ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ಮಿಜಾರು ಶಾಲಾ ಮೈದಾನ ( ಬಂಗಬೆಟ್ಟು ಶಾಲಾ ಮೈದಾನ) ದಲ್ಲಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದು ಈ ಕಟ್ಟಡ ನಿರ್ಮಾಣಕ್ಕೆ ತೋಡಾರು- ಮಿಜಾರು ಗ್ರಾಮದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಮಿಜಾರು ಶಾಲೆ( ಬಂಗಬೆಟ್ಟು ಶಾಲೆ)ಯ ಹೆಸರಿನಲ್ಲಿ 2.95 ಎಕರೆ ಜಾಗವಿದ್ದು ಅದರಲ್ಲಿ 95 ಸೆನ್ಸ್ ಜಾಗವನ್ನು ಮಿಜಾರಿನ ಸರಕಾರಿ ಹೈಸ್ಕೂಲ್, ಪದವಿಪೂರ್ವ ಕಾಲೇಜು ಆಗುವಾಗ ಬಿಟ್ಟುಕೊಡಲಾಗಿತ್ತು. ಉಳಿದ ಎರಡು ಎಕರೆ ಜಾಗದಲ್ಲಿ ಆಟದ ಬಯಲು ಇದೆ. ಈಗ ಮಿಜಾರು ಕೆ.ಪಿ.ಎಸ್.ಶಾಲೆಯೆಂದು ಬದಲಾಗಿರುವುದರಿಂದ ಮತ್ತೆ ನಾಲ್ಕು ಕೊಠಡಿಗಳು ಮಂಜೂರಾಗಿದೆ. ಆ ಕೊಠಡಿಗಳನ್ನು ಆಟದ ಬಯಲಿನಲ್ಲಿ ನಿರ್ಮಾಣ ಮಾಡಲು ಹೊರಟಿದ್ದಾರೆ.ಇಲ್ಲಿ ಹೊಸ ಕೊಠಡಿಗಳು ಆಟದ ಮೈದಾನ ಮಾಯವಾಗುತ್ತದೆ, ಇದು ಹಲವಾರು ಜಿಲ್ಲಾ, ರಾಜ್ಯಮಟ್ಟದ ಕ್ರೂಡಾಕೂಟಗಳು ನಡೆದ ಮೈದಾನ.ಈ ಮೈದಾನ ಶಾಲಾ ಮಕ್ಕಳ ಆಟೋಟ ಸ್ಪರ್ಧೆಗಳಿಗೆ ಸಿಗುವಂತಿರಬೇಕು, ಈ ಆಟದ ಮೈದಾನದಲ್ಲಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


ಹಿಂದೊಮ್ಮೆ ಈ ಹೊಸಕೊಠಡಿಗಳ ಗುದ್ದಲಿಪೂಜೆ ಆದ ವಿಷಯ ತಿಳಿದು ಗ್ರಾಮಸ್ಥರು ಪ್ರತಿಭಟಿಸಿ ಪತ್ರಿಕಾಗೋಷ್ಠಿ ಮಾಡಿ ಶಾಲೆಯ ಇತಿಹಾಸ ಮತ್ತು ತಮ್ಮ ಬೇಡಿಕೆಗಳನ್ನು ತಿಳಿಸಿದ್ದರು.
ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಮ್ಮ ಮನವಿ ಸಲ್ಲಿಸಿದ್ದ ಗ್ರಾಮಸ್ಥರು ಇಂದು ಮತ್ತೊಮ್ಮೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ತಾ.ಪಂ.ಮಾಜಿ ಸದಸ್ಯ ಎಂ.ಜಿ.ಮುಹಮ್ಮದ್, ಗ್ರಾ.ಪಂ.ಮಾಜಿ ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಎಂ.ಎ.ಅಶ್ರಫ್, ಪ್ರಮುಖರಾದ ಹಫೀಝ್ ತೋಡಾರ್, ಇಸ್ಮಾಯಿಲ್, ರಿಝ್ವಾನ್ ಮತ್ತಿತರರು ಇದ್ದರು.






