–ಅಶ್ರಫ್ ವಾಲ್ಪಾಡಿ
ಶಿರ್ತಾಡಿ ಗವರ್ನಮೆಂಟ್ ಆಸ್ಪತ್ರೆ. ಇದು ಸುಮಾರು ಹನ್ನೆರಡು ಊರುಗಳಿಗೆ ಕೇಂದ್ರವಾಗಿರುವ ಬಡವರ ಆಸ್ಪತ್ರೆ.ಶಿರ್ತಾಡಿ ಆಸುಪಾಸಿನ ಹಲವು ಗ್ರಾಮಗಳಿಗೆ ಸರಕಾರಿ ಆಸ್ಪತ್ರೆ ಅಂತ ಇರುವುದು ಇದೊಂದೇ.
ಸುಮಾರು ವರ್ಷಗಳ ಇತಿಹಾಸ ಹೊಂದಿರುವ ಈ ಆಸ್ಪತ್ರೆಯೀಗ ಜನರಿಗೆ ಬೇಕು,ಇಲಾಖೆಗೆ ಬೇಡ ಎಂಬಂತಿದೆ.
ಹಲವಾರು ವೈದ್ಯರು ಇಲ್ಲಿಸೇವೆ ನೀಡಿದ್ದು ಇಂದಿಗೂ ಜನರಲ್ಲಿ ನೆನಪಿಡುವಂತಹ ಸಾರ್ಥಕ ಸೇವೆಗೈದಿದ್ದಾರೆ.
ಡಾ.ಕಾಮತ್, ಬಿ.ಬಿ.ಶೆಣೈ, ಡಾ.ಪ್ರಕಾಶ್, ಡಾ.ನಸೀಬಾ, ಡಾ.ಹಾದಿಯಾ ಹೀಗೆ ಹಲವು ಮಂದಿ ವೈದ್ಯರು, ತುಂಬಾ ಮಂದಿ ಸಿಸ್ಟರ್ಸ್ ( ಪ್ರತಿಭಾ, ಅನಸೂಯ ಸಹಿತ) ಇಲ್ಲಿನ ಬಡ ರೋಗಿಗಳಿಗಿನ್ನೂ ನೆನಪಿದ್ದಾರೆ. ಕಂಪೌಂಡರ್ ಬಾಬಣ್ಣ, ಪಿ.ಕೆ.ರಾಜಣ್ಣ, ರೋಗಿಗಳಿಗೆ ಅಡುಗೆ ಮಾಡಿ ಕೊಡುತ್ತಿದ್ದ ಶಿರ್ತಾಡಿಯ ಗೀತಕ್ಕ ಅವರ ಹೆಸರೂ ಶಾಶ್ವತವಾಗಿ ನೆನಪಿನಲ್ಲುಳಿವಂತದ್ದು.
ಶಿರ್ತಾಡಿ ಆಸುಪಾಸಿನ ನಲವತ್ತು ದಾಟಿದ ಹೆಚ್ಚಿನವರ ಹೆರಿಗೆ ಒಂದೋ ಇದೇ ಆಸ್ಪತ್ರೆಯಲ್ಲಿ ಆದದ್ದು ಅಥವಾ ಅವರ ಮನೆಯಲ್ಲಿ ಆದದ್ದು. ಅಂದಿನ ವೈದ್ಯರು ರಾಮಣ್ಣ ಶೆಟ್ಟರ ಕಾರಲ್ಲಿ ಮನೆಗೇ ಹೋಗಿ ಹೆರಿಗೆ ಮಾಡಿಸುತ್ತಿದ್ದರು.
