ಮಗಳ ಬರ್ತ್ ಡೇ ದಿನ ತನ್ನೂರಿನ ವಿದ್ಯಾರ್ಥಿಗಳಿಗೆ ಹದಿನೈದು ಲಕ್ಷದ ನೆರವು ನೀಡಿ ಮಾದರಿಯಾದ ಉದ್ಯಮಿ *ಸೇವೆಗಳ ಮೂಲಕ ಗಮನಸೆಳೆಯುತ್ತಿದ್ದಾರೆ ಮಿಜಾರು ಸುರೇಶ್ ಶೆಟ್ಟಿ

Picture of Namma Bedra

Namma Bedra

Bureau Report

ಉಳ್ಳವರು ತಮ್ಮ ಮಕ್ಕಳ ಹುಟ್ಟಿದ ದಿನದಂದು ತಿನ್ನಲು,ಕುಡಿಯಲೆಂದು ಸಾಕಷ್ಟು ಖರ್ಚು ಮಾಡುತ್ತಾರೆ. ಅವರಿಗಿಂತ ತಾನು ಕಮ್ಮಿ ಇಲ್ಲ ಎಂಬ ಪೈಪೋಟಿಗೆ ಬಿದ್ದು ವ್ಯರ್ಥ ಮಾಡುವವರೇ ಹೆಚ್ಚು.ಇಂತಹ ಸಂದರ್ಭದಲ್ಲಿ ನಮ್ಮ ನಡುವಿನ ಯುವ ನಾಯಕನೊಬ್ಬ ತನ್ನ ಪ್ರಿಯ ಮಗಳ ಬರ್ತ್ ಡೇ ದಿನದಂದು ತನ್ನೂರಿನ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು ಹದಿನೈದು ಲಕ್ಷ ರೂ.ಗಳ ನೆರವು ನೀಡಿ ಮಾದರಿಯಾಗಿದ್ದಾರೆ.


ಈರೀತಿ ಮಾದರಿಯಾದವರ ಹೆಸರು ಮಿಜಾರು ‘ಹರಿ ಮೀನಾಕ್ಷಿ’ ದೋಟ ನಿವಾಸಿ, ಮುಂಬೈ ಉದ್ಯಮಿ, ತುಳುನಾಡ ಸೇನಾ ಸ್ಥಾಪಕ ಸುರೇಶ್ ಶೆಟ್ಟಿ.
ಇದು ಬಹುದೊಡ್ಡ ಕೊಡುಗೆ. ಯಾರೂ, ಎಷ್ಟಿದ್ದರೂ ರೀತಿಯಲ್ಲಿ ಖರ್ಚು ಮಾಡಲು ಮನಸ್ಸು ಮಾಡುವುದಿಲ್ಲ.ಆದರೆ ಸುರೇಶ್ ಶೆಟ್ಟಿ ಅವರಿಗೆ ತನ್ನೂರಿನ ಮೇಲೆ ಅಭಿಮಾನವಿದೆ, ಬಾಲ್ಯ ಜೀವನ ನೆನಪಿದೆ, ಬಡತನ ಗೊತ್ತಿದೆ. ಇದೆಲ್ಲವನ್ನೂ ಅರಿತ ಅವರು ತನ್ನ ಸಂಪಾದನೆಯ ಒಂದಿಷ್ಟು ತನ್ನೂರಿನ ಬಡ ವಿದ್ಯಾರ್ಥಿಗಳಿಗಿರಲಿ ಎನ್ನುವ ಸೇವಾ ಮನೋಭಾವದಿಂದ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ತನ್ನ ಪ್ರಿಯ ಮಗಳು ಝಾನ್ಸಿಯ ಹುಟ್ಟಿದ ದಿನದಂದು ಸ್ಥಳೀಯ ಶಾಸಕರ ಸಹಿತ ತನ್ನಿಷ್ಟದ ಅತಿಥಿಗಳನ್ನು ಕರೆದು, ತನ್ನ ಪ್ರಿಯ ತಂದೆ ಹರಿಯಪ್ಪ ಶೆಟ್ಟಿ, ತಾಯಿ ಮೀನಾಕ್ಷಿ ಅವರ ಸಮ್ಮುಖದಲ್ಲಿ ಮಿಜಾರು-ತೋಡಾರು ಗ್ರಾಮಗಳ ಆರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುಮಾರು 1360 ವಿದ್ಯಾರ್ಥಿಗಳಿಗೆ ಐದು ಲಕ್ಷ ರೂ.ವೆಚ್ಚದ ಪುಸ್ತಕಗಳನ್ನು ಅದರ ಜೊತೆಗೆ ಬ್ಯಾಗ್, ಕೊಡೆಗಳನ್ನು ವಿತರಿಸಿದ್ದಾರೆ‌.


