*ಅಶ್ರಫ್ ವಾಲ್ಪಾಡಿ
ಹಾಗಂತ ಒಂದು ಗುಸುಗುಸು ಸುದ್ಧಿ ಇದೆ.ಅದು ಸತ್ಯವಾಗಿರಲೂಬಹುದು.ಅಂತಹ ಪ್ರಯತ್ನವೊಂದು ನಡೆಯುತ್ತಿದ್ದು ಶೀಘ್ರದಲ್ಲೇ ಈ ಸಮುದಾಯ ಆಸ್ಪತ್ರೆ ಮತ್ತೆ ಪ್ರಾಥಮಿಕ ಆರೋಗ್ಯ ಕೇಂದ್ರ ಎಂಬ ಹೆಸರಿಗೆ ಬಂದು ಕೆಳದರ್ಜೆಗಿಳಿಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೂಡುಬಿದಿರೆಯ ಕೇಂದ್ರ ಸ್ಥಾನದಲ್ಲಿರುವ ಈ ಸಮುದಾಯ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಬೇಕಿತ್ತು.ಅದಕ್ಕೆ ಸಂಬಂಧಿಸಿ ಸರ್ವರೀತಿಯ ಸೌಲಭ್ಯಗಳು ಇಲ್ಲಿರಬೇಕಿತ್ತು. ಆದರೆ ಅದ್ಯಾಕೋ…ಇಲ್ಲಿನ ಜನಪ್ರತಿನಿಧಿಗಳಿಗೆ, ಸರಕಾರ ಇರುವ ಪಕ್ಷದ ಮುಖಂಡರಿಗೆ ಈ ಬಡವರ ಆಸ್ಪತ್ರೆಯ ಮೇಲೆ ಅಷ್ಟೊಂದು ಕನಿಕರ ಇದ್ದಂತಿಲ್ಲ.
ಸುದೀರ್ಘ ವರ್ಷಗಳ ಇತಿಹಾಸ ಈ ಆಸ್ಪತ್ರೆಗಿದೆ.ಇಲ್ಲಿ ಹಲವು ಮಂದಿ ಖ್ಯಾತನಾಮ ವೈದ್ಯರು ಉತ್ತಮ ಸೇವೆ ನೀಡುವ ಮೂಲಕ ಗಮನಸೆಳೆದಿದ್ದಾರೆ.ಕರ್ತವ್ಯಲೋಪದಲ್ಲಿ ಹೆಸರು ಮಾಡಿದವರೂ ಇದ್ದಾರೆ.ಉತ್ತಮ ಸೇವೆಯ ಮೂಲಕ ಜನರು ಇಂದಿಗೂ ಹೆಸರು ನೆನಪಿಟ್ಟುಕೊಳ್ಳುವಂತಹ ವೈದ್ಯರು, ಸಿಬ್ಬಂದಿಗಳು ಇಲ್ಲಿದ್ದರು. ಸುದೀರ್ಘ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರೂ ಇದ್ದಾರೆ.

ಮೂಡುಬಿದಿರೆ ಪರಿಸರದ ಹೆಚ್ಚಿನವರಿಗೆ ಹೆರಿಗೆಯಾದದ್ದು ಮತ್ತು ಅವರ ಮಕ್ಕಳಿಗೂ ಡೆಲಿವರಿಯಾದದ್ದು ಇದೇ ಆಸ್ಪತ್ರೆಯಲ್ಲಿ. ಈಗಲೂ ಕೆಲವರು ಈ ಆಸ್ಪತ್ರೆಯ ಮುಂಭಾಗದಲ್ಲಿ ಹೋಗವಾಗ ‘my born this hospital’ ಅಂತ ನೆನಪಿಸಿಕೊಳ್ಳಬಹುದು.
ಜ್ಚರ, ತೆಮ್ಮ,ಜುಲಾಬು,ಕೈಕಾರ್ ಬೇನೆ,….ಹೀಗೆ ಯಾವುದೆಲ್ಲ ರೋಗಗಳಿಗೂ ಔಷಧಿಗಾಗಿ ಹೋಗುತ್ತಿದ್ದದ್ದು ಇದೇ ಆಸ್ಪತ್ರೆಗೆ, ಎಡ್ಮಿಟ್ ಆಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದದ್ದು ಇದೇ ಆಸ್ಪತ್ರೆಯಲ್ಲಿ.ಕೊಲೆಯತ್ನ, ಹಲ್ಲೆ ಮುಂತಾದ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸ್ ಕಂಪ್ಲೆಂಟು ಕೊಡಲಿಕ್ಕಿದ್ದರೆ ಮೊದಲು ಇದೇ ಆಸ್ಪತ್ರೆಯ ಬೆಡ್ಡಲ್ಲಿ ಮಲಗಬೇಕು.ಇನ್ನು ಕೆಲವರಿಗೆ ಖಾಯಿಲೆ ವಾಸಿಯಾಗದೆ ಶವವಾಗಿ ವಾಪಾಸಾದದ್ದೂ ಇದೆ!
