ಕಳೆದ 55 ವರ್ಷಗಳಿಂದ ಪೇಪರ್ ವಿತರಕರಾಗಿ ‘ಪೇಪರ್ ರಾಜ’ ಎಂದೇ ಖ್ಯಾತರಾಗಿರುವ ರಾಜಣ್ಣರಿಗಿದ್ದ ಸ್ವಂತ ಸೂರಿನ ಕನಸೊಂದು ನನಸಾಗಿದೆ.
ಸಮಾಜ ಸೇವಕ ಅನಿಲ್ ಮೆಂಡೋನ್ಸ ಅವರು ತಮ್ಮ ಕೇರ್ ಚಾರಿಟೇಬಲ್ ಟ್ರಸ್ಟ್ ಮೂಲಕ ಕೇರ್ ತಕೊಂಡು ರಾಜರ ಕನಸನ್ನು ನನಸು ಮಾಡಿದ್ದಾರೆ. ಅವರದ್ದೇ ಮುತುವರ್ಜಿಯಲ್ಲಿ ನಿರ್ಮಾಣಗೊಂಡ ಆ ಮನೆಗೆ ರಾಜಾಶ್ರಯ ಎಂಬ ಸುಂದರವಾದ ಹೆಸರಿಟ್ಟು ಅದನ್ನು ಗಣ್ಯರಿಂದ ಉದ್ಘಾಟಿಸಿ ಇಂದಿನಿಂದ ‘ನೀನೇ ರಾಜ ಕುಮಾರ’ ಎಂದು ಬಿಟ್ಟುಕೊಟ್ಟಿದ್ದರು.
ಅದೆಲ್ಲಾ ಒಳ್ಳೆಯ ಬೆಳವಣಿಗೆ ಮತ್ತು ಈ ಭಾಗದಲ್ಲಿ ಕುಷಿಯ ಸಂಗತಿ.ಅದರ ಜೊತೆಗೆ ಮನೆ ಉದ್ಘಾಟನೆ ಸಂದರ್ಭದಲ್ಲಿ ಮೂರೂ ಧರ್ಮದವರನ್ನೂ ಕರೆದು ಸೌಹಾರ್ದ ದ ಸಂದೇಶವನ್ನೂ ಸಾರಿದ್ದರು.

ಮನೆಗೆ ಸುಮಾರು 9 ಲಕ್ಷದಷ್ಟು ಅಂದಾಜು ವೆಚ್ಚ ತಗಲಿರಬಹುದು. ಅದರಲ್ಲಿ 5.40 ಲಕ್ಷ ರಾಜಣ್ಣರದ್ದು. ಮೆಟೀರಿಯಲ್ ಗೆಂದು ಕೆಲವುಬಾರಿ ಸ್ವಲ್ಪ ಸ್ವಲ್ಪ ಅಂತ ತೆಗೆದುಕೊಂಡು ಅದು 5.40 ಲಕ್ಷ ಆಗಿದೆ. ಉಳಿದ ಹಣವನ್ನು ಅನಿಲ್ ಅವರು ದಾನಿಗಳಿಂದ ಸಂಗ್ರಹಿಸಿದ್ದಾರೆ. ವಿದ್ಯುತ್ ಗುತ್ತಿಗೆದಾರ ಅನೀಶ್ ಡಿಸೋಜ ಅವರು ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸಿದ್ದಾರೆ.
ಈ ಮನೆ ನಿರ್ಮಾಣದ ಬಗ್ಗೆ ಹಲವು ಅಂತೆಗಂತೆಗಳು ಕೇಳಿಬರುತ್ತಿದೆ. ಆದರೆ ಇದಿಷ್ಟು ಸತ್ಯ ಸಂಗತಿ. ರಾಜಾಶ್ರಯಕ್ಕೆ ದೊಡ್ಡ ಪಾಲು ರಾಜರದ್ದೇ ಆಗಿದೆ. ಉಳಿದ ಮೊತ್ತ ಮಾತ್ರ ಅನಿಲ್ ಅವರದ್ದು.
ಹಾಗಂತ ರಾಜಾಶ್ರಯದ ಹಿಂದೆ ಅನಿಲ್ ಅವರ ಶ್ರಮವಿದೆ. ಬಡಜೀವವೊಂದಕ್ಕೆ ಮಾನವೀಯ ನೆಲೆಯಲ್ಲಿ ಸೂರು ಒದಗಿಸಿಕೊಟ್ಟಿರುವ ಅವರ ಮಾನವೀಯ ಸೇವೆ ಶ್ಲಾಘನೀಯವಾದದ್ದು. ಆದರೆ ಈ ಮನೆಗೆ ಬಹುಪಾಲು ಕೊಡುಗೆ ಪೇಪರ್ ರಾಜರದ್ದೇ ಎನ್ನುವುದು ಕೂಡಾ ಗಮನಾರ್ಹ ಸಂಗತಿ.
ಹೊಸಮನೆಯ ಉದ್ಘಾಟನೆ ಮಾತ್ರ ಮೊನ್ನೆ ನಡೆದಿದೆ, ಇಲ್ಲೊಕ್ಕೆಲ್ ಇನ್ನು ಆಗಬೇಕೆಂದು ರಾಜ ಅವರು ಹೇಳಿದ್ದಾರೆ. ಇಬ್ಬರಿಗೂ ಅಭಿನಂದನೆಗಳು.







