ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್, ಮೂಡುಬಿದಿರೆ ವತಿಯಿಂದ 63 ನೇ ವರ್ಷದ ಮೂಡುಬಿದಿರೆ ಶ್ರೀ ಗಣೇಶೋತ್ಸವವು ಸೆ.14 ರಿಂದ 18 ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ನಾರಾಯಣ ಪಿ.ಎಂ.ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿದೆ, ಮಕ್ಕಳಿಗೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆದಿದೆ,ಎಲ್ಲಾ ಕಾರ್ಯಕ್ರಮಗಳನ್ನೂ ಅಚ್ಚುಕಟ್ಟಾಗಿ, ಸಮಯಕ್ಕೆ ಸರಿಯಾಗಿ ಮಾಡಿ ರಾಜ್ಯದಲ್ಲೇ ಮಾದರಿ ಉತ್ಸವವನ್ನಾಗಿ ಮಾಡುವ ಉದ್ದೇಶ ನಮ್ಮದು ಎಂದು ಅವರು ಹೇಳಿದರು.
ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ, ಪ್ರತಿದಿನ ಬೆಳಿಗ್ಗೆ- ಸಂಜೆ ಉಪಹಾರ,ಮಧ್ಯಾಹ್ನ ಅನ್ನ ಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿದೆ, ಐದನೇ ದಿನ 7-30 ಕ್ಕೆ ವಿಸರ್ಜನಾ ಪೂಜೆ ಮಾಡಿ 8 ಗಂಟೆಗೆ ವಿಸರ್ಜನಾ ಮೆರವಣಿಗೆ ಪ್ರಾರಂಭಿಸಿ ಹನ್ನೆರಡು ಗಂಟೆಯೊಳಗೆ ವಿಸರ್ಜನೆ ಮಾಡಲಿದ್ದೇವೆ ಎಂದ ಅವರು ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡುವ ಮೂಲಕ ಸಮಯಕ್ಕೆ ಮಹತ್ವವನ್ನು ನೀಡಲಿದ್ದೇವೆ ಎಂದರು.
ಪ್ರತಿದಿನ ಸುಮಾರು ಹತ್ತು ಸಾವಿರದಷ್ಟು ಜನರು ಭಾಗವಹಿಸುವ ನಿರೀಕ್ಷೆಯಿದೆ,ಸರ್ವಧರ್ಮೀಯರೂ ಪಾಲ್ಗೊಳ್ಳುವ ಉತ್ಸವ ಇದಾಗಿದ್ದು ಮುಸ್ಲಿಂ ಮುಖಂಡರು ಈಗಾಗಲೇ 50 ಸಾವಿರ ರೂ.ದೇಣಿಗೆ ನೀಡಿದ್ದಾರೆ, ಸರ್ವರೂ ಸಹಕಾರ ನೀಡುತ್ತಾ ಬಂದಿದ್ದಾರೆ, ಈ ಪರಂಪರೆ ಮುಂದುವರಿಯಬೇಕೆಂದು ಅವರು ಹೇಳಿದರು.
ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ, ಉಪಾಧ್ಯಕ್ಷ ರಾಜಾರಾಮ್ ನಾಗರಕಟ್ಟೆ,ಕೋಶಾಧಿಕಾರಿ ಚೇತನ್ ಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ಕೆ.ಶ್ರೀಪತಿ ಭಟ್,ಕುಲದೀಪ ಎಂ,ಸಾಂಸ್ಕೃತಿಕ ಸ್ಪರ್ಧೆ ಮತ್ತು ಕಾರ್ಯಕ್ರಮಗಳ ಸಂಚಾಲಕರಾದ ಯತಿರಾಜ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.








