ಸುತ್ತಮುತ್ತ ಗ್ರಾಮಗಳಲ್ಲಿ ನಡೆದ ಆತ್ಮಹತ್ಯೆ, ಅಪಘಾತ,ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಮರಣೋತ್ತರ ಪರೀಕ್ಷೆ ನಡೆಸಲೂ ಇದೇ ಆಸ್ಪತ್ರೆಗೆ ಕೊಂಡೊಯ್ಯಬೇಕು.( ಕೆಲವೊಮ್ಮೆ ವೈದ್ಯರು ಇಲ್ಲದೆ,ಇದ್ದರೂ ಬಾರದೆ ಕಾಯಬೇಕಿತ್ತು)
ಕಳೆದ ಕೆಲವರ್ಷಗಳಿಂದ ಇಲ್ಲಿ ಸರಿಗಟ್ಟಾದ ಪೂರ್ಣಕಾಲಿಕ ವೈದ್ಯರಿಲ್ಲದಿರುವುದೇ ಇಲ್ಲಿನ ದೊಡ್ಡ ಸಮಸ್ಯೆ. ಈಗ ಇರುವ ಕೂಲಿದ ಡಾಕ್ಟ್ರೇ ಇಲ್ಲಿನ ಮೈನ್ ಡಾಕ್ಟ್ರು. ಅವರಿಗೆ ಕೂಲಿಗೆ ಸಂಬಂಧಿಸಿ ಮದ್ದು ಕೊಡಬಹುದೇ ವಿನಹ ಉಳಿದ ಖಾಯಿಲೆಗಳಿಗೆ ಮದ್ದು ಕೊಡಲಾಗದು. ಸಣ್ಣ ಸಣ್ಣ ಗಾಯಗಳಿಗೆ, ಸಣ್ಣ ಸಣ್ಣ ಖಾಯಿಲೆಗಳಿಗೆ ಹಿರಿಯರ ಸಲಹೆ ಮೇರೆಗೆ ಮದ್ದು ಕೊಡಲಾಗುತ್ತಿದೆ ಬಿಟ್ಟರೆ ಉಳಿದಂತೆ ಇಲ್ಲಿ ದಾಖಲಿಸಿಕೊಳ್ಳಲು ಧೈರ್ಯವಿಲ್ಲ.
ಹೆರಿಗೆಗೆ ಸಂಬಂಧಿಸಿದಂತಾಗಲೀ, ಜನರಲ್ ಚಿಕಿತ್ಸೆಗಾಗಲೀ ವೈದ್ಯರಿಲ್ಲ.ಸಂಜೆ ವೇಳೆಗೆ ಇರುವ ಮೆಡಿಕಲ್ ಸ್ಟೂಡೆಂಟ್ಸ್ ಗೆ ಇಲ್ಲಿನವರ ಭಾಷೆ ಅರ್ಥಾಗಲ್ಲ,ಅವರ ಭಾಷೆ ಇಲ್ಲಿನವರಿಗರ್ಥಾಗಲ್ಲ. ಆ ಕೌಂಟರ್ ಗೆ ಹೋಗಿ ಏನಾದರೂ ಕೇಳಿದರೆ ಅವರು ಇನ್ನೊಬ್ಬರನ್ನು ಕರೆಯಲೇಬೇಕು.
ಹಿಂದಿನ ಕಟ್ಟಡಗಳು ಸುಂದರವಾಗಿಯೇ ಇದೆ.ಆದರೆ ಅದೀಗ ಭೂತಬಂಗಲೆಯಂತಾಗಿದೆ. 108 ಅಂಬುಲೆನ್ಸ್ ಇದೆ.ಅದಕ್ಕೂ ಸರಿಯಾದ ಸಾರಥಿಗಳಿಲ್ಲದೆ ಅದು ಕೆಲವೊಮ್ಮೆ ಸ್ಟಾರ್ಟೇ ಆಗುವುದಿಲ್ಲ. ಈಬಗ್ಗೆ ರಾಜೇಶ್ ಕಡಲಕೆರೆ ಅವರು ಸಾರ್ವಜನಿಕ ಹಿತದೃಷ್ಟಿಯಿಂದ ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಅಂಬುಲೆನ್ಸ್ ಗೂ ಬೇಕಾಗುವ ಸಿಬ್ಬಂದಿಗಳಿಲ್ಲ. ಇರುವುದೊಂದೇ ಜನರೇಟರ್.ಅದು ಇಡೀ ಆಸ್ಪತ್ರೆ ವಠಾರವನ್ನು ಸುಧಾರಿಸಬೇಕು. ಹಳೆಯ ಮಾಡಿನ ಹೆಂಚು, ರೀಪು,ಪಕ್ಕಾಸನ್ನು ತೆಗೆಯುತ್ತಿದ್ದಾರೆ- ಯಾಕೆಂದು ಗೊತ್ತಿಲ್ಲ.