ಐದಾರು ಬೆಡ್ ಗಳ ವ್ಯವಸ್ಥೆ ಇತ್ತು. ಬೇರೆ ಬೇರೆ ಕಾಯಿಲೆಯ ರೋಗಿಗಳು, ಹೆರಿಗೆಗಾಗಿ ಇಲ್ಲೇ ದಾಖಲಾಗುತ್ತಿದ್ದರು.ಸಾಕಷ್ಟು ಸಂಖ್ಯೆಯ ಸಿಬ್ಬಂದಿಗಳೂ ಇದ್ದುದರಿಂದ ಈ ಆಸ್ಪತ್ರೆ 247 ಸೇವೆಯ ಬಡವರ ಆಸ್ಪತ್ರೆಯಾಗಿತ್ತು. ಶಿರ್ತಾಡಿ, ವಾಲ್ಪಾಡಿ, ಅಳಿಯೂರು, ದರೆಗುಡ್ಡೆ, ಮಾಂಟ್ರಾಡಿ, ಬೋರುಗುಡ್ಡೆ, ಪೆರಾಡಿ, ಸಾವ್ಯ, ಕಾಶಿಪಟ್ಣ, ಪಡುಕೊಣಾಜೆ,ಮೂಡುಕೊಣಾಜೆ, ಮಕ್ಕಿ, ಮರೋಡಿ, ದಡ್ಡಾಲ್ಪಲ್ಕೆ, ಆನೆಗುಡ್ಡೆ ಹೀಗೆ ಇನ್ನೂ ಕೆಲವು ಊರುಗಳ ಬಡರೋಗಿಗಳಿಗಿದ್ದದ್ದು ಇದೇ ಸರಕಾರಿ ಆಸ್ಪತ್ರೆ. ಅದೆಷ್ಟು ರಾತ್ರಿ ಹೋಗಿ ವೈದ್ಯರ, ನರ್ಸ್ ಗಳ ಕ್ವಾಟ್ರಸ್ ಗೆ ಹೋಗಿ ಬೆಲ್ ಮಾಡಿದರೂ ತಕ್ಷಣ ಎದ್ದು ಬಂದು ರೋಗಿಗಳ ತಪಾಸಣೆ ಮತ್ತು ಮದ್ದು ನೀಡುತ್ತಿದ್ದುದರಿಂದಲೇ ಇಂದು ಆ ವೈದ್ಯರ ಹೆಸರು ನೆನಪಿನಲ್ಲುಳಿಯಲು ಕಾರಣ. ಶಿರ್ತಾಡಿಯ ಶಾಲಾ ಮಕ್ಕಳಿಗೆ, ಅಳಿಯೂರಿನ ಶಾಲಾ ಮಕ್ಕಳಿಗೆ, ಪಕ್ಕದ ಊರಿನ ಶಾಲಾ ಮಕ್ಕಳಿಗೆ ಏನಾದರೂ ಆದರೆ ಇದೇ ಆಸ್ಪತ್ರೆಯ ಮದ್ದು ಬೇಕಿತ್ತು. ಮರುದಿನ ರಜಾ ಅರ್ಜಿಯ ಜೊತೆಗೆ ಈ ಆಸ್ಪತ್ರೆಯ ವೈದ್ಯರು ಬರೆದ ಮದ್ದಿನ ಚೀಟಿ ಕೂಡಾ ಅಗತ್ಯವಿತ್ತು! ಇಷ್ಟೆಲ್ಲಾ ಇತಿಹಾಸವಿರುವ ಈ ಆಸ್ಪತ್ರೆಯ ಅವಸ್ಥೆ ಈಗ ಯಾಕೋ ಸರಿಯಿಲ್ಲ. ಅದೆಷ್ಟೋ ಜನರ ಪಾಲಿನ ಆಶಾಕಿರಣವಾಗಿದ್ದ ಆಸ್ಪತ್ರೆಗೇ ಈಗ ಅದ್ಯಾವುದೋ ಕಾಯಿಲೆ ಬಂದಂತಾಗಿದೆ.ಹಳೆಯ ಸುಂದರವಾದ ಕಟ್ಟಡದ ಕೆಲವು ಕೊಠಡಿಗಳು, ಬಾಗಿಲುಗಳಿನ್ನೂ ಗಟ್ಟಿಯಾಗಿದೆ.ಆದರೆ ಆಸ್ಪತ್ರೆಯ ಸುತ್ತಮುತ್ತವೇ ಅನಾರೋಗ್ಯದ ದರ್ಶನವಾಗುತ್ತಿದೆ. ಇದಕ್ಕೆಲ್ಲಾ ಕಾರಣ ಇಲ್ಲಿಗೊಬ್ಬರು ಪರ್ಮನೆಂಟಾದ ವೈದ್ಯರಿಲ್ಲ, ಒಬ್ಬರೇ ಸ್ಟಾಫ್ ನರ್ಸ್ ಇರೋದು. ಸಿಬ್ಬಂದಿಗಳಿದ್ದರೂ ಅವರಿಗೆ ಫೀಲ್ಡ್ ವರ್ಕ್ ಜವಾಬ್ದಾರಿ. ಉಳಿದ ಸಿಬ್ಬಂದಿಗಳಿದ್ದಾರೆ- ಅವರೇ ಈಗಿನ ವೈದ್ಯರು! ಅಂದರೆ ಮದ್ದಿಗೆಂದು ಬರುವ ರೋಹಿಗಳನ್ನು ಚೆನ್ನಾಗಿ ವಿಚಾರಿಸುತ್ತಾರೆ- ಮದ್ದು ಕೊಡಲು ವೈದ್ಯರನ್ನೇ ಸಂಪರ್ಕಿಸಬೇಕಾಗುತ್ತದೆ. ಇಲ್ಲಿ 24 7 ಸೇವೆ ಬೇಕು, ಸುತ್ತಮುತ್ತಲಿನ ಜನರಿಗೆ ಇದು ಕೇಂದ್ರಾಸ್ಪತ್ರೆಯಾಗಬೇಕು, ಖಾಯಂ ವೈದ್ಯರು ಬೇಕು ಅಂತ ಹೋರಾಟಗಾರ ಸುದತ್ತ ಜೈನ್ ಶಿರ್ತಾಡಿ ಅವರು ಕೆಲವು ದಿನ ಉಪವಾಸ ಸತ್ಯಾಗ್ರಹ ಮಾಡಿದ್ದರು. ಅಂದಿನ ಜನಪ್ರತಿನಿಧಿಗಳು ,ಇಲಾಖೆಯ ಪ್ರಮುಖರು ಬಂದು ” ಮುಂದಕ್ಕೆ ಮಾಡೋಣ ” ಅಂತ ಬೊಂಡ ಕುಡಿಸಿ ಉಪವಾಸವನ್ನು ಹಿಂತೆಗೆಸಿದ್ದರು.
