ಅಂತರಾಷ್ಟ್ರೀಯ ಮಟ್ಟದ ನಿರೂಪಕ ಮೂಡುಬಿದಿರೆಯ ಸಾಹಿಲ್ ಜಹೀರ್ ಅವರಿಗೆ ಸೌದಿ ಅರೇಬಿಯಾದ ಅಲ್ ಖೋಬರ್ ನಲ್ಲಿ ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಸಭೆಯಲ್ಲಿ ‘ ಇಂಡೋ ಅರಬ್ ಸೋಶಿಯಲ್ ಐಕಾನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿರೂಪಣೆ ಮತ್ತು ಈವೆಂಟ್ ಮೆನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಾಹಿಲ್ ಜಹೀರ್ ಅವರು ಈ ಹಿಂದೆ ನಮ್ಮ ಟಿವಿಯಲ್ಲಿ ವಿಜೆ ಆಗಿ, ರೇಡಿಯೋ ಮಿರ್ಚಿ 98.3 ಎಫ್ ಎಂ.ನಲ್ಲಿ ಆರ್.ಜೆ ಆಗಿ ಕಾರ್ಯ ನಿರ್ವಹಿಸಿದ್ದರು.

ಮೂಡುಬಿದಿರೆ ಸಹಿತ ಜಿಲ್ಲೆ, ರಾಜ್ಯ, ಹೊರರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಿರೂಪಕರಾಗಿ ಹೆಸರು ಗಳಿಸಿರುವ ಸಾಹಿಲ್ ಅವರು ಸೋನು ನಿಗಮ್, ಉದಿತ್ ನಾರಾಯಣ್, ಶ್ರೇಯಾ ಘೋಷಾಲ್ ಅವರಂತಹ ಖ್ಯಾತನಾಮರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ.
ಹಲವು ಭಾಷೆಗಳನ್ನು ಬಲ್ಲ ಸಾಹಿಲ್ ಅವರು ತಮ್ಮದೇ ಶೈಲಿಯಲ್ಲಿ ನಿರೂಪಣೆ ಮಾಡುತ್ತಾ ‘ ನಾನು ಮೂಡುಬಿದಿರೆಯವನು’ ಎಂದು ಹುಟ್ಟೂರನ್ನು ಪರಿಚಯಿಸಿಕೊಳ್ಳುತ್ತಾ ಬೆದ್ರದ ಹೆಸರನ್ನು ಮತ್ತಷ್ಟು ಎತ್ತರಕ್ಕೇರಿಸುತ್ತಿದ್ದಾರೆ.
ಟಿ 10 ಮತ್ತು ಟಿ 20 ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳಿಗೆ ಸಂಬಂಧಿತ ಕಾರ್ಯಕ್ರಮಗಳಿಗೂ ಅವರು ನಿರೂಪಣೆ ಮಾಡಿದ್ದಾರೆ.
ನಿರೂಪಕರಾಗಿ ಅವರ ಕೊಡುಗೆಗಳನ್ನು ಗಮನಿಸಿ ಮತ್ತು ಭಾರತ ಹಾಗೂ ಅರಬ್ ಪ್ರೇಕ್ಷಕರನ್ನು ಸಂಪರ್ಕಿಸುವ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಉದ್ಯಮಿಗಳ ಮಂಡಳಿಯ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










