ಗುರುವಾಯನಕೆರೆಯ ಕಾಲೇಜೊಂದರ ವಿದ್ಯಾರ್ಥಿನಿ ಗುರುವಾರ ಮಧ್ಯಾಹ್ನ ಹಾಸ್ಟೆಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಹಲವು ಸಂಶಯಗಳಿಗೆಡೆಮಾಡಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ಇಸ್ಮಾಯಿಲ್ ಝೈಬುಲ್ಲಾ ಮತ್ತು ಶಬನಾ ದಂಪತಿಯ ಪುತ್ರಿ ಅಫ್ರೀನ್ ತಾಜ್ ( 17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ದ್ವಿತೀಯ ಪಿಯುಸಿ ಓದುತ್ತಿರುವ ಈಕೆ ಗುರುವಾರ ಮಧ್ಯಾಹ್ನ ತಾನು ವಾಸ್ತವ್ಯವಿದ್ದ ಹಾಸ್ಟೆಲ್ ಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ವಾರ್ಡನ್ ಅವರು ರಕ್ಷಿಸಲು ಯತ್ನಿಸಿದ್ದರಾದರೂ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದಾಳೆನ್ನಲಾಗಿದೆ.
ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯ ಈ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಸುದ್ದಿ ತಿಳಿದ ಎಸ್.ಡಿ.ಪಿ.ಐ ನಿಯೋಗವು ಸ್ಥಳಕ್ಕೆ ಭೇಟಿ ನೀಡಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದೆ.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹವನ್ನು ಇಡಲಾಗಿದ್ದು ಶುಕ್ರವಾರ ಆಕೆಯ ಹೆತ್ತವರು ಬಂದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿದು ಬಂದಿದೆ. ಅವರು ಯಾವ ರೀತಿ ದೂರು ನೀಡುತ್ತಾರೋ ಆ ಹಿನ್ನೆಲೆಯಲ್ಲಿ ಮುಂದಿನ ತನಿಖೆ ನಡೆಯಲಿದೆ.






