ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಬೆಳುವಾಯಿಯ ಸ್ಪೂರ್ತಿ ಭಿನ್ನ ಸಾಮರ್ಥ್ಯದ ಶಾಲೆಯ ಮಕ್ಕಳೊಂದಿಗೆ ಆಚರಿಸಲಾಯಿತು.
ನ್ಯಾಯವಾದಿ, ಎಂ.ಸಿ.ಎಸ್.ಬ್ಯಾಂಕ್ ಅಧ್ಯಕ್ಷರಾದ ಎಂ.ಬಾಹುಬಲಿ ಪ್ರಸಾದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ‘ ಮೋದಿ ರಾಷ್ಟ್ರನಾಯಕ,ಇಡೀ ವಿಶ್ವದ ದೇಶಗಳು ಅವರ ಕಾರ್ಯ ಶೈಲಿ,ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ,ಅವರಿಂದಾಗಿ ಭಾರತ ವಿಶ್ವಮಟ್ಟದಲ್ಲೀಗ ಗುರುತಿಸಿಕೊಳ್ಳುವಂತಾಗಿದೆ’ ಎಂದರಲ್ಲದೆ ಪ್ರಧಾನಿಯಾದ ಬಳಿಕ ಮೋದಿಯವರು ಹಮ್ಮಿಕೊಂಡ ಯೋಜನೆಗಳು,ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರಾದ ಚಾವಡಿಮನೆ ಡಾ.ಜಗನ್ನಾಥ ಶೆಟ್ಟಿ ಅವರು ‘ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕತೆಯ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದರೆ ಪ್ರಧಾನಿ ಮೋದಿಯವರು ಭಾರತದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದವರು, ವಿಶ್ವನಾಯಕ ಮೋದಿಯವರ ಜನ್ಮದಿನಾಚರಣೆಯನ್ನು ಭಿನ್ನ ಸಾಮರ್ಥ್ಯದ ಮಕ್ಕಳೊಂದಿಗೆ ಆಚರಿಸಿಕೊಳ್ಳಲು ಸಂಸ್ಥೆಗೆ ಹೆಮ್ಮೆಯಾಗುತ್ತಿದೆ, ಭಿನ್ನ ಸಾಮರ್ಥದ ಮಕ್ಕಳನ್ನು ಬೆಳೆಸಿ ವಿದ್ಯಾಭ್ಯಾಸ ಕೊಡುವುದು ಸುಲಭದ ಕೆಲಸವಲ್ಲ, ಆ ನಿಟ್ಟಿನಲ್ಲಿ ಸ್ಪೂರ್ತಿ ಸಂಸ್ಥೆಯ ಅಧ್ಯಕ್ಷರು, ಶಿಕ್ಷಕರ ಶ್ರಮ ಶ್ಲಾಘನೀಯ,ಇಂತಹ ಶಾಲೆಗಳ ಅಭಿವೃದ್ಧಿಗೆ ಸರ್ವರೂ ಕೈಜೋಡಿಸಬೇಕೆಂದು ಹೇಳಿದರು.
ಭಾರತ ಇಂದು ಇಷ್ಟೊಂದು ಬಲಿಷ್ಠವಾಗಲು ಮೋದಿಯವರ ದೂರದೃಷ್ಟಿ, ಯೋಜನೆಗಳೇ ಕಾರಣವೆಂದ ಅವರು ಮೋದಿಯವರು ಹಮ್ಮಿಕೊಂಡ ಜನೋಪಯೋಗಿ ಯೋಜನೆಗಳ ಕುರಿತು ವಿವರಿಸಿದರು.
ನಿಡ್ಡೋಡಿ ಜ್ಞಾನರತ್ನ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಭಾಸ್ಕರ ದೇವಸ್ಯ,ಬೆಳುವಾಯಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ರತ್ನಾಕರ ಶೆಟ್ಟಿ ಖಂಡಿಗ ಹಾಗೂ ಬೆಳುವಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬೆಳುವಾಯಿ ಭಾಸ್ಕರ ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಾಲೆಯ ಸಂಸ್ಥಾಪಕರಾದ ಪ್ರಕಾಶ್ ಜೆ.ಶೆಟ್ಟಿಗಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕಿ ಸುಚಿತಾ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.








































