿಬರುತ್ತಿದ್ದು ಗೊಂದಲ ನಿರ್ಮಾಣವಾಗಿದೆ, ಆದರೆ ಮಾರ್ಕೆಟ್ ಹೊಸ ಕಟ್ಟಡಕ್ಕೆ ಶಿಫ್ಟ್ ಆಗುವಾಗ ಮೂಲ ವ್ಯಾಪಾರಿಗಳಿಗೆ ತೊಂದರೆಯಾಗದಿರಲಿ ಎಂದು ಸದಸ್ಯ ಪ್ರಸಾದ್ ಕುಮಾರ್ ಅವರು ಸಲಹೆ ನೀಡಿದರು.
ಈಬಗ್ಗೆ ವಿವರಿಸಿದ ಮುಖ್ಯಾಧಿಕಾರಿ ಇಂದು ಎಂ.ಅವರು ‘ ಮಾರ್ಕೆಟ್ ಕಟ್ಟಡ ಕಾಮಗಾರಿ ಮುಂದುವರಿಕೆಗೆ ಪೂರಕವಾದ ಅನುಮತಿ ಸಿಕ್ಕಿದೆ, ಮೂಲ ವ್ಯಾಪಾರಸ್ಥರ ಪಟ್ಟಿ ನಮ್ಮಲ್ಲಿದೆ,ಅವರ್ಯಾರಿಗೂ ಸಮಸ್ಯೆಯಾಗುವುದಿಲ್ಲ’ ಎಂದರು.
ಉಪಾಧ್ಯಕ್ಷ ನಾಗರಾಜ್ ಪೂಜಾರಿ ಅವರು ‘ ರಿಂಗ್ ರೋಡ್ ಬಳಿ ಕಟ್ಟಡ ನಿರ್ಮಾಣವಾಗುವಾಗ ಅದರ ಮಾಲಕರು ಅಲ್ಲಿನ ರಾಜಕಾಲುವೆಯನ್ನು ನೆಲಸಮಗೊಳಿಸಿದ್ದಾರೆ,ಇದಕ್ಕೆ ತನ್ನ ಆಕ್ಷೇಪ ಇದೆ’ ಎಂದರು.
ಸದಸ್ಯರಾದ ಇಕ್ಬಾಲ್ ಕರೀಮ್, ಸುರೇಶ್ ಕೋಟ್ಯಾನ್, ಪುರಂದರ ದೇವಾಡಿಗ, ಸುಜಾತ, ಶ್ವೇತ,ಮಮತಾ ಆನಂದ್,ಜೊಸ್ಸಿ ಮಿನೇಜಸ್, ಶಕುಂತಲಾ ಹರೀಶ್, ನವೀನ್ ಶೆಟ್ಟಿ, ಸೌಮ್ಯ ಶೆಟ್ಟಿ, ರೂಪಾ ಸಂತೋಷ್,ಹಿಮಾಯತ್, ನಾಮನಿರ್ದೇಶಿತ ಸದಸ್ಯರಾದ ಕ್ಲಾರಿಯೋ ಸುಶ್ಮಿತ್ ಡಿಸೋಜ, ಲತೀಫ್, ಸತೀಶ್ ಕೋಟ್ಯಾನ್, ವರುಣ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.






