ಬೆಂಗಳೂರಿನಲ್ಲಿ ಆಗಸ್ಟ್ 9 ರಂದು ಜೈ ತುಲುನಾಡ್ ಬೆಂಗಳೂರು (ರಿ.) ವತಿಯಿಂದ “ತುಲುನಾಡ ಆಟಿ-2026”.

Picture of Namma Bedra

Namma Bedra

Bureau Report

ಜೈ ತುಲುನಾಡ್ ಬೆಂಗಳೂರು (ರಿ.) ಸಂಘಟನೆಯ ನೇತೃತ್ವದಲ್ಲಿ 2026ರ ಆಗಸ್ಟ್ 9 ರಂದು (ಭಾನುವಾರ) ಬೆಂಗಳೂರಿನ ಬಿಳೇಕಹಳ್ಳಿಯಲ್ಲಿರುವ ಮುಲ್ಕಿ ಸುಂದರ ರಾಮ್ ಶೆಟ್ಟಿ ಸಭಾಂಗಣ (MSRS Hall) ದಲ್ಲಿ “ತುಲುನಾಡ ಆಟಿ-2026” ಎಂಬ ತುಲುನಾಡಿನ ಆಟಿಯ ದಿನಗಳನ್ನು ನೆನಪಿಸುವ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ.
ಆ ದಿನ ಬೆಳಗ್ಗೆ 7:15ಕ್ಕೆ ಬಿಳೇಕಹಳ್ಳಿಯ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಬೆಳಿಗ್ಗೆ 7:30ಕ್ಕೆ ಅಯ್ಯಪ್ಪ ಸನ್ನಿಧಾನದಿಂದ ಎಂ.ಎಸ್.ಆರ್.ಎಸ್ ಸಭಾಂಗಣದವರೆಗೆ “ತುಲು ದಿಬ್ಬಣ” ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 8:15ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಂಡು ಸಭಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 8:45ಕ್ಕೆ ಅತಿಥಿಗಳ ಸಮ್ಮುಖದಲ್ಲಿ ವೇದಿಕೆಯಲ್ಲಿ ಕುಣಿತ ಭಜನೆ ನಡೆಯಲಿದೆ.
ಬೆಳಿಗ್ಗೆ 10:00 ರಿಂದ ಸಂಜೆ 4:30 ರವರೆಗೆ ಭರತನಾಟ್ಯ, ತುಲು ಜಾನಪದ ನಲಿಕೆ, ಪದರಂಗಿತ, ತುಲುನಾಡ ಆಟಿ ಕಳೆಂಜ ನಲಿಕೆ, ಚೆಂಡೆ ನಲಿಕೆ ಮೊದಲಾದ ಸಾಂಸ್ಕೃತಿಕ ವೈವಿಧ್ಯಗಳು ಜರುಗಲಿವೆ. ಯಶಸ್ವಿ ಡ್ಯಾನ್ಸ್ ಗ್ರೂಪ್ ಕುಡ್ಲ ಇವರ ತುಲು ಜಾನಪದ ನಲಿಕೆ ವಿಶೇಷ ಆಕರ್ಷಣೆಯಾಗಲಿದೆ.
ಸಂಪನ್ಮೂಲ ವ್ಯಕ್ತಿಗಳಿಂದ “ತುಲು ರಾಜ್ಯ ಬಾಸೆ ಓಡೆಗ್ ಎತ್ತ್ಂಡ್?” ಎಂಬುವುದರ ಬಗ್ಗೆ ವಿಚಾರ ಸಂಕಿರಣ ಹಾಗೂ “ಆಟಿದ ಪೊಲಬು” ವಿಷಯದ ಕುರಿತು ಉಪನ್ಯಾಸ ನಡೆಯಲಿದೆ.
ಹಾಗೆಯೇ ಬೆಳಿಗ್ಗೆ 11:00 ಗಂಟೆಗೆ ಯಕ್ಷ ತರಂಗ ಬೆಂಗಳೂರು (ರಿ.) ಮಕ್ಕಳಿಂದ “ಕೋಟಿ ಚೆನ್ನಯ” ಯಕ್ಷಗಾನ ಪ್ರಸಂಗ ನಡೆಯಲಿದೆ.
ದಿನವಿಡೀ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಬಗೆಯ ಕ್ರೀಡೆಗಳು ಇರಲಿವೆ. ಹಾಗೆಯೇ ವಿಶೇಷವಾಗಿ ವಿವಾಹಿತ ಜೋಡಿಗಳಿಗೆಂದೇ “ಜೋಡಿ ಪಕ್ಕಿಲು” ಎಂಬ ಆಕರ್ಷಕ ಕ್ರೀಡೆ ಇರಲಿದೆ. ಹಾಗೆಯೇ ಮಹಿಳಾ ಹಾಗೂ ಪುರುಷರ ವಿಭಾಗದಲ್ಲಿ “ಬಲ್ಲ್ ಬುಡಯೆ” ಎಂಬ ಶೀರ್ಷಿಕೆಯೊಂದಿಗೆ ತುಲುನಾಡಿನ ಜನರ ನೆಚ್ಚಿನ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿದೆ.
ಮಧ್ಯಾಹ್ನ ಆಟಿಯ ವಿಶೇಷ ಊಟದ ವ್ಯವಸ್ಥೆ ಇರಲಿದೆ.
ಸಂಜೆ 4:30ಕ್ಕೆ ಆಯ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವಿರುತ್ತದೆ. ಇದೇ ಸಂದರ್ಭ ತುಲು ಲಿಪಿ ಪರೀಕ್ಷೆಯ ಪ್ರಮಾಣ ಪತ್ರ ವಿತರಣೆ ಹಾಗೂ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು ಕಾರ್ಯದರ್ಶಿ ಅಕ್ಷಯ್ ಆಚಾರ್ಯ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ತುಲುನಾಡಿಗರಿಗಾಗಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಸಮಸ್ತ ತುಲುವರ ಸಹಕಾರವನ್ನು ಕೋರುತ್ತಿದ್ದೇವೆ ಎಂದು ಜೈ ತುಲುನಾಡ್ ಬೆಂಗಳೂರು (ರಿ.) ಸಂಸ್ಥೆಯ ಗೌರವ ಸಲಹೆಗಾರರಾದ ನಿಧೀಶ್ ಶೆಟ್ಟಿ ತಿಳಿಸಿದರು. ಸಂಘಟನೆಯ ಅಧ್ಯಕ್ಷ ವಿನಯ್ ಮಣಿಯಾನ‌ ಮಾತನಾಡಿ “ಉದ್ಯೋಗ ವ್ಯವಹಾರದ ನಿಮಿತ್ತ ದೂರದ ಬೆಂಗಳೂರಿನಲ್ಲಿ ನೆಲೆಸಿರುವ ತುಲುನಾಡಿನ ಎಲ್ಲಾ ಜನತೆಗೆ ತಮ್ಮ ಊರಿನ ಸೊಗಡನ್ನು ಹಾಗೂ ವಿವಿಧ ಖಾದ್ಯಗಳನ್ನು ಆನಂದಿಸಲು ಇದೊಂದು ಉತ್ತಮ ಅವಕಾಶ. ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top