ನಿಡ್ಡೋಡಿಯ ಕೋಳಿ ಫಾರ್ಮ್ ಒಂದರಿಂದ ಉತ್ಪತ್ತಿಯಾಗುತ್ತಿರುವ ಕಿಲೆಂಜಿ(ನೊಣ)ಗಳ ಹಾವಳಿಯಿಂದ ಇಡೀ ಗ್ರಾಮದ ಜನರಿಗೆ ತೊಂದರೆಯಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಮೌನ ವಹಿಸಿರುವುದು ಗ್ರಾಮಸ್ಥರ ಮತ್ತೊಂದು ಆಕ್ರೋಶಕ್ಕೆ ಕಾರಣವಾಗಿದೆ.
ಈ ದುರ್ನಾತ ಮತ್ತು ರಾಶಿ ರಾಶಿ ಕಿಲೆಂಜಿಗಳಿಂದ ಊರಿಗೆ ಉಪದ್ರ ನೀಡುತ್ತಿರುವ ಬೃಹತ್ ಕೋಳಿ ಫಾರ್ಮು ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡ್ಡೋಡಿಯ ಅಮ್ಮಿಕೋಡಿ ಎಂಬಲ್ಲಿದೆ.
ಒಂದೂವರೆ ವರ್ಷದ ಹಿಂದೆ ಇಲ್ಲಿನ ನಾಲ್ಕೂವರೆ ಎಕರೆ ಜಾಗವನ್ನು ಗೋವಾ ಮೂಲದ ಧರ್ಮಗುರುವೊಬ್ಬರು ಸ್ಥಳೀಯರಿಂದ ಖರೀದಿಸಿದ್ದರು. ವೃದ್ಧಾಶ್ರಮ ನಿರ್ಮಾಣ ಮಾಡಲೆಂದು ಜಾಗ ಖರೀದಿಸಿದ್ದು ಅಲ್ಲಿ ಯಾರೋ ಏಜೆಂಟರ ಮೂಲಕ ಆ ಜಾಗವನ್ನು ಹೊರ ರಾಜ್ಯದವರಿಗೆ ಲೀಸ್ ನೀಡಿ ಬೃಹತ್ ಕೋಳಿ ಸಾಕಾಣಿಕೆ ಕೇಂದ್ರವನ್ನು ಸ್ಥಾಪಿಸಲಾಯಿತು. ಅದೀಗ ಬಹಳಷ್ಟು ಎತ್ತರಕ್ಕೆ ಬೆಳೆದಿದೆ.

ಆರಂಭದಲ್ಲೇ ಸ್ಥಳೀಯರ ವಿರೋಧವಿದ್ದರೂ ಅಂದಿನ ಪಿಡಿಒ ಅವರು ಕೋಳಿ ಸಾಕಾಣಿಕೆ ಕೇಂದ್ರಕ್ಕೆ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ನೀಡಿದ್ದು ಆ ಸರ್ಟಿಫಿಕೇಟೇ ಇಂದು ಊರಿಗೆ ಉಪದ್ರವಾಗಲು ಕಾರಣವೆನ್ನಲಾಗಿದೆ.
ಕೋಳಿ ಫಾರ್ಮಿನಿಂದ ದುರ್ನಾತ, ನೊಣಗಳ ರಾಶಿ ರಾಶಿ ಊರವರ ನಿದ್ದೆಗೆಡಿಸಿದೆ.ಸರಿಯಾಗಿ ಊಟ ಮಾಡಲು ಆಗದೆ, ನಿದ್ದೆ ಮಾಡಲೂ ಆಗದೆ ಊರಿಗೆ ಸಮಸ್ಯೆ ನೀಡುತ್ತಿರುವ ಈ ಫಾರ್ಮ್ ವಿರುದ್ಧ ಸಂಬಂಧಪಟ್ಟ ಇಲಾಖಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಿಲ್ಲವೇಕೆ ? ಎನ್ನುವ ಪ್ರಶ್ನೆಯೆದ್ದಿದೆ.
ಕಲ್ಲಮುಂಡ್ಕೂರು ಪಿಡಿಒ ಅವರು ನಿನ್ನೆ ಈ ಫಾರ್ಮ್ ಗೆ ಮೂಗಿಗೆ ಕೈ ಇಟ್ಟುಕೊಂಡೇ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದಾರೆ. ಕಿಲಂಜಿ ಫಾರ್ಮ್ ಮುಂದುವರಿಯುತ್ತದಾ ಮುಚ್ಚುತ್ತದಾ ಕಾದು ನೋಡಬೇಕಿದೆ.







