ಶಿರ್ತಾಡಿಯ ಮೊದಲ ವೈದ್ಯ ಡಾ.ಕೃಷ್ಣರಾಜ್ ಅವರಿಗೆ ವೈದ್ಯರ ದಿನದಂದು ಸನ್ಮಾನ

Picture of Namma Bedra

Namma Bedra

Bureau Report

ಡಾ.ಕೆ.ಕೃಷ್ಣರಾಜ್ ಭಟ್. ಬಹುಶಃ ಶಿರ್ತಾಡಿಯಲ್ಲಿ ಮೊದಲ ವೈದ್ಯರಾದವರು ಮತ್ತು ಶಿರ್ತಾಡಿಯಲ್ಲಿ ಮೊದಲ ಖಾಸಗಿ ವೈದ್ಯರಾಗಿ ಕ್ಲಿನಿಕ್ ತೆರೆದವರು.ನವಚೇತನ ಕ್ಲಿನಿಕ್ ಎಂಬ ಖಾಸಗಿ ಕ್ಲಿನಿಕ್ ನಿಂದ ಶಿರ್ತಾಡಿ, ಮೂಡುಬಿದಿರೆ ಆಸುಪಾಸಿನ ಜನರಲ್ಲಿ ಮನೆಮಾತಾಗಿರುವವರು.
ಹಿಂದೆಲ್ಲಾ ‘ ಒಲ್ತ ಮರ್ದ್’? ಎನ್ನುವ ಪ್ರಶ್ನೆಗೆ ಸಿಗುತ್ತಿದ್ದ ಉತ್ತರ ‘ಕೃಷ್ಣರಾಜೆರಲ್ತ್’ ..!
ನಾಲ್ಕು ದಶಕಗಳ ಹಿಂದೆ ಈ ಭಾಗದ ಜನರಿಗೆ ಸರಕಾರಿ ಆಸ್ಪತ್ರೆಯೇ ಎಲ್ಲದಕ್ಕೂ ಒಂದೇ ಆಸ್ಪತ್ರೆ. ಡಾ.ಕಾಮತ್, ಡಾ.ಬಿ.ಬಿ.ಶೆಣೈ ಮುಂತಾದವರು ಇಲ್ಲಿನ ಸರಕಾರಿ ವೈದ್ಯರಾಗಿ ಶಾಶ್ವತವಾಗಿ ಜನರಲ್ಲಿ ಹೆಸರು ನೆನಪಿಟ್ಟುಕೊಳ್ಳುವಂತಹ ಸೇವೆ ನೀಡಿದವರು.
‌ ಈ ನಡುವೆ ಶಿರ್ತಾಡಿಯಲ್ಲೊಂದು ಖಾಸಗಿ ಕ್ಲಿನಿಕ್ ತೆರೆದವರು ಡಾ.ಕೃಷ್ಣರಾಜ್.ಅಲ್ಲಿಯವರೆಗೆ ಶಿರ್ತಾಡಿಯಲ್ಲಿ ಪ್ರೈವೇಟ್ ಅಂತ ಇರಲಿಲ್ಲ.ಏನಿದ್ದರೂ ಬೆದ್ರದ ಮೋನಾಲ್ವೆರಾಡೆ ಅಥವಾ ಜಿ.ವಿ.ಪೈ ಗೆ ಹೋಗಬೇಕಿತ್ತು.


ಸಾಕಷ್ಟು ವಾಹನಗಳ ವ್ಯವಸ್ಥೆ ಇಲ್ಲದ ಕಾಲದಲ್ಲಿ ರಾತ್ರಿ ಏನಾದರೂ ಅನಾರೋಗ್ಯ ಕಂಡಲ್ಲಿ, ಹೆರಿಗೆನೋವು ಕಾಣಿಸಿದ್ದಲ್ಲಿ ಇದೇ ಕೃಷ್ಣರಾಜರ ಮನೆಯ ಬಾಗಿಲು ತಟ್ಟಬೇಕಿತ್ತು.ಅದೆಷ್ಟು ರಾತ್ರಿಯಾದರೂ ತನ್ನದೊಂದು ಬ್ಯಾಗ್ ಹಿಡಿದುಕೊಂಡು ರೆಡಿಯಾಗುತ್ತಿದ್ದರವರು.ಹೊರಗಡೆ ರಾಮಣ್ಣ ಶೆಟ್ಟರ 4140 ನಂಬರಿನ ಅಂಬಾಸಿಡರ್ ಕಾರೂ ರೆಡಿಯಾಗುತ್ತಿತ್ತು.
ಸದಾ ನಗುಮೊಗ, ಮಿತಭಾಷಿಯಾಗಿ ರೋಗಿಗಳನ್ನು ಉಪಚರಿಸುತ್ತಾ ಅದೆಷ್ಟೋ ರೋಗಿಗಳ ರೋಗಗಳನ್ನು ಗುಣಪಡಿಸಿದವರು ಡಾ.ಕೃಷ್ಣರಾಜ್.
ಈಗಲೂ ಕೆಲವರಿಗೆ ಅದೆಷ್ಟೇ ದೂರದಲ್ಲಿದ್ದರೂ ಕೃಷ್ಣರಾಜರದ್ದೇ ಮದ್ದಾಗಬೇಕು.ಇನ್ನು ಕೆಲವರು ಇವರ ಬಳಿ ಬಂದು ಟೆಸ್ಟ್ ಮಾಡಿಸಿದರೂ ಸಾಕು- ಕಾಯಿಲೆ ಗುಣವಾಗುತ್ತದೆ, ಅದು ಅವರ ಕೈಗುಣ.
ನಿಷ್ಠೆ, ಪ್ರಾಮಾಣಿಕತೆಯಿಂದ ತನ್ನ ವೃತ್ತಿಧರ್ಮವನ್ನು ಕಾಪಾಡುತ್ತಾ ಬಂದಿರುವ ಕೃಷ್ಣರಾಜ್ ಅವರ ಸೇವೆಯನ್ನು ಪರಿಗಣಿಸಿ ಮೊನ್ನೆ ನಡೆದ ವೈದ್ಯರ ದಿನಾಚರಣೆಯಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವತಿಯಿಂದ ಸನ್ಮಾನಿಸಿ ಗೌರವಿಸಿದ್ದಾರೆ.ನಮಗೆಲ್ಲಾ ಅದು ತುಂಬಾ ಸಂತೋಷದ ವಿಷಯ. ಅವರಿಗೆ ಅಭಿನಂದನೆಗಳು.
ಅಂದಹಾಗೆ, ಅವರು ಪ್ರಚಾರದಲ್ಲಿ ಒಂತೆ ಪಿರ. ಅವರ ಸ್ಟೇಟಸ್ ನಿಂದ ಫೊಟೊ ಕದ್ದು ಈ ವರದಿ ಮಾಡಿದ್ದೇನೆ.
ನಮ್ಮೂರ ಹೆಮ್ಮೆಯ ವೈದ್ಯರಿಗೆ ಮತ್ತೊಮ್ಮೆ ಅಭಿನಂದನೆಗಳು.
– ಅಶ್ರಫ್ ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top