ಹಿಂದೊಮ್ಮೆ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್ ಅವರು ಇಲ್ಲಿಗೊಮ್ಮೆ ದಿಢೀರ್ ಭೇಟಿ ನೀಡಿ ವೈದ್ಯರ ಕುರ್ಚಲ್ಲಿ ಕುಳಿತು ಸಮಸ್ಯೆಗಳನ್ನು ಆಲಿಸಿದ್ದರು. ಈಗಿನ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಕೂಡಾ ಇಲ್ಲಿನ ಪ್ರಾಬ್ಲೆಮ್ಸ್ ಗೊತ್ತಿದೆ.ಆವತ್ತೊಮ್ಮೆ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಸುದ್ಧಿಯಾಗಿತ್ತು. ಎಷ್ಟು ಸುದ್ಧಿಯಾಯಿತೋ ಅಷ್ಟೇ ವೇಗವಾಗಿ ಅದು ಮರೆತೇ ಹೋಯಿತು.
ಈಗ ಈ ಆಸ್ಪತ್ರೆಯನ್ನು ಕೆಳದರ್ಜೆಗೆ ತಳ್ಳುವ ಬಗ್ಗೆ ಸಿದ್ಧತೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ.ಅದಕ್ಕೆ ಕಾರಣಗಳು ಇಲ್ಲಿನ ಅವ್ಯವಸ್ಥೆಗಳು.
ಬರುವ ಜನರ ಸಂಖ್ಯೆ ಕಡಿಮೆಯಾಗುತ್ತಿರುವುದು ನಿಜ.ಅದಕ್ಕೆ ಕಾರಣ ಇಲ್ಲಿ ವೈದ್ಯಾಧಿಕಾರಿ ಇಲ್ಲದಿರುವುದು ಮತ್ತು ಸೌಲಭ್ಯಗಳು ಇಲ್ಲದಿರುವುದು.
ಒಂದುವೇಳೆ ಕೆಳದರ್ಜೆಗೆ ಹೋದರೆ ಈ ಆಸ್ಪತ್ರೆ ಮತ್ತೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿರುವಂತೆ ನಗರ ಪ್ರದೇಶವಾದ ಬೆದ್ರದಲ್ಲಿ ಆ ಆಸ್ಪತ್ರೆಯನ್ನು ಕಾಣಬೇಕಿದೆ.
ಇದು ಹಾಗಾಗಬಾರದು.ಹಾಗಾದರೆ ಪಕ್ಕದಲ್ಲಿ ನಿರ್ಮಾಣವಾಗುವ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಇಲ್ಲಿಗೆ ಹಾಕಿ ಟೈ ಅಪ್ ಮಾಡಿಕೊಳ್ಳುವ ಸಂದರ್ಭವೂ ಬರಬಹುದು. ಹೆಚ್ಚುವರಿ ಬೆಡ್ ಗಳಿಗಾಗಿ ಈ ಆಸ್ಪತ್ರೆಯನ್ನು ಬಳಸಿಕೊಳ್ಳಬಹುದು.
ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಬೇಕಾದ ಈ ಆಸ್ಪತ್ರೆ ಮತ್ತೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗುವುದನ್ನು ಮೂಡುಬಿದಿರೆ ಜನ ಖಂಡಿತವಾಗಿ ಒಪ್ಪುವುದಿಲ್ಲ.ಇದನ್ನು ಡೆವಲಪ್ಮೆಂಟ್ ಎನ್ನಲಾಗದು.
ಈ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ತಾಲೂಕು ಆಸ್ಪತ್ರೆಯನ್ನಾಗಿ ಉಳಿಸಿಕೊಳ್ಳಲು ವೇದಿಕೆಯೊಂದು ಸಜ್ಜಾಗುತ್ತಿದೆ.ಅದು ಅನಿವಾರ್ಯ ಕೂಡ.