200 ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರದಂತೆ ಹತ್ತು ಲಕ್ಷ ರೂ.ಗಳ ಪ್ರೋತ್ಸಾಹಧನವನ್ನೂ ವಿತರಿಸಿ ಗಮನಸೆಳೆದಿದ್ದಾರೆ.
ಇದರ ಜೊತೆಗೆ ಮೂಡುಬಿದಿರೆ ಪ್ರೆಸ್ ಕ್ಲಬ್ ನ ನೂತನ ಕಟ್ಟಡಕ್ಕೆ ಒಂದು ಲಕ್ಷ ರೂ.ಆರ್ಥಿಕ ಸಹಾಯವನ್ನೂ ನೀಡಿದ್ದಾರೆ.
ಸುರೇಶ್ ಶೆಟ್ಟಿ ಅವರು ಮುಂಬೈನಲ್ಲಿ ಜನಿಸಿದರು ಉದ್ಯಮಿಯಾಗಿದ್ದರೂ ತನ್ನ ಹುಟ್ಟೂರ ಜನರಿಗೆ ಏನಾದರೊಂದು ಸಹಾಯ ಮಾಡಬೇಕೆನ್ನುವ ತುಡಿತ ಉಳ್ಳವರು. ತುಳುನಾಡ ಸೇನಾ ಎನ್ನುವ ಸಂಘಟನೆಯನ್ನು ಕಟ್ಟಿಕೊಂಡು ಈ ಹಿಂದೆ ಮೂಡುಬಿದಿರೆಯಲ್ಲಿ ಸಾಮೂಹಿಕ ವಿವಾಹದಂತಹ ಕಾರ್ಯಕ್ರಮ ಮಾಡಿ, ಬಳಿಕ ಮೂಡುಬಿದಿರೆಯಲ್ಲಿ ಕಂಬಳ ಮಾಡಿ ಪ್ರೋತ್ಸಾಹಿಸಿ ಗಮನಸೆಳೆದವರು.ಅದೆಷ್ಟೋ ಅಸಹಾಯಕರಿಗೆ ನೆರವಾಗಿದ್ದಾರೆ. ಇದೀಗ ಹದಿನೈದು ಲಕ್ಷವನ್ನು ತನ್ನ ಹುಟ್ಟೂರ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಭಿನ್ನರಾಗಿ ಕಂಡಿದ್ದಾರೆ.
ಹುಟ್ಟಿದ ದಿನದಂದು ತಿಂದು ತೇಗಿ, ಕುಡಿದು ತೂಗಿ ವ್ಯರ್ಥ ಖರ್ಚು ಮಾಡುವವರಿಗಿಂತ ಈ ಸೇವೆ ದೊಡ್ಡದು.ಶಾಶ್ವತವಾಗಿ ಜನ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.


ಇವೆಲ್ಲಕ್ಕಿಂತ ಮಿಗಿಲಾಗಿ ಅವರು ತನ್ನ ಹೆಸರಿನ ಜೊತೆಗೆ ತನ್ನ ಹೆತ್ತವರ ಹೆಸರು ‘ ಹರಿಮೀನಾಕ್ಷಿ ‘ ಎನ್ನುವುದನ್ನು ಹೈಲೆಟ್ ಮಾಡಿಕೊಂಡಿರುವುದು.ಈ ಮೂಲಕ ತನ್ನ ಯಶಸ್ಸಿನ ಹಿಂದೆ ಹೆತ್ತವರ ಆಶೀರ್ವಾದ ಇದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಅದೇನೇ ಇರಲಿ, ‘ ದೋಟ ಹರಿಮೀನಾಕ್ಷಿ ‘ ಸುರೇಶ್ ಶೆಟ್ಟಿ ಎನ್ನುವ ನಾಮ ಇಂದು ಬೆದ್ರ ತುಂಬಾ ಹರಿದಾಡುತ್ತಿದೆ.ಬೆದ್ರಕ್ಕೆ ಮತ್ತೊಬ್ಬ ಯುವ ನಾಯಕನ ಎಂಟ್ರಿಯಾಗಿರುವುದು ಕಂಡುಬರುತ್ತಿದೆ.
ಅವರ ಸೇವಾ ಕಾರ್ಯಗಳು ಇನ್ನಷ್ಟು ಮುಂದುವರಿಯಲಿ, ಅದು ಅಶಕ್ತರಿಗೆ,ಅಸಹಾಯಕರಿಗೆ ,ಕಷ್ಟದಲ್ಲಿರುವವರಿಗೆ ಸಹಾಯವಾಗಲಿ ಎಂಬ ಆಶಯ ನಮ್ಮದು.

  • ಅಶ್ರಫ್ ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top