ಈಗ ಮತ್ತೆ ಅದೇ ಅವಸ್ಥೆ. ಒಬ್ಬರೇ ವೈದ್ಯರು. ಅದು ಕೂಡಾ ವಾರದಲ್ಲಿ ಒಂದೇ ದಿನ ಬರೋದು. ಬೆಳುವಾಯಿಯ ವೈದ್ಯರಾಗಿರುವ ಡಾ.ಭರತ್ ಅವರಿಗೆ ಈ ಆಸ್ಪತ್ರೆಯ ಚಾರ್ಜ್.ಅವರಿಗೆ ಇನ್ನೂ ಕೆಲವು ಕಡೆಯ ಚಾರ್ಜ್ ಇದೆ.ಹಾಗಾಗಿ ವಾರದಲ್ಲಿ ಒಂದು ದಿನ ಬಂದು ಹೋಗುತ್ತಾರೆ.ಹನ್ನೆರಡಕ್ಕೂ ಅಧಿಕ ಗ್ರಾಮಗಳನ್ನು ಹೊಂದಿರುವ ಈ ಆಸ್ಪತ್ರೆಗೆ ವಾರದಲ್ಲಿ ಒಂದು ದಿನ ವೈದ್ಯರು ಬಂದರೆ ಸಾಕಾ ?
ಇಲ್ಲಿ ದಿನಂಪ್ರತಿ ದೊಡ್ಡ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಮಧ್ಯಾಹ್ನದ ವೇಳೆಗೇ ಕೆಲವೊಮ್ಮೆ ರೋಗಿಗಳ ಸಂಖ್ಯೆ ತೊಂಭತ್ತು ದಾಟುತ್ತದೆ. ಆದರೆ ಮಧ್ಯಾಹ್ನದ ಮೇಲೆ ಬಾಗಿಲು ಮುಚ್ಚುತ್ತದೆ.
ವೈದ್ಯರಿಲ್ಲ, ಸಿಬ್ಬಂದಿಗಳಿಲ್ಲ ಎನ್ನುವ ಸಮಸ್ಯೆಯನ್ನು ಎದುರಿಸುತ್ತಿರುವ ಶಿರ್ತಾಡಿಯ ಗವರ್ನಮೆಂಟ್ ಆಸ್ಪತ್ರೆಗೊಂದು ಒಳ್ಳೆಯ ಚಿಕಿತ್ಸೆ ಬೇಕಿದೆ. ಈಗ ಆರೋಗ್ಯ ಸಚಿವರಾಗಿರುವ ಯು.ಟಿ.ಖಾದರ್ ನಮ್ಮ ಜಿಲ್ಲೆಯವರೇ. ಶಿರ್ತಾಡಿಯ ಕೆಲವು ಪ್ರಮುಖರಿಗೆ ಅವರ ಆತ್ಮೀಯತೆ ಇದೆ. ಈ ಆಸ್ಪತ್ರೆಯ ಬಗ್ಗೆ ಅವರಲ್ಲಿ ಮನವರಿಕೆ ಮಾಡಿ ಖಾಯಂ ವೈದ್ಯರು, ಸಿಬ್ಬಂದಿಗಳನ್ನು ನೇಮಕಗೊಳಿಸಿ ಮತ್ತೆ ಹಿಂದಿನಂತೆ 24*7 ಆಸ್ಪತ್ರೆಯನ್ನಾಗಿ ಮಾಡಲು ಇದು ಸಕಾಲ